ಲೈಫ್ ಮಿಷನ್ ಪ್ರಕರಣದಲ್ಲಿ ಆರೋಪಿಯಾಗಿ, ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರ್ ಅವರಿಗೆ ಜಾಮೀನು ನೀಡಲು ಗುರುವಾರ ಕೇರಳ ಹೈಕೋರ್ಟ್ ನಿರಾಕರಿಸಿದೆ. ಶಿವಶಂಕರ್ ಅವರು ಸಿಎಂ ಮತ್ತು ಸರ್ಕಾರದ ಮೇಲೆ ಪ್ರಭಾವ ಶಿವಶಂಕರ್ ಇದ್ದಾರೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ [ಎಂ ಶಿವಶಂಕರ್ ವರ್ಸಸ್ ಭಾರತ ಸರ್ಕಾರ].
ಸಾಕ್ಷಿ ತಿರುಚುವ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಶಿವಶಂಕರ್ ಅವರಿಗೆ ಇದ್ದು, ಮುಖ್ಯಮಂತ್ರಿ ಜೊತೆ ಅವರು ನಿಕಟ ಸಂಬಂಧ ಹೊಂದಿದ್ದಾರೆ ಎಂದು ನ್ಯಾಯಮೂರ್ತಿ ಎ ಬದ್ರುದ್ದೀನ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
“ಕೇರಳದ ಆಡಳಿತ ಪಕ್ಷ, ವಿಶೇಷವಾಗಿ ಮುಖ್ಯಮಂತ್ರಿ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಇರುವ ಶಿವಶಂಕರ್ ಅವರು ಸಾಕ್ಷಿ ತಿರುಚುವ ಅಥವಾ ಸಾಕ್ಷಿ ಪ್ರಭಾವಿಸುವುದನ್ನು ಊಹಿಸಬಹುದಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
“ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ 2020ರಲ್ಲಿ ಶಿವಶಂಕರ್ ಅವರಿಗೆ ಜಾಮೀನು ನೀಡಲಾಗಿತ್ತು. ಆನಂತರ ತಕ್ಷಣ 6.1.2022ರಂದು ಅವರನ್ನು ಹಿಂದಿನ ಹುದ್ದೆಗೆ ನೇಮಕ ಮಾಡಲಾಗಿತ್ತು. ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದರೂ ನಿವೃತ್ತಿ ಹೊಂದುವವರೆಗೂ ಅವರು ಪ್ರಮುಖ ಹುದ್ದೆಯಲ್ಲಿದ್ದರು. ಈ ಅಪರಾಧಕ್ಕೂ ಮುನ್ನ ಅವರು ಗಂಭೀರ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದರೂ ರಾಜ್ಯ ಸರ್ಕಾರದ ಮೇಲೆ ಅವರು ಹೊಂದಿರುವ ಪ್ರಭಾವದಿಂದಾಗಿ ಅವರ ಅಧಿಕೃತ ಸ್ಥಾನಮಾನದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ” ಎಂದು ಆದೇಶದಲ್ಲಿ ಹೇಳಲಾಗಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ತನಿಖೆಯು ಆರಂಭಿಕ ಹಂತದಲ್ಲಿದ್ದು, ಸ್ವಪ್ನಾ ಪ್ರಭಾ ಸುರೇಶ್ ಸೇರಿದಂತೆ ಹಲವು ಆರೋಪಿಗಳನ್ನು ಇನ್ನಷ್ಟೇ ಬಂಧಿಸಬೇಕಿದೆ. ಹಾಲಿ ಪ್ರಕರಣದಲ್ಲಿ ಸ್ವಪ್ನಾ ಅವರ ಪಾತ್ರ ಇದ್ದರೂ ಪ್ರಾಸಿಕ್ಯೂಷನ್ ಏತಕ್ಕಾಗಿ ಆಕೆಯ ಬಂಧನವನ್ನು ತಡ ಮಾಡುತ್ತಿದೆ ಎಂಬುದು ಗಂಭೀರ ವಿಚಾರವಾಗಿದೆ. ಈ ಕಾರಣದ ದೃಷ್ಟಿಯಿಂದಲೂ ಈ ಹಂತದಲ್ಲಿ ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗದು. ಅರ್ಜಿ ವಜಾಕ್ಕೆ ಅರ್ಹವಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.
ಲೈಫ್ (ಜೀವನೋಪಾಯ, ಒಳಗೊಳ್ಳುವಿಕೆ ಮತ್ತು ಆರ್ಥಿಕ ಸಬಲೀಕರಣ) ಯೋಜನೆಯು ಕೇರಳ ಸರ್ಕಾರದ ಗೃಹ ಭದ್ರತಾ ಯೋಜನೆಯಾಗಿದ್ದು, ರಾಜ್ಯ ವಸತಿ ಮತ್ತು ಭೂರಹಿತರಿಗೆ ಮನೆ ನಿರ್ಮಿಸಿಕೊಡುವುದಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಶಿವಶಂಕರ್ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣವನ್ನು ದಾಖಲಿಸಿತ್ತು.