ದಾವೆದಾರರು ಜಾಗರೂಕರಾಗಿರಬೇಕು, ಪ್ರಕರಣ ವಿಳಂಬಕ್ಕೆ ವಕೀಲರನ್ನು ದೂಷಿಸುವಂತಿಲ್ಲ: ಸುಪ್ರೀಂ ಕೋರ್ಟ್

ವಕೀಲರದ್ದೇ ಅಸಡ್ಡೆ ಅಥವಾ ನಿರ್ಲಕ್ಷ್ಯ ಎಂದು ಭಾವಿಸಿದರೂ ಕೂಡ, ಪ್ರಕರಣ ದಾಖಲಿಸುವಲ್ಲೇ ಅತಿಯಾದ ವಿಳಂಬ ಉಂಟಾಗಿದ್ದಾಗ ಅದು ಕ್ಷಮಾರ್ಹವಲ್ಲ ಎಂದು ನ್ಯಾಯಾಲಯ ಹೇಳಿದೆ.
Supreme Court
Supreme Court
Published on

ದಾವೆದಾರರು ಕೂಡ ತಮ್ಮ ಪ್ರಕರಣ  ಹೇಗೆ ನಡೆಯುತ್ತದೆ ಎಂಬುದನ್ನು ಗಮನಿಸುವ ಜವಾಬ್ದಾರಿ  ಹೊಂದಿದ್ದು ಪ್ರಕರಣದ ವಿಚಾರಣೆ ವಿಳಂಬವಾದರೆ ಅದಕ್ಕೆ ಅವರ ವಕೀಲರ ಮೇಲೆ ಆರೋಪ ಹೊರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ [ ರಜನೀಶ್ ಕುಮಾರ್ ಮತ್ತಿತರರು ಹಾಗೂ ವೇದ ಪ್ರಕಾಶ್‌ ಅವರ ನಡುವಣ ಪ್ರಕರಣ ] .

ಮೇಲ್ಮನವಿ ಸಲ್ಲಿಸಲು ದಾವೆದಾರರು 534 ದಿನಗಳಷ್ಟು ವಿಳಂಬ ಮಾಡಿದ್ದನ್ನು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹದೇವನ್ ಅವರಿದ್ದ ವಿಭಾಗೀಯ ಪೀಠ ಮನ್ನಿಸಲಿಲ್ಲ.

ನ್ಯಾಯಾಲಯದೆದುರು ವಿಚಾರಣೆಗೆ ಹಾಜರಾಗುವಲ್ಲಿ ತಮ್ಮ ವಕೀಲರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದಾವೆದಾರರು ದೂಷಿಸುವ ಪ್ರವೃತ್ತಿಯನ್ನು ದೀರ್ಘಕಾಲದಿಂದ ನೋಡುತ್ತಾ ಬಂದಿದ್ದೇವೆ. ವಕೀಲರದ್ದೇ ಅಸಡ್ಡೆ ಅಥವಾ ನಿರ್ಲಕ್ಷ್ಯ ಎಂದು ಭಾವಿಸಿದರೂ ಕೂಡ, ತನ್ನ ಸ್ವಂತ ಹಕ್ಕುಗಳ ಬಗ್ಗೆ ಜಾಗರೂಕನಾಗಿರಬೇಕಿರುವುದು ದಾವೆದಾರನ ಕರ್ತವ್ಯವಾಗಿರುತ್ತದೆ. ಹೀಗಾಗಿ ಪ್ರಕರಣ  ದಾಖಲಿಸುವಲ್ಲೇ ಅತಿಯಾದ ವಿಳಂಬ ಉಂಟಾಗಿದ್ದಾಗ ಅದು ಕ್ಷಮಿಸಲು ಆಧಾರವಾಗದು ಎಂದು ನ್ಯಾಯಾಲಯ ವಿವರಿಸಿದೆ.

ಇಡೀ ಆರೋಪವನ್ನು ವಕೀಲರ ತಲೆಗೇ ಕಟ್ಟಲು ದಾವೆದಾರರಿಗೆ ಅವಕಾಶ ನೀಡಬಾರದು.

ಸುಪ್ರೀಂ ಕೋರ್ಟ್

ಪ್ರತಿವಾದಿ ಪರವಾಗಿ ಸಿವಿಲ್‌ ನ್ಯಾಯಾಲಯ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಅರ್ಜಿದಾರ ಈ ಮೊದಲು ಮೇಲ್ಮನವಿ ನ್ಯಾಯಾಲಯದ ಮೊರೆ ಹೋಗಿದ್ದರು. ಮೊದಲ ಮೇಲ್ಮನವಿ ನ್ಯಾಯಾಲಯದ ಮುಂದೆ ಅವರ ಮನವಿಯನ್ನು 534 ದಿನಗಳವರೆಗೆ ತಡೆಹಿಡಿಯಲಾಯಿತು. ವಕೀಲರ ನಿರ್ಲಕ್ಷ್ಯದಿಂದ ವಿಳಂಬ ಉಂಟಾಗಿರುವುದರಿಂದ ದಾವೆದಾರರಿಗೆ ತೊಂದರೆಯಾಗಬಾರದು ಎಂದು ವಿಳಂಬವನ್ನು ಕ್ಷಮಿಸಲಾಗಿತ್ತು. ಆದರೆ ಪ್ರತಿವಾದಿ ಇದನ್ನು  ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌ ಅರ್ಜಿದಾರರ ವಿಳಂಬ ಕ್ಷಮಿಸುವ ಆದೇಶವನ್ನು ರದ್ದುಗೊಳಿಸಿತು. ಈ ಹಿನ್ನೆಲೆಯಲ್ಲಿ ಅರ್ಜಿದಾರ 534 ದಿನಗಳ ವಿಳಂಬ ಮನ್ನಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಆದರೆ ನವೆಂಬರ್ 21 ರಂದು ಮನವಿ ವಜಾಗೊಳಿಸಿರುವ ಸುಪ್ರೀಂ ಕೋರ್ಟ್‌, ವಿಚಾರಣೆಯಲ್ಲಿ ವಿಳಂಬಕ್ಕೆ ತಮ್ಮ ವಕೀಲರನ್ನಷ್ಟೇ ದಾವೆದಾರರು ದೂರುವಂತಿಲ್ಲ ಎಂದಿದೆ.

Kannada Bar & Bench
kannada.barandbench.com