ಕಾಮಗಾರಿ ಪ್ಯಾಕೇಜ್‌ ಮೊತ್ತಕ್ಕೆ ಮಿತಿ, ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಅನ್ಯಾಯ ಆರೋಪ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ ಕಾಮಗಾರಿಗಳಿಗೆ ಬಿಬಿಎಂಪಿ, ನಗರಸಭೆ, ಪುರಸಭೆ, ತಾಲ್ಲೂಕು ಮಟ್ಟದ ಮೊತ್ತಕ್ಕೆ ಮಿತಿ ಹೇರಿ, ಪ್ಯಾಕೇಜ್ ನಿಗದಿಪಡಿಸಿ ಜ.14 ಮತ್ತು ಮೇ 11ರಂದು ಹೊರಡಿಸಿರುವ ಸುತ್ತೋಲೆ ರದ್ದುಪಡಿಸಬೇಕು ಎಂದು ಕೋರಿಕೆ.
Karnataka High Court
Karnataka High Court

ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯ ಕಾಮಗಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ರಾಜ್ಯದ ಉಳಿದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ಯಾಕೇಜ್ ಮೊತ್ತಕ್ಕೆ ಮಿತಿ ಹೇರಿದ್ದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ನೋಟಿಸ್ ಜಾರಿಗೊಳಿಸಿದೆ.

ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್ ಮಹದೇವಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರ ವಾದ ಆಲಿಸಿದ ಪೀಠವು ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆ, ಆರ್ಥಿಕ ಇಲಾಖೆ ಮತ್ತು ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿಸೆಂಬರ್‌ 13ಕ್ಕೆ ಮುಂದೂಡಿತು.

ರಾಜ್ಯ ಸರ್ಕಾರದ ಟೆಂಡರ್‌ಗಳಲ್ಲಿ 50 ಲಕ್ಷದವರೆಗಿನ ಕಾಮಗಾರಿಗಳಲ್ಲಿ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಶೇ.24ರಷ್ಟು ಮೀಸಲಾತಿ ನೀಡಿ 2017ರಲ್ಲಿ ಕರ್ನಾಟಕ ಪಾರದರ್ಶಕ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಆದರೆ, ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಬಿಬಿಎಂಪಿಗೆ ಆರು ಸಾವಿರ ಕೋಟಿ ರೂಪಾಯಿ ಅನುದಾನ ನೀಡಿ ಕಾಮಗಾರಿಗಳಿಗೆ ಟೆಂಡರ್ ಕರೆಯಲು ಪ್ಯಾಕೇಜ್ ಮೊತ್ತ 10 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ಅದೇ ರೀತಿ ರಾಜ್ಯದ ಉಳಿದ ನಗರ ಸ್ಥಳೀಯ ಸಂಸ್ಥೆಗಳಿಗೆ 3,885 ಕೋಟಿ ರೂಪಾಯಿ ಅನುದಾನ ನೀಡಿ ನಗರಸಭೆ ವ್ಯಾಪ್ತಿಯಲ್ಲಿ 1 ಕೋಟಿ ರೂಪಾಯಿ, ಪುರಸಭೆ ವ್ಯಾಪ್ತಿಯಲ್ಲಿ 50 ಲಕ್ಷ ರೂಪಾಯಿ ಹಾಗೂ ಪಟ್ಟಣ ಪಂಚಾಯಿತಿಗಳಿಗೆ 25 ಲಕ್ಷ ರೂಪಾಯಿ ತಾಲ್ಲೂಕು ಮಟ್ಟದ ಕಾಮಗಾರಿಗಳಿಗೆ 1 ಕೋಟಿ ರೂಪಾಯಿ ಪ್ಯಾಕೇಜ್ ಮೊತ್ತ ನಿಗದಿಪಡಿಸಲಾಗಿದೆ. ಇದರಿಂದಾಗಿ ಎಸ್ಸಿ-ಎಸ್ಟಿ ಗುತ್ತಿಗೆದಾರರು ಕಾಮಗಾರಿಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ ಕಾಮಗಾರಿಗಳಿಗೆ ಬಿಬಿಎಂಪಿ, ನಗರಸಭೆ, ಪುರಸಭೆ ಹಾಗೂ ತಾಲೂಕು ಮಟ್ಟಕ್ಕೆ ಮೊತ್ತಕ್ಕೆ ಮಿತಿ ಹೇರಿ ಮತ್ತು ಪ್ಯಾಕೇಜ್ ನಿಗದಿಪಡಿಸಿ 2022ರ ಜನವರಿ 14 ಮತ್ತು ಮೇ 11ರಂದು ಹೊರಡಿಸಿರುವ ಸುತ್ತೋಲೆಗಳನ್ನು ರದ್ದುಪಡಿಸಬೇಕು. ಟೆಂಡರ್ ಕರೆಯಲು ಹಾಗೂ ಪ್ಯಾಕೇಜ್ ಮೊತ್ತ 50 ಲಕ್ಷ ರೂಪಾಯಿ ಮೀರದಂತೆ ಮಾರ್ಗಸೂಚಿ ರೂಪಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಯೋಜನೆಯಡಿ ಅಕ್ಟೋಬರ್‌ 4ರಂದು ಕರೆಯಲಾಗಿರುವ ಅಲ್ಪಾವಧಿ ಟೆಂಡರ್‌ಗಳನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರ ಮನವಿ ಮಾಡಿದ್ದಾರೆ. ಅಲ್ಲದೇ ಅರ್ಜಿಯು ಇತ್ಯರ್ಥವಾಗುವವರೆಗೆ ರಾಜ್ಯ ಸರ್ಕಾರದ ಎಲ್ಲಾ ಸುತ್ತೋಲೆಗಳಿಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮಧ್ಯಂತರ ಮನವಿ ಮಾಡಲಾಗಿದೆ.

Related Stories

No stories found.
Kannada Bar & Bench
kannada.barandbench.com