ಸ್ವಪ್ನ ಸುರೇಶ್‌ಗೆ ಜೀವ ಬೆದರಿಕೆ: ವಿಜೇಶ್ ವಿರುದ್ಧದ ಕ್ರಿಮಿನಲ್‌ ಪ್ರಕರಣ ದಾಖಲು ಆದೇಶ ವಜಾ ಮಾಡಿದ ಹೈಕೋರ್ಟ್‌

ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಪೊಲೀಸರಿಗೆ ಅನುಮತಿ ನೀಡಿರುವುದಕ್ಕೆ ತನ್ನ ಆದೇಶದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಕಾರಣ ನೀಡಿಲ್ಲ ಎಂದಿರುವ ಹೈಕೋರ್ಟ್‌.
Justice M Nagaprasanna
Justice M Nagaprasanna
Published on

ಕೇರಳದಲ್ಲಿ ಸಂಚಲನ ಮೂಡಿಸಿದ್ದ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್‌ಗೆ ಜೀವ ಬೆದರಿಕೆ ಹಾಕಿದ ಆರೋಪ ಸಂಬಂಧ ವಿಜೇಶ್ ಪಿಳ್ಳೈ ಎಂಬುವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಬೆಂಗಳೂರಿನ ಕೆ ಆರ್ ಪುರ ಠಾಣೆಯ ಪೊಲೀಸರಿಗೆ ಅನುಮತಿ ನೀಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾ ಮಾಡಿದೆ.

ವಿಜೇಶ್ ಪಿಳ್ಳೈ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ. ಜೊತೆಗೆ, ಪ್ರಕರಣವನ್ನು ಮ್ಯಾಜಿಸ್ಟ್ರೇಟ್‌ಗೆ ಹಿಂದಿರುಗಿಸಿದ್ದು, ಹೊಸದಾಗಿ ವಿಚಾರಣೆ ನಡೆಸಿ ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಕೇರಳದಲ್ಲಿ ಸಂಚಲನ ಮೂಡಿಸಿದ್ದ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್, 2023ರ ಮಾರ್ಚ್‌ 11ರಂದು ಕೆ ಆರ್ ಪುರಂ ಠಾಣಾ ಪೊಲೀಸರಿಗೆ ವಿಜೇಶ್ ಪಿಳ್ಳೈ ವಿರುದ್ಧ ದೂರು ನೀಡಿದ್ದರು. ಪ್ರಕರಣದ ಸಂಬಂಧ ಕೇರಳದ ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡಬಾರದು. ಒಂದು ವಾರದಲ್ಲಿ ಬೆಂಗಳೂರು ತೊರೆಯಬೇಕು ಎಂದು ಪಿಳ್ಳೈ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಸ್ವಪ್ನ ಆರೋಪಿಸಿದ್ದರು.

ಇದರಿಂದ ಪಿಳ್ಳೈ ವಿರುದ್ಧ ಜೀವ ಬೆದರಿಕೆವೊಡ್ಡಿದ (ಐಪಿಸಿ ಸೆಕ್ಷನ್-506) ಅಪರಾಧ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ಕೆ ಆರ್ ಪುರ ಠಾಣಾಧಿಕಾರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕೋರಿದ್ದರು. ಇದಕ್ಕೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಹ ಅನುಮತಿ ನೀಡಿತ್ತು. ಅದರಂತೆ ಪಿಳ್ಳೈ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಪಿಳ್ಳೈ ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಪೊಲೀಸರಿಗೆ ಅನುಮತಿ ನೀಡಿರುವುದಕ್ಕೆ ತನ್ನ ಆದೇಶದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಕಾರಣ ನೀಡಿಲ್ಲ. ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ಕೆಲವೊಮ್ಮೆ ಆದೇಶಗಳನ್ನು ಕೇವಲ ಒಂದು ಪದದಲ್ಲಿ ಹೊರಡಿಸುತ್ತವೆ. ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಇದು ನಿರ್ಲಕ್ಷ್ಯ ಎಂದು ಕಟು ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್,ಪಿಳ್ಳೈ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಪೊಲೀಸರಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಅನುಮತಿ ವಜಾ ಮಾಡಿದೆ.

Kannada Bar & Bench
kannada.barandbench.com