Justice PV Kunhikrishnan, Kerala High Court
Justice PV Kunhikrishnan, Kerala High Court

ಕೈಮುಗಿದು, ಕಣ್ಣೀರು ಹಾಕುತ್ತ ದಾವೆದಾರರು ಪ್ರಕರಣ ವಾದಿಸಬೇಕಿಲ್ಲ; ನ್ಯಾಯಮೂರ್ತಿಗಳು ದೇವರಲ್ಲ: ಕೇರಳ ಹೈಕೋರ್ಟ್‌

ಕಾನೂನು ನ್ಯಾಯಾಲಯವು ನ್ಯಾಯ ದೇಗುಲ ಎಂದೇ ಪ್ರಚಲಿತವಾದರೂ ವಕೀಲರಿಂದ ಹಾಗೂ ಕಕ್ಷಿದಾರರಿಂದ ವಿಧೇಯತೆಯನ್ನು ಬಯಸುವಂತಹ ಯಾವುದೇ ದೇವರುಗಳು ಪೀಠದಲ್ಲಿ ಕೂತಿರುವುದಿಲ್ಲ; ಘನತೆಯನ್ನು ಕಾಯ್ದುಕೊಂಡರೆ ಅಷ್ಟು ಸಾಕು ಎಂದ ಪೀಠ.
Published on

ನ್ಯಾಯಮೂರ್ತಿಗಳು ತಮ್ಮ ಸಾಂವಿಧಾನಿಕ ಕರ್ತವ್ಯ ನಿಭಾಯಿಸುತ್ತಿದ್ದು, ದಾವೆದಾರರು ಅಥವಾ ವಕೀಲರು ನ್ಯಾಯಾಲಯದ ಮುಂದೆ ಕೈಮುಗಿದು ವಾದಿಸುವ ಅಗತ್ಯವಿಲ್ಲ ಎಂದು ಕೇರಳ ಹೈಕೋರ್ಟ್‌ ಈಚೆಗೆ ಹೇಳಿದೆ [ರಾಮ್ಲಾ ಕಬೀರ್‌ ವರ್ಸಸ್‌ ಕೇರಳ ರಾಜ್ಯ].

ದಾವೆದಾರರೊಬ್ಬರು ಕೈಮುಗಿದು, ಕಣ್ಣೀರಿಟ್ಟು ವಾದಿಸಿದ್ದನ್ನು ಉಲ್ಲೇಖಿಸಿ ನ್ಯಾಯಮೂರ್ತಿ ಪಿ ವಿ ಕುನ್ಹಿಕೃಷ್ಣನ್‌ ಅವರು ಮೇಲಿನಂತೆ ಹೇಳಿದ್ದಾರೆ.

ಕಾನೂನು ನ್ಯಾಯಾಲಯವು ನ್ಯಾಯ ದೇಗುಲ ಎಂದೇ ಪ್ರಚಲಿತವಾದರೂ ವಕೀಲರಿಂದ ಹಾಗೂ ಕಕ್ಷಿದಾರರಿಂದ ವಿಧೇಯತೆಯನ್ನು ಬಯಸುವಂತಹ ಯಾವುದೇ ದೇವರುಗಳು ಪೀಠದಲ್ಲಿ ಕೂತಿರುವುದಿಲ್ಲ; ಘನತೆಯನ್ನು ಕಾಯ್ದುಕೊಂಡರೆ ಅಷ್ಟು ಸಾಕು ಎಂದು ನ್ಯಾಯಮೂರ್ತಿ ಪಿ ವಿ ಕುನ್ಹಿಕೃಷ್ಣನ್‌ ಅವರು ಹೇಳಿದರು.

“ಮೊದಲಿಗೆ ಯಾವುದೇ ದಾವೆದಾರರು ಅಥವಾ ವಕೀಲರು ಕೈಮುಗಿದು ವಾದಿಸಬೇಕಿಲ್ಲ. ಕಾನೂನಿನ ನ್ಯಾಯಾಲಯದ ಮುಂದೆ ವಾದಿಸುವುದು ಅವರ ಸಾಂವಿಧಾನಿಕ ಹಕ್ಕಾಗಿದೆ. ಸಾಮಾನ್ಯವಾಗಿ ಕಾನೂನು ನ್ಯಾಯಾಲಯವನ್ನು ನ್ಯಾಯ ದೇಗುಲ ಎನ್ನಲಾಗುತ್ತದೆ. ಪೀಠದಲ್ಲಿ ಯಾವುದೇ ದೇವರು ಕುಳಿತಿಲ್ಲ. ನ್ಯಾಯಮೂರ್ತಿಗಳು ತಮ್ಮ ಸಾಂವಿಧಾನಿಕ ಕರ್ತವ್ಯ ಹಾಗೂ ಕಟ್ಟುಪಾಡುಗಳನ್ನು ನಿಭಾಯಿಸುತ್ತಾರೆ. ತಮ್ಮ ಪ್ರಕರಣ ವಾದಿಸುವಾಗ ವಕೀಲರು ನ್ಯಾಯಾಲಯದ ಘನತೆ ಕಾಪಾಡಿದರೆ ಸಾಕು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಆಲಪುಳಾದ ಉತ್ತರ ಪೊಲೀಸ್‌ ಠಾಣೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ಅವರಿಗೆ ಪದೇ ಪದೇ ಕರೆ ಮಾಡಿ ನಿಂದಿಸಿದ ಆರೋಪ ರಾಮ್ಲಾ ಕಬೀರ್‌ ಎಂಬ ಮಹಿಳೆ ಅವರ ಮೇಲಿದ್ದು ಅವರೇ ತಮ್ಮ ಪ್ರಕರಣವನ್ನು ನ್ಯಾಯಾಲಯದ ಮುಂದೆ ಖುದ್ದು ವಾದಿಸಿದ್ದರು. ಈ ವೇಳೆ ಅವರು ಕೈಮುಗಿದು, ಕಣ್ಣೀರಿದ್ದರು. ಪ್ರಕರಣವನ್ನು ಆಲಿಸಿದ್ದ ನ್ಯಾಯಾಲಯವು ಅಂತಿಮವಾಗಿ ಸರ್ಕಲ್‌ ಇನ್‌ಸ್ಪೆಕ್ಟರ್‌ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿತು.

Kannada Bar & Bench
kannada.barandbench.com