ಮದ್ಯ ಹಗರಣ: ಬಂಧನ ಪ್ರಶ್ನಿಸಿ ಭೂಪೇಶ್‌ ಪುತ್ರ ಸಲ್ಲಿಸಿದ್ದ ಅರ್ಜಿ ಕುರಿತು ಇ ಡಿ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಇ ಡಿ ತನ್ನನ್ನು ಬಂಧಿಸಿರುವುದನ್ನು ಹಾಗೂ ಪಿಎಂಎಲ್ಎ ಸೆಕ್ಷನ್ 50 ಮತ್ತು 63 ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಬಘೇಲ್ ಪುತ್ರ ಎರಡು ಅರ್ಜಿ ಸಲ್ಲಿಸಿದ್ದಾರೆ.
Supreme Court, ED
Supreme Court, ED
Published on

ಛತ್ತೀಸ್‌ಗಢ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್‌ ಅವರ ಪುತ್ರ ಚೈತನ್ಯ ಬಘೇಲ್‌ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾರಿ ನಿರ್ದೇಶನಾಲಯದ (ಇ ಡಿ) ಪ್ರತಿಕ್ರಿಯೆ ಕೇಳಿದೆ [ಚೈತನ್ಯ ಬಘೇಲ್‌ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ ಇ ಡಿಗೆ ನೋಟಿಸ್ ಜಾರಿ ಮಾಡಿದೆ.

Also Read
ಮದ್ಯ ಹಗರಣ: ಪಿಎಂಎಲ್‌ಎ ವಿರುದ್ಧ ಭೂಪೇಶ್ ಬಘೇಲ್ ಸಲ್ಲಿಸಿದ್ದ ಅರ್ಜಿ ಆಲಿಸಲು ಸುಪ್ರೀಂ ನಿರ್ಧಾರ

"ಬಂಧನಕ್ಕೆ ಆಧಾರಕ್ಕಿಂತಲೂ ಹೆಚ್ಚಾಗಿ, ಇದು ಸೆಕ್ಷನ್ 190 (ಬಿಎನ್‌ಎಸ್‌ಎಸ್, 2023) ರ ವ್ಯಾಖ್ಯಾನದ ಕುರಿತಾಗಿದೆ. ತನಿಖೆ ನಡೆಸಲು ನೀವು ಎಷ್ಟು ಸಮಯ ತೆಗೆದುಕೊಳ್ಳಬಹುದು? " ಎಂದು ವಿಚಾರಣೆ ವೇಳೆ ನ್ಯಾಯಮೂರ್ತಿ ಬಾಗ್ಚಿ ಪ್ರಶ್ನಿಸಿದರು.

"ಈ ನ್ಯಾಯಾಲಯವು ನಮಗೆ 3 ತಿಂಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಲು ಸೂಚಿಸಿದೆ" ಎಂದು ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ ವಿ ರಾಜು ಉತ್ತರಿಸಿದರು.

ಅಂತಿಮವಾಗಿ ನ್ಯಾಯಾಲಯವು ಚೈತನ್ಯ ಅವರ ಅರ್ಜಿಗೆ ಸಂಬಂಧಿಸಿದಂತೆ ಹತ್ತು ದಿನಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಇ ಡಿಗೆ ಆದೇಶಿಸಿತು.

ಚೈತನ್ಯ ಪರ ಹಾಜರಾದ ಹಿರಿಯ ವಕೀಲರಾದ ಎನ್ ಹರಿಹರನ್ ಮತ್ತು ಕಪಿಲ್ ಸಿಬಲ್ ತಮ್ಮ ಕಕ್ಷಿದಾರರ ಬಂಧನ ಅವಧಿ ಹೆಚ್ಚಿಸುವ ಸಲುವಾಗಿ ಜಾರಿ ನಿರ್ದೇಶನಾಲಯ  ವಿಚಾರಣೆಯನ್ನು ಅನಗತ್ಯವಾಗಿ ವಿಳಂಬ ಮಾಡುತ್ತಿದೆ ಎಂದು ವಾದಿಸಿದರು.

 "ತನಿಖೆ ಮುಗಿಯುವಂತೆ ಕಂಡುಬರುತ್ತಿಲ್ಲ. ನಾವು ಹೈಕೋರ್ಟ್‌ನಲ್ಲಿ ಬಂಧನದ ಕಾರಣಗಳನ್ನು ರದ್ದುಗೊಳಿಸುವಂತೆ ಕೋರಿದ್ದೇವೆ" ಎಂದು ಹರಿಹರನ್ ಹೇಳಿದರು.

Also Read
ಮದ್ಯ ಹಗರಣ: ಪಿಎಂಎಲ್‌ಎ ವಿರುದ್ಧ ಭೂಪೇಶ್ ಬಘೇಲ್ ಸಲ್ಲಿಸಿದ್ದ ಅರ್ಜಿ ಆಲಿಸಲು ಸುಪ್ರೀಂ ನಿರ್ಧಾರ

ತನಿಖೆಗೆ ಸಹಕರಿಸುತ್ತಿಲ್ಲ ಎಂದು ಇ ಡಿ ಹೇಳುತ್ತಿದೆ. ಆದರೆ ಚೈತನ್ಯ ಅವರಿಗೆ ಇ ಡಿ ನೋಟಿಸ್‌ ನೀಡಿಲ್ಲ.‌ ಸಮನ್ಸ್‌ ಒದಗಿಸಿಲ್ಲ. ಇದನ್ನು ಪ್ರಶ್ನಿಸುತ್ತಿದ್ದು ಅವರು ಸಮನ್ಸ್‌ ನೀಡದೆಯೇ ಪಿಎಂಎಲ್‌ಎ ಸೆಕ್ಷನ್‌ 19ರ ಅಡಿಯಲ್ಲಿ ಬಂಧಿಸುವಂತಿಲ್ಲ. ಮೊದಲು ನೋಟಿಸ್ ನೀಡಬೇಕು. ನೋಟಿಸ್ ನೀಡದೆ ‘ಸಹಕರಿಸಿಲ್ಲʼ ಎಂಬ ಕಾರಣಕ್ಕೆ ಬಂಧಿಸುವಂತಿಲ್ಲ ಎಂದು ಸಿಬಲ್‌ ಹೇಳಿದರು. ವಾದಗಳನ್ನು ಆಲಿಸಿದ ನ್ಯಾಯಾಲಯ ಇ ಡಿಗೆ ನೋಟಿಸ್‌ ನೀಡಿತು.

ಭೂಪೇಶ್ ಬಘೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಛತ್ತೀಸ್‌ಗಢದಲ್ಲಿ ₹2,000 ಕೋಟಿ ಮೌಲ್ಯದ ಮದ್ಯದ ಹಗರಣ ನಡೆದಿತ್ತು ಎಂದು ಆಪಾದಿಸಲಾಗಿದೆ. ರಾಜಕಾರಣಿಗಳು, ಅಬಕಾರಿ ಅಧಿಕಾರಿಗಳ ಮತ್ತು ಖಾಸಗಿ ಶಕ್ತಿಗಳು ಒಗ್ಗೂಡಿ ತಮ್ಮ ಹಿತಾಸಕ್ತಿಗಳಿಗೆ ಪೂರಕವಾಗಿ ರಾಜ್ಯದ ಮದ್ಯದ ಮಾರುಕಟ್ಟೆಯ ಮೇಲೆ ಅಕ್ರಮವಾಗಿ ಹಿಡಿತ ಸಾಧಿಸಿದ್ದರು ಎಂದು ಆರೋಪಿಸಲಾಗಿದೆ. ಹೀಗೆ ಅಕ್ರಮವಾಗಿ ಸಂಪಾದಿಸಿದ ಹಣವನ್ನು ಬಘೇಲ್‌ ಶೆಲ್‌ ಕಂಪೆನಿಗಳ ಮೂಲಕ ವರ್ಗಾಯಿಸಿದ್ದರು, ರಿಯಲ್‌ ಎಸ್ಟೆಟ್‌ ಹೂಡಿಕೆಗಳನ್ನು ಮಾಡಿದ್ದರು ಎನ್ನಲಾಗಿದೆ.

ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿರುವ ಚೈತನ್ಯ ಬಘೇಲ್‌, ತಮ್ಮ ಬಂಧನದ ವೇಳೆ ಇ ಡಿ ಎಸಗಿರುವ ಪ್ರಕ್ರಿಯಾ ಲೋಪಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದು ತಮ್ಮ ಬಂಧನ ಅಕ್ರಮ ಎಂದು ವಾದಿಸಿದ್ದಾರೆ. ಅಲ್ಲದೆ, ಮತ್ತೊಂದು ಅರ್ಜಿಯ ಮುಖೇನ, ಪಿಎಂಎಲ್‌ಎ ಕಾಯಿದೆಯ ಸೆಕ್ಷನ್‌ 50 ಮತ್ತು 63ರ ಸಿಂಧುತ್ವವನ್ನು ಪ್ರಶ್ನಿಸಿದ್ದು ಇವು ಸಂವಿಧಾನದ ವಿಧಿಗಳಾದ 14, 20(3) ಹಾಗೂ 21ಕ್ಕೆ ವಿರುದ್ಧವಾಗಿವೆ ಎಂದು ವಾದಿಸಿದ್ದಾರೆ.

Kannada Bar & Bench
kannada.barandbench.com