ಲಿಂಗಾಯತ ಸಿಎಂ ಭ್ರಷ್ಟರು ವಿವಾದ: ಸಿದ್ದರಾಮಯ್ಯ ವಿರುದ್ಧ ಮಾನಹಾನಿ ದಾವೆ ಕೋರಿದ್ದ ದೂರು ವಜಾ ಮಾಡಿದ ವಿಶೇಷ ನ್ಯಾಯಾಲಯ

ಸಿದ್ದರಾಮಯ್ಯ ಅವರು ಇಡೀ ಲಿಂಗಾಯತ ಸಮುದಾಯಕ್ಕೆ ಅನ್ವಯವಾಗುವ ರೀತಿಯಲ್ಲಿ ಹೇಳಿಕೆ ನೀಡಿಲ್ಲ. ಬದಲಾಗಿ ಅಂದು ಯಾರು ಸಿಎಂ ಆಗಿದ್ದರೋ ಅವರನ್ನು ಕೇಂದ್ರೀಕರಿಸಿ ಹೇಳಿದ್ದಾರೆ ಎಂದಿರುವ ನ್ಯಾಯಾಲಯ.
C M Siddaramaiah
C M Siddaramaiah

“ಈಗಾಗಲೇ ಲಿಂಗಾಯತ ಮುಖ್ಯಮಂತ್ರಿ ಇದಾರಲ್ಲ ಅವರೇ ಎಲ್ಲಾ ಭ್ರಷ್ಟಾಚಾರ ಮಾಡಿ ಹಾಳು ಮಾಡಿರೋದು ರಾಜ್ಯವನ್ನ” ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಆಕ್ಷೇಪಿಸಿ, ಮಾನನಷ್ಟ ಮೊಕದ್ದಮೆ ದಾಖಲಿಸಲು ಆದೇಶಿಸುವಂತೆ ಕೋರಿದ್ದ ಅರ್ಜಿಯೊಂದನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯ ವಜಾ ಮಾಡಿದೆ.

ಧಾರವಾಡದ ಶಂಕರ್‌ ಶೇಟ್‌ ಮತ್ತು ಮಲ್ಲಯ್ಯ ಶಿವಲಿಂಗಯ್ಯ ಹಿರೇಮಠ ಅವರು ಸಲ್ಲಿಸಿದ್ದ ಖಾಸಗಿ ದೂರನ್ನು ವಿಶೇಷ (ಮ್ಯಾಜಿಸ್ಟ್ರೇಟ್‌) ನ್ಯಾಯಾಲಯದ ನ್ಯಾಯಧೀಶೆ ಜೆ ಪ್ರೀತ್‌ ಅವರು ವಜಾ ಮಾಡಿದ್ದಾರೆ.

“ಆರೋಪಿತ ಅಪರಾಧಕ್ಕೆ ಸಂಬಂಧಿಸಿದಂತೆ ಸೆಕ್ಷನ್‌ 499ರ ಅಡಿಯ ದೂರು, ಐಪಿಸಿ 500ರ ಅಡಿ ಶಿಕ್ಷಾರ್ಹವಾಗಿದೆ. ಸಿಆರ್‌ಪಿಸಿ ಸೆಕ್ಷನ್‌ 200ರ ಅಡಿ ನೀಡಿರುವ ಈ ದೂರನ್ನು ವಜಾ ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.

“ಸಿದ್ದರಾಮಯ್ಯ ಅವರು ಇಡೀ ಲಿಂಗಾಯತ ಸಮುದಾಯಕ್ಕೆ ಅನ್ವಯವಾಗುವ ರೀತಿಯಲ್ಲಿ ಹೇಳಿಕೆ ನೀಡಿಲ್ಲ. ಬದಲಾಗಿ ಅಂದು ಯಾರು ಮುಖ್ಯಮಂತ್ರಿಯಾಗಿದ್ದರೋ ಅವರನ್ನು ಕೇಂದ್ರೀಕರಿಸಿ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಲಿಂಗಾಯತ ಸಮುದಾಯದ ಯಾವುದೇ ಸದಸ್ಯರನ್ನು ಕೇಂದ್ರೀಕರಿಸಿ ಹೇಳಿಕೆ ನೀಡಿಲ್ಲ. ಇದರಿಂದ ದೂರುದಾರರಿಗೆ ಕಾನೂನಾತ್ಮಕವಾಗಿ ಯಾವುದೇ ಹಾನಿಯಾಗಿಲ್ಲ. ಅವರ ಘನತೆಗೆ ಯಾವುದೇ ರೀತಿಯಲ್ಲಿಯೂ ಧಕ್ಕೆಯಾಗಿಲ್ಲ. ಹಾಲಿ ಪ್ರಕರಣದಲ್ಲಿ ದೂರುದಾರರು ಭಾದಿತರಲ್ಲ. ಹೀಗಿರುವಾಗ ಸಂಜ್ಞೇಯ ಪರಿಗಣಿಸಿ, ಪ್ರಕ್ರಿಯೆ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

“ಸಿದ್ದರಾಮಯ್ಯ ಅವರು ನೀಡಿರುವ ಆಕ್ಷೇಪಾರ್ಹವಾದ ಹೇಳಿಕೆಯು ಮಾನಹಾನಿ ಉಂಟು ಮಾಡುವಂಥದ್ದಲ್ಲ. ವರದಿಗಾರರು ಕೇಳಿದ ಪ್ರಶ್ನೆಗೆ ವಿರೋಧ ಪಕ್ಷವು ಹೇಳಿಕೆ ನೀಡುವ ರೀತಿ ಇದಾಗಿದೆ. ಇದು ರಾಜಕಾರಣದಲ್ಲಿ ಸಾಮಾನ್ಯವಾಗಿದೆ. ದೂರುದಾರರು ಹೇಳಿರುವಂತೆ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯು ಇಡೀ ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡುವ ರೀತಿಯದ್ದಲ್ಲ. ದೂರು ನೀಡಲು ದೂರುದಾರರಿಗೆ ಯಾವುದೇ ರೀತಿಯ ಹಕ್ಕು ಇಲ್ಲ. ಹೀಗಾಗಿ, ಅರ್ಜಿಯು ಊರ್ಜಿತವಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಕಳೆದ ವಿಧಾನಸಭೆಯ ಚುನಾವಣೆಯ ಪ್ರಚಾರದ ವೇಳೆ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಅಂದಿನ ವಿರೋಧ ಪಕ್ಷದ ನಾಯಕ ಹಾಗೂ ಅದೇ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಪತ್ರಕರ್ತರೊಬ್ಬರು “ಲಿಂಗಾಯತರನ್ನು ಸಿಎಂ ಮಾಡಿ ಎಂಬ ಅಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು” ಎಂದು ಪ್ರಶ್ನಿಸಿದ್ದರು. ಇದಕ್ಕೆ ಸಿದ್ದರಾಮಯ್ಯ ಅವರು ““ಈಗಾಗಲೇ ಲಿಂಗಾಯತ ಮುಖ್ಯಮಂತ್ರಿ ಇದಾರಲ್ಲ ಅವರೇ ಎಲ್ಲಾ ಭ್ರಷ್ಟಾಚಾರ ಮಾಡಿ ಹಾಳು ಮಾಡಿರೋದು ರಾಜ್ಯವನ್ನ” ಎಂದು ಉತ್ತರಿಸಿದ್ದರು. ಇದನ್ನು ವಿಭಿನ್ನವಾಗಿ ವ್ಯಾಖ್ಯಾನಿಸಿದ್ದ ಬಿಜೆಪಿಯ ಕೆಲ ಮುಖಂಡರು ಸಿದ್ದರಾಮಯ್ಯ ಅವರು ಲಿಂಗಾಯತರೆಲ್ಲಾ ಭ್ರಷ್ಟರು ಎಂದಿದ್ದಾರೆ ಎಂದಿದ್ದರು. ಇದೇ ಹೇಳಿಕೆಯ ಆಧಾರದಲ್ಲಿ ಅರ್ಜಿದಾರರು ಸಿದ್ದರಾಮಯ್ಯ ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಆದೇಶಿಸುವಂತೆ ಕೋರಿದ್ದರು. ಈ ಅರ್ಜಿಯನ್ನು ನ್ಯಾಯಾಲಯವು ವಜಾ ಮಾಡಿದೆ.

Attachment
PDF
Shankar Shet and other Vs Siddaramaiah.pdf
Preview

Related Stories

No stories found.
Kannada Bar & Bench
kannada.barandbench.com