ಭೂಷಣ್ ವಿರುದ್ಧದ 2009ರ ನ್ಯಾಯಾಂಗ ನಿಂದನೆ ಪ್ರಕರಣ: ಸೂಕ್ತ ನ್ಯಾಯಪೀಠದ ಮುಂದೆ ವಿಸ್ತೃತ ಪ್ರಶ್ನೆ ಇರಿಸಲಿರುವ ಕೋರ್ಟ್

“ಪರಿಹಾರ ಕೋರಿ ಜನರು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಆ ನಂಬಿಕೆಯೇ ಅಲ್ಲಾಡಿದರೆ, ಯಾವ ಪ್ರಕ್ರಿಯೆ ಅನುಸರಿಸಬೇಕು?” ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
Prashant bhushan Supreme Court
Prashant bhushan Supreme Court

ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ವಿರುದ್ಧ 2009ರಲ್ಲಿ ದಾಖಲಿಸಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣದಿಂದ ಹೊಮ್ಮುತ್ತಿರುವ ವಿಸ್ತೃತ ಪ್ರಶ್ನೆಗಳನ್ನು ಸೂಕ್ತ ನ್ಯಾಯಪೀಠದ ಮುಂದೆ ಇರಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರ್ಧರಿಸಿತು.

ಕಳೆದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಂಗ ನಿಂದನೆ ಸುತ್ತ ಎದ್ದಿರುವ ಮಹತ್ವದ ಪ್ರಶ್ನೆಗಳನ್ನೊಳಗೊಂಡ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ ಆರ್ ಗವಾಯಿ ಮತ್ತು ಕೃಷ್ಣ ಮುರಾರಿ ನೇತೃತ್ವದ ತ್ರಿಸದಸ್ಯ ಪೀಠ ನಡೆಸಿತು.

ವಿಚಾರಣೆಯ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಟಾರ್ನಿ ಜನರಲ್ ಅವರಿಂದ ಸ್ವತಂತ್ರ ಅಭಿಪ್ರಾಯ ಪಡೆಯಲು ಅವರಿಗೆ ನೋಟಿಸ್ ಜಾರಿಗೊಳಿಸಬೇಕು ಎಂದು ಪ್ರಶಾಂತ್ ಭೂಷಣ್ ಪರ ಹಿರಿಯ ವಕೀಲ ರಾಜೀವ್ ಧವನ್ ಅವರು ಕೋರ್ಟ್‌ ಗಮನಸೆಳೆದರು. ಕಳೆದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಎತ್ತಿರುವ ಪ್ರಶ್ನೆಗಳನ್ನು ಸಾಂವಿಧಾನಿಕ ಪೀಠ ಆಲಿಸಬೇಕಿದೆ ಎಂದೂ ಅವರು ವಾದಿಸಿದರು.

ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಭೂಷಣ್ ಅವರು 10 ಮಹತ್ವದ ಪ್ರಶ್ನೆಗಳನ್ನೊಳಗೊಂಡ ಮನವಿಯನ್ನು ನ್ಯಾಯಪೀಠದ ಮುಂದಿರಿಸಿದ್ದಾರೆ ಎಂದು ಧವನ್ ಹೇಳಿದರು. ಇದರಲ್ಲಿ ಪ್ರಾಮಾಣಿಕವಾದ ಭ್ರಷ್ಟಾಚಾರ ಸಂಬಂಧಿ ಅಭಿಪ್ರಾಯವೂ ನ್ಯಾಯಾಂಗ ನಿಂದನೆಯಾಗುತ್ತದೆಯೇ, ಪ್ರಾಮಾಣಿಕ ಅಭಿಪ್ರಾಯ ದಾಖಲಿಸುವುದು ಸಾಕೇ ಅಥವಾ ಭ್ರಷ್ಟಾಚಾರ ಆರೋಪವನ್ನು ರುಜುವಾತುಪಡಿಸುವುದು ಅಗತ್ಯವೇ, ಆರೋಪಕ್ಕೆ ಸಂಬಂಧಿಸಿದಂತೆ ಆಂತರಿಕ ಸಮಿತಿ ವಿಚಾರಣೆ ಆರಂಭಿಸಿದರೆ ದೂರುದಾರ ಸಾರ್ವಜನಿಕವಾಗಿ ದೂರಿನ ಕುರಿತು ಚರ್ಚಿಸುವುದನ್ನು ನಿಷಿದ್ಧಗೊಳಿಸಬೇಕೆ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳು ಮನವಿಯಲ್ಲಿವೆ.

“ಸದರಿ ಪ್ರಕರಣದಲ್ಲಿ ಇಂಥ ಪ್ರಶ್ನೆಗಳು ಏಳುತ್ತವೆ ಎಂಬುದು ನಮ್ಮ ನಂಬಿಕೆ. ಆದ್ದರಿಂದ ಏಕಕಾಲಕ್ಕೆ ಅವುಗಳೆಲ್ಲವನ್ನೂ ಪರಿಹರಿಸಬೇಕಿದೆ” ಎಂದು ಧವನ್ ಹೇಳಿದರು.

ಇದಕ್ಕೆ ನ್ಯಾ. ಮಿಶ್ರಾ ಅವರು “ಕೆಲವು ಪ್ರಶ್ನೆಗಳು ನಿಮ್ಮ ಪಟ್ಟಿಯಲ್ಲಿವೆ. ಯಾವುದೇ ತೆರನಾದ ಮನವಿ ಸಲ್ಲಿಸದೇ ಅವುಗಳು ಕುರಿತು ನಿರ್ಧರಿಸುವುದು ಹೇಗೆ” ಎಂದರು.

ಗೌರವಾನ್ವಿತ ನ್ಯಾಯಮೂರ್ತಿಗಳು ಸ್ವಯಂಪ್ರೇರಣೆಯಿಂದ ಅಧಿಕಾರ ಚಲಾಯಿಸಿದಾಗ ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್ 13 ಅನ್ನು ಸಂವಿಧಾನದ 19 ಮತ್ತು 21ನೇ ಪರಿಚ್ಛೇದದ ಜೊತೆ ಓದಿಕೊಳ್ಳಬಹುದೇ? ಎಂದು ಧವನ್ ಅವರು ಪೀಠವನ್ನು ಪ್ರಶ್ನಿಸಿದರು.

ಸೂಕ್ತ ನ್ಯಾಯಪೀಠದ ಮುಂದೆ ಇಂಥ ಮಹತ್ವದ ಪ್ರಶ್ನೆಗಳನ್ನು ಇರಿಸುವ ಸೂಚನೆ ನೀಡಿದ ನ್ಯಾಯಪೀಠವು, ಸದರಿ ಪ್ರಕರಣವು ಅಟಾರ್ನಿ ಜನರಲ್ ಅವರನ್ನು ಮೀರಲಿದ್ದು, ಅಮಿಕಸ್ ಕ್ಯೂರಿ ನೇಮಿಸಲು ಚಿಂತನೆ ನಡೆಸುವುದಾಗಿ ತಿಳಿಸಿತು.

ಆನಂತರ ನ್ಯಾಯಪೀಠವು ಗಟ್ಟಿಧ್ವನಿಯಲ್ಲಿ ಹೀಗೆ ಕೇಳಿತು:

“ಪರಿಹಾರ ಕೋರಿ ಜನರು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಆ ನಂಬಿಕೆಯೇ ಅಲ್ಲಾಡಿದರೆ, ಯಾವ ಪ್ರಕ್ರಿಯೆ ಅನುಸರಿಸಬೇಕು?”
ಸುಪ್ರೀಂ ಕೋರ್ಟ್

ಬಳಿಕ ಮಾತನಾಡಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, “ಯಾರು ಎಷ್ಟೇ ಎತ್ತರದ ಸ್ಥಾನದಲ್ಲಿದ್ದರೂ ಕಾನೂನು ಎಲ್ಲರಿಗಿಂತಲೂ ಮೇಲಿದೆ… ಅದನ್ನು ಎಲ್ಲರಿಗೂ ಸಮನಾಗಿ ಅನ್ವಯಿಸಬೇಕು” ಎಂದರು.

ಆನಂತರ ಸೂಕ್ತ ನ್ಯಾಯಪೀಠದ ಮುಂದೆ ಪ್ರಕರಣವನ್ನು ಇರಿಸುವಂತೆ ನ್ಯಾಯಪೀಠವು ನಿರ್ದೇಶಿಸಿತು. ಸೆಪ್ಟೆಂಬರ್ 10ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ. ನ್ಯಾ. ಮಿಶ್ರಾ ಅವರು ನಿವೃತ್ತರಾದ ಒಂದು ವಾರದ ಬಳಿಕ ವಿಚಾರಣೆ ನಡೆಯಲಿದೆ.

ಆಗಸ್ಟ್‌ 17ರಂದು ಎಲ್ಲ ಪಕ್ಷಕಾರರನ್ನೂ ಸವಿವರವಾಗಿ ಆಲಿಸಿದ ನ್ಯಾಯಪೀಠವು ಪ್ರಕರಣವನ್ನು ಅಂತ್ಯಗೊಳಿಸುವ ಇಂಗಿತ ವ್ಯಕ್ತಪಡಿಸಿತ್ತು. ಪ್ರಕರಣದಿಂದ ಹೊಮ್ಮುವ ವಿಸ್ತೃತ ಪ್ರಶ್ನೆಗಳನ್ನು ಉದ್ದೇಶಿಸಿ, ನಿರ್ಧರಿಸಬೇಕಾದ ಅಗತ್ಯತೆಯ ಬಗ್ಗೆ ಹೇಳಿತ್ತು.

ಪ್ರಕರಣದಲ್ಲಿ ಭಾಗಿಯಾಗಿರುವ ವಕೀಲರಿಗೆ ಈ ಕೆಳಗಿನ ಪ್ರಶ್ನೆಗಳ ಕುರಿತು ನ್ಯಾಯಾಲಯವನ್ನು ಉದ್ದೇಶಿಸುವಂತೆ ತಿಳಿಸಿತ್ತು:

  1. ನಿರ್ದಿಷ್ಟ ನ್ಯಾಯಮೂರ್ತಿ(ಗಳ) ಭ್ರಷ್ಟಾಚಾರದ ಕುರಿತು ಸಾರ್ವಜನಿಕ ಹೇಳಿಕೆ ನೀಡಬಹುದಾದರೆ, ಯಾವ ಸಂದರ್ಭದಲ್ಲಿ ಮತ್ತು ಯಾವ ಆಧಾರದಲ್ಲಿ ಹೇಳಿಕೆ ನೀಡಬಹುದು ಮತ್ತು ಈ ವೇಳೆ ಯಾವ ಬಗೆಯ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?

  2. ಹಾಲಿ ನ್ಯಾಯಮೂರ್ತಿಯ ನಡತೆಯ ಬಗ್ಗೆ ಆರೋಪ ಮಾಡುವುದಾದರೆ ಅಂಥ ಪ್ರಕರಣದಲ್ಲಿ ಯಾವ ವಿಧಾನ ಅನುಸರಿಸಿ, ದೂರು ದಾಖಲಿಸಬೇಕು?

  3. ನಿವೃತ್ತ ನ್ಯಾಯಮೂರ್ತಿಯ(ಗಳು) ಬಗ್ಗೆ ಸಾರ್ವಜನಿಕವಾಗಿ ಭ್ರಷ್ಟಾಚಾರ ಆರೋಪ ಮಾಡುವ ಮೂಲಕ ಸಾರ್ವಜನಿಕರು ನ್ಯಾಯಾಲಯದ ಮೇಲೆ ಇಟ್ಟಿರುವ ನಂಬಿಕೆ ಅಲ್ಲಾಡುವಂತೆ ಮಾಡಬಹುದೇ? ಹಾಗಾದರೆ ಅದನ್ನು ನ್ಯಾಯಾಂಗ ನಿಂದನೆ ಕಾಯ್ದೆಯಡಿ ಶಿಕ್ಷಿಸಬಹುದೇ?

2009ರಲ್ಲಿ ತೆಹಲ್ಕಾ ಮ್ಯಾಗಜೀನ್ ಗೆ ನೀಡಿದ್ದ ಸಂದರ್ಶನದಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಎಸ್ ಎಚ್ ಕಪಾಡಿಯಾ ಹಾಗೂ ಕೆ ಜಿ ಬಾಲಕೃಷ್ಣನ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಕ್ಕೆ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿತ್ತು.

ಸಂದರ್ಶನದ ಭಾಗವೊಂದರಲ್ಲಿ ಹಿಂದಿನ 16 ಮುಖ್ಯ ನ್ಯಾಯಮೂರ್ತಿಗಳ ಪೈಕಿ ಅರ್ಧದಷ್ಟು ಮಂದಿ ಭ್ರಷ್ಟರು ಎಂದಿದ್ದರಲ್ಲದೇ ಆರೋಪ ಸಾಬೀತುಪಡಿಸುವ ಯಾವುದೇ ದಾಖಲೆಗಳಿಲ್ಲ ಎಂದೂ ಭೂಷಣ್ ಹೇಳಿದ್ದರು ಎಂದೂ ದೂರುದಾರರು ವಾದಿಸಿದ್ದರು.

ಹಿರಿಯ ವಕೀಲ ಹರೀಶ್ ಸಾಳ್ವೆ ಗಮನಸೆಳೆದ ಬಳಿಕ ಸ್ವಯಂ ಪ್ರೇರಿತವಾಗಿ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿತ್ತು. ಸಾಳ್ವೆ ಅವರು ಪ್ರಕರಣದಲ್ಲಿ ಅಮಿಕಸ್ ಆಗಿ ಕೆಲಸ ಮಾಡುತ್ತಿದ್ದಾರೆ. 2010ರ ನವೆಂಬರ್ 10ರಂದು ಮೂವರು ನ್ಯಾಯಮೂರ್ತಿಗಳ ಪೀಠವು ನ್ಯಾಯಾಂಗ ನಿಂದನೆ ಪ್ರಕರಣವನ್ನು ಮುಂದುವರೆಸಲು ಅನುಮತಿ ನೀಡಿತ್ತು.

ಈ ತಿಂಗಳ ಆರಂಭದಲ್ಲಿ ಪ್ರಕರಣದ ಅರ್ಹತೆಗಳ ಆಧಾರದಲ್ಲಿ ವಿಚಾರಣೆ ನಡೆಸಲು ಕೋರ್ಟ್ ನಿರ್ಧರಿಸಿದ್ದರಿಂದ ಭೂಷಣ್ ಅವರು ಲಿಖಿತ ದಾಖಲೆ ಸಲ್ಲಿಸಿದ್ದರು. ಭ್ರಷ್ಟಾಚಾರ ಆರೋಪವನ್ನು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಮಾಡಲಾಗಿದ್ದು, ಇದು ಸಂವಿಧಾನದತ್ತವಾಗಿ ಬಂದಿರುವ (19) (1) (a) ಪರಿಚ್ಛೇದದಡಿ ದೊರೆತಿರುವ ವಾಕ್ ಸ್ವಾತಂತ್ರ್ಯದ ವ್ಯಾಪ್ತಿಗೆ ಒಳಪಡುತ್ತದೆ. ಮೇಲಿನ ಆರೋಪಗಳು ನ್ಯಾಯಾಂಗ ನಿಂದನೆಯಾಗುವುದಿಲ್ಲ. ಆರೋಪಗಳ ಕುರಿತು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಭೂಷಣ್ ಪ್ರತಿಪಾದಿಸಿದ್ದರು.

ಎರಡನೆಯದಾಗಿ, ಭ್ರಷ್ಟಾಚಾರ ಆರೋಪ ಕೇಳದೇ ಇರುವಂಥದ್ದೇನಲ್ಲ. ಇದರ ಬಗ್ಗೆ ಸಂಸದೀಯ ಸಮಿತಿಯು ಗಮನಹರಿಸಿದ್ದು, ನ್ಯಾಯಾಧೀಶರು ತಮ್ಮ ತೀರ್ಪುಗಳಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಮೂರನೆಯದಾಗಿ, ಆರೋಪ ಮಾಡುವುದು ನ್ಯಾಯಾಂಗ ನಿಂದನೆಯಾಗುವುದಿಲ್ಲ. ಅಂತಿಮವಾಗಿ ಇಂಥ ವಿಚಾರಣಾ ಪ್ರಕ್ರಿಯೆಯಲ್ಲಿ ಸತ್ಯವೇ ರಕ್ಷಣೆಯಾಗಿರುತ್ತದೆ ಎಂದು ಮನವಿಯಲ್ಲಿ ವಿವರಿಸಿದ್ದರು.

Related Stories

No stories found.
Kannada Bar & Bench
kannada.barandbench.com