ಪ್ರಜ್ವಲ್‌ಗೆ ಆಜೀವ ಸಜೆ: ಪ್ರಾಸಿಕ್ಯೂಷನ್‌ ಸಾಕ್ಷಿಗಳ ನಡುವೆ ಹೊಂದಾಣಿಕೆ ಇಲ್ಲ ಎಂದು ಲೂಥ್ರಾ ವಾದ

“ವಿದ್ಯುನ್ಮಾನ, ವೈದ್ಯಕೀಯ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಸಾಕ್ಷಿಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಓಪನ್ ಸೋರ್ಸ್‌ನಿಂದ ಪಡೆದ ಆಕ್ಷೇಪಿತ ವಿಡಿಯೊಗಳು ವಿಶ್ವಾಸಾರ್ಹವಾಗಿಲ್ಲ” ಎಂದ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ.
Prajwal Revanna & Karnataka HC
Prajwal Revanna & Karnataka HC
Published on

ಹಾಸನದ ಹೊಳೆನರಸೀಪುರ ಮತ್ತು ಬೆಂಗಳೂರಿನ ಬನಶಂಕರಿಯಲ್ಲಿ ಮನೆಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ಸಾಕ್ಷಿಗಳ ನಡುವೆ ಹೊಂದಾಣಿಕೆ ಇಲ್ಲ. ಹೀಗಾಗಿ, ಇಡೀ ಪ್ರಕರಣಕ್ಕೆ ಭದ್ರ ಅಡಿಪಾಯವೇ ಇಲ್ಲದಿರುವುದರಿಂದ ತನ್ನನ್ನು ಕಸ್ಟಡಿಯಲ್ಲಿ ಮುಂದುವರಿಸಬಾರದು ಎಂದು ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ಮನವಿ ಮಾಡಿದರು.

ವಿಶೇಷ ನ್ಯಾಯಾಲಯವು ವಿಧಿಸಿರುವ ಆಜೀವ ಪರ್ಯಂತ ಶಿಕ್ಷೆಯನ್ನು ಬದಿಗೆ ಸರಿಸುವಂತೆ ಕೋರಿ ಪ್ರಜ್ವಲ್‌ ಸಲ್ಲಿಸಿರುವ ಕ್ರಿಮಿನಲ್‌ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಎಸ್‌ ಮುದುಗಲ್‌ ಮತ್ತು ಟಿ ವೆಂಕಟೇಶ್‌ ನಾಯಕ್‌ ಅವರ ವಿಭಾಗೀಯ ಪೀಠವು ನಡೆಸಿತು.

Justices K S Mudagal And Venkatesh Naik T
Justices K S Mudagal And Venkatesh Naik T

ಪ್ರಜ್ವಲ್‌ ಪರ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ಅವರು “ಹಾಲಿ ಪ್ರಕರಣದಲ್ಲಿ ಸಾಕ್ಷಿಗಳ ನಡುವೆ ಹೊಂದಾಣಿಕೆ ಇಲ್ಲ. ಹೀಗಾಗಿ, ಇಡೀ ಪ್ರಕರಣಕ್ಕೆ ಭದ್ರ ಅಡಿಪಾಯವೇ ಇಲ್ಲದಿರುವುದರಿಂದ ತನ್ನನ್ನು ಕಸ್ಟಡಿಯಲ್ಲಿ ಮುಂದುವರಿಸಬಾರದು. ಇದು ಯಾವುದೇ ಆರೋಪ ಸಾಬೀತಾಗುವ ಪುರಾವೆಗಳಿಲ್ಲದ ಪ್ರಕರಣವಾಗಿದ್ದು, ಮಾಧ್ಯಮ ವಿಚಾರಣೆಗೆ ಒಳಪಟ್ಟಿದೆ” ಎಂದರು.

“ವಿದ್ಯುನ್ಮಾನ, ವೈದ್ಯಕೀಯ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಸಾಕ್ಷಿಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಓಪನ್ ಸೋರ್ಸ್‌ನಿಂದ ಪಡೆದ ಆಕ್ಷೇಪಿತ ವಿಡಿಯೊಗಳು ವಿಶ್ವಾಸಾರ್ಹವಾಗಿಲ್ಲ” ಎಂದರು.

“ಈ ಕೃತ್ಯವು 3-4 ವರ್ಷಗಳ ಬಳಿಕ ವರದಿಯಾಗಿದ್ದು, ಸಂತ್ರಸ್ತೆಯು ಪೊಲೀಸರ ನಿಯಂತ್ರಣಕ್ಕೆ ಬಂದರೂ ಆಕೆಯ ದೂರು ದಾಖಲಿಸಿಕೊಳ್ಳುವಲ್ಲಿ ವಿಳಂಬವಾಗಿದೆ. ಘಟನೆ ನಡೆದಿದೆ ಎನ್ನಲಾದ ತೋಟದ ಮನೆಯು ಈಗ ಇಲ್ಲ. ಇದರ ಮಾಲೀಕತ್ವವು ಪ್ರಕಾಶ್‌ ಎಂಬವರ ಹೆಸರಿನಲ್ಲಿದೆ. ಇದಲ್ಲದೇ ತನಿಖಾಧಿಕಾರಿಗಳು ಸಂತ್ರಸ್ತೆಯ ಕರೆ ದಾಖಲೆ (ಸಿಡಿಆರ್‌) ಹಾಜರುಪಡಿಸಲು ವಿಫಲರಾಗಿದ್ದಾರೆ. ಘಟನೆ ನಡೆದಾಗ ಆಕೆ ಎಲ್ಲಿ ಇದ್ದರು ಎಂಬುದನ್ನು ಖಾತರಿಪಡಿಸಲು ಸಿಡಿಆರ್‌ ಅಗತ್ಯವಾಗಿದೆ” ಎಂದರು.

“2024ರ ಮೇ 9 ರಂದು ಸಂತ್ರಸ್ತೆಯನ್ನು ತೋಟದ ಮನೆಗೆ ಕರೆದೊಯ್ಯಲಾಗಿದ್ದು, ಆ ಸಂದರ್ಭದಲ್ಲಿ ಕೃತ್ಯ ನಡೆದ ಮನೆ ಇರಲಿಲ್ಲ. ಅಂದು ಸಂತ್ರಸ್ತೆ ತೊಟ್ಟಿದ್ದ ಬಟ್ಟೆಗಳು ಸಿಕ್ಕಿಲ್ಲ. ತನಿಖಾಧಿಕಾರಿಗೆ ವರ್ಷಗಳ ಬಳಿಕ ತೋಟದ ಮನೆಗೆ ಹೋಗಿ ಕೃತ್ಯ ನಡೆದ ದಿನ ತೊಟ್ಟಿದ್ದ ಬಟ್ಟೆ ಜಫ್ತಿ ಮಾಡಬೇಕು ಎಂಬ ಯೋಚನೆ ಬಂದಿದ್ದು, ಅಂದು ತನಿಖಾಧಿಕಾರಿಯ ಜೊತೆ ಸಂತ್ರಸ್ತೆ ತೆರಳಿರಲಿಲ್ಲ. ಇದು ಪ್ರಶ್ನಾರ್ಹವಾದ ಜಫ್ತಿಯಾಗಿದ್ದು, ಇದಕ್ಕೆ ತನಿಖಾಧಿಕಾರಿಯಿಂದ ಯಾವುದೇ ಉತ್ತರವಿಲ್ಲ” ಎಂದರು.

“ಆಗಸ್ಟ್‌ 1ರಂದು ಪ್ರಜ್ವಲ್‌ರನ್ನು ದೋಷಿ ಎಂದು ಘೋಷಿಸಲಾಗಿದ್ದು, ಆಗಸ್ಟ್‌ 2ರಂದು ಶಿಕ್ಷೆ ವಿಧಿಸಲಾಗಿದೆ. ಪ್ರಜ್ವಲ್‌ಗೆ ಜೀವನ ಪರ್ಯಂತ ಶಿಕ್ಷೆ ವಿಧಿಸುವುದಕ್ಕೂ ಮುನ್ನ ಅವರನ್ನು ಸಮರ್ಥಿಸಿಕೊಳ್ಳಲು ಸೂಕ್ತ ಕಾಲಾವಕಾಶ ನೀಡಲಾಗಿಲ್ಲ” ಎಂದು ತಮ್ಮ ವಾದ ಪೂರ್ಣಗೊಳಿಸಿದರು.

ಇದನ್ನು ಆಲಿಸಿದ ಪೀಠವು ಪ್ರಾಸಿಕ್ಯೂಷನ್‌ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ಅವರಿಗೆ ನವೆಂಬರ್‌ 25ರಂದು ವಾದಿಸಲು ದಿನ ನಿಗದಿಗೊಳಿಸಿತು. ಅಲ್ಲದೇ, ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

Kannada Bar & Bench
kannada.barandbench.com