ಬಾಬರಿ ಮಸೀದಿ ಧ್ವಂಸ ಪ್ರಕರಣ: ವಿಚಾರಣೆ ಮತ್ತು ತೀರ್ಪು ಘೋಷಣೆಗೆ ಸೆ.30ರ ವರೆಗೆ ಗಡುವು ವಿಸ್ತರಿಸಿದ ಸುಪ್ರೀಂ ಕೋರ್ಟ್

ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಮತ್ತು ತೀರ್ಪು ಪ್ರಕಟಿಸುವ ಸಂಬಂಧ 2019ರ ಜುಲೈನಲ್ಲಿ ಒಂಭತ್ತು ತಿಂಗಳು ಗಡುವು ನೀಡಲಾಗಿದ್ದನ್ನು ಈ ವರ್ಷದ ಆಗಸ್ಟ್‌ 31ರ ವರೆಗೆ ವಿಸ್ತರಿಸಿದ್ದ ಕೋರ್ಟ್, ಈಗ ಮತ್ತೊಂದು ತಿಂಗಳ ಗಡುವು ನೀಡಿದೆ.
ಬಾಬರಿ ಮಸೀದಿ ಧ್ವಂಸ ಪ್ರಕರಣ: ವಿಚಾರಣೆ ಮತ್ತು ತೀರ್ಪು ಘೋಷಣೆಗೆ ಸೆ.30ರ ವರೆಗೆ ಗಡುವು ವಿಸ್ತರಿಸಿದ ಸುಪ್ರೀಂ ಕೋರ್ಟ್

ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಮತ್ತು ತೀರ್ಪು ಪ್ರಕಟಣೆಗೆ ಸೆಪ್ಟೆಂಬರ್ 30ರ ವರೆಗೆ ಸುಪ್ರೀಂ ಕೋರ್ಟ್ ಗಡುವು ವಿಸ್ತರಿಸಿದೆ. ಇದರೊಂದಿಗೆ ಎರಡನೇ ಬಾರಿಗೆ ಸರ್ವೋಚ್ಚ ನ್ಯಾಯಾಲಯವು ಗಡುವು ವಿಸ್ತರಣೆ ಮಾಡಿದಂತಾಗಿದೆ.

ಸುಪ್ರೀಂ ಕೋರ್ಟ್‌ನ ಮೇ ತಿಂಗಳ ಆದೇಶದ ಪ್ರಕಾರ ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಶಿ ಹಾಗೂ ಉಮಾ ಭಾರತಿ ವಿರುದ್ಧದ ಪ್ರಕರಣ ಆಗಸ್ಟ್‌ 31ರೊಳಗೆ ಪೂರ್ಣಗೊಳ್ಳಬೇಕಿತ್ತು. ಆಗಸ್ಟ್‌ 31ರವರೆಗೆ ಸಮಯ ನೀಡುವ ಮೂಲಕ ಗಡುವು ವಿಸ್ತರಿಸಿದ್ದ ಸುಪ್ರೀಂ ಕೋರ್ಟ್‌ ಮತ್ತೊಮ್ಮೆ ಒಂದು ತಿಂಗಳು ಗಡುವು ವಿಸ್ತರಿಸುವ ಮೂಲಕ ಸಿಬಿಐ ವಿಶೇಷ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರಿಗೆ ಪ್ರಕರಣದ ವಿಚಾರಣೆ ಹಾಗೂ ತೀರ್ಪು ನೀಡಲು ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ಮಾಡಿಕೊಟ್ಟಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ರೋಹಿಂಗ್ಟನ್ ನಾರಿಮನ್, ನವೀನ್ ಸಿನ್ಹಾ ಮತ್ತು ಇಂದಿರಾ ಬ್ಯಾನರ್ಜಿ ನೇತೃತ್ವದ ತ್ರಿಸದಸ್ಯ ಪೀಠವು ಆಗಸ್ಟ್ 19ರಂದು ಹೊರಡಿಸಿದ ಆದೇಶ ಹೀಗಿದೆ:

“ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸುರೇಂದ್ರ ಕುಮಾರ್ ಅವರ ವರದಿಯ ಪ್ರಕಾರ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯು ಅಂತಿಮ ಘಟ್ಟ ತಲುಪಿರುವುದರಿಂದ ವಿಚಾರಣೆ ಹಾಗೂ ತೀರ್ಪು ಪ್ರಕಟಿಸುವ ಸಂಬಂಧ ಸೆಪ್ಟೆಂಬರ್ 30ರ ಕಾಲಾವಕಾಶ ವಿಸ್ತರಿಸಲಾಗುವುದು”.

ಸುಪ್ರೀಂ ಕೋರ್ಟ್‌ನ 2019ರ ಜುಲೈ ಆದೇಶದ ಪ್ರಕಾರ ನಿಗದಿತ ಸಮಯದಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಪೂರ್ಣಗೊಳ್ಳಬೇಕಿತ್ತು. ಕಳೆದ ವರ್ಷದ ಜುಲೈ 19ರ ಆದೇಶದ ಪ್ರಕಾರ ಮುಂದಿನ ಒಂಭತ್ತು ತಿಂಗಳಲ್ಲಿ ಪ್ರಕರಣದ ತೀರ್ಪು ಪ್ರಕಟವಾಗಬೇಕಿತ್ತು.

ಕಳೆದ ಮೇ 6ರಂದು ನ್ಯಾ. ಯಾದವ್ ಅವರು ಸಾಕ್ಷ್ಯಾಧಾರಗಳ ವಿಚಾರಣೆ ನಡೆಯುತ್ತಿದ್ದು, ಉಳಿದಂತೆ ಪ್ರಕರಣ ವಿಚಾರಣೆ ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ ಎಂದು ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿದ್ದರು. ಪರಿಸ್ಥಿತಿ ಅವಲೋಕಿಸಿದ ಸುಪ್ರೀಂ ಕೋರ್ಟ್ ನ್ಯಾ. ಯಾದವ್ ಅವರಿಗೆ ಆಗಸ್ಟ್ 31ರ ವರೆಗೆ ಗಡುವು ವಿಸ್ತರಿಸಿತ್ತು.

ಪ್ರಕರಣ ವಿಳಂಬವಾಗದಂತೆ ತಡೆಯುವ ಉದ್ದೇಶದಿಂದ ವಿಡಿಯೋ ಕಾನ್ಫೆರೆನ್ಸ್ ವ್ಯವಸ್ಥೆ ಸಿದ್ಧವಿದ್ದು, ನ್ಯಾ. ಯಾದವ್ ಅವರನ್ನು ಅದನ್ನು ಬಳಸಿಕೊಳ್ಳಬೇಕು ಎಂದು ಸೂಚಿಸಿತ್ತು.

ಬಿಜೆಪಿ ನಾಯಕರಾದ ಎಲ್ ಕೆ ಅಡ್ವಾಣಿ, ಉಮಾ ಭಾರತಿ ಮತ್ತು ಕಲ್ಯಾಣ್ ಸಿಂಗ್ ವಿರುದ್ಧದ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಧೀಶ ಯಾದವ್ ಅವರು 2019ರ ಸೆಪ್ಟೆಂಬರ್‌ನಲ್ಲಿ ನಿವೃತ್ತರಾಗಬೇಕಿತ್ತು. ಪ್ರಕರಣದ ವಿಚಾರಣೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷದ ಜುಲೈನಲ್ಲಿ ನ್ಯಾ. ಯಾದವ್ ಅವರ ಸೇವಾವಧಿಯನ್ನು ಹೈಕೋರ್ಟ್ ಜೊತೆ ಚರ್ಚಿಸಿ ವಿಸ್ತರಣೆ ಮಾಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿತ್ತು.

ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಶಿ ಮತ್ತು ಉಮಾ ಭಾರತಿ ಸೇರಿದಂತೆ ಎಂಟು ನಾಯಕರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸುವ ಸಂಬಂಧ 2017ರ ಆಗಸ್ಟ್‌ ನಲ್ಲಿ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು. ಇದೇ ಸಂದರ್ಭದಲ್ಲಿ ಎರಡು ವರ್ಷಗಳಲ್ಲಿ ವಿಚಾರಣೆ ಪೂರ್ಣಗೊಳ್ಳಬೇಕು ಮತ್ತು ಯಾವುದೇ ಕಾರಣಕ್ಕೂ ವಿಚಾರಣಾಧೀನ ನ್ಯಾಯಾಧೀಶರನ್ನು ವರ್ಗಾವಣೆ ಮಾಡಬಾರದು ಎಂದು ಕಟ್ಟಪ್ಪಣೆ ವಿಧಿಸಿತ್ತು.

Related Stories

No stories found.
Kannada Bar & Bench
kannada.barandbench.com