ಬೆಂಗಳೂರು ಗಲಭೆ: ಹಾನಿ ಅಂದಾಜಿಗೆ ನಿವೃತ್ತ ನ್ಯಾ. ಎಚ್ ಎಸ್ ಕೆಂಪಣ್ಣರನ್ನು ಪರಿಹಾರ ಆಯುಕ್ತರಾಗಿ ನೇಮಿಸಿದ ಹೈಕೋರ್ಟ್

ಪರಿಹಾರ ಆಯುಕ್ತರ (ಕ್ಲೇಮ್ಸ್ ಕಮಿಷನರ್) ನೇಮಕಾತಿಯನ್ನು ವ್ಯಾಪಕವಾಗಿ ಪ್ರಚಾರ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವ ನ್ಯಾಯಾಯಲಯವು ಆಸ್ತಿ ಹಾನಿ ಅಥವಾ ನಾಶದ ಮಾಹಿತಿಯನ್ನು ಸಾರ್ವಜನಿಕರು ಅವರಿಗೆ ಸಲ್ಲಿಸುವಂತೆ ತಿಳಿಸಲು ಸೂಚಿಸಿದೆ.
Justice HS Kempanna
Justice HS Kempanna
Published on

ಕಳೆದ ಆಗಸ್ಟ್‌ 11ರಂದು ನಡೆದ ಬೆಂಗಳೂರು ಗಲಭೆ ಸಂದರ್ಭದಲ್ಲಿ ಉಂಟಾದ ಆಸ್ತಿ ಹಾನಿ ಮತ್ತು ನಷ್ಟ ಅಂದಾಜಿಸಲು ನಿವೃತ್ತ ನ್ಯಾಯಮೂರ್ತಿ ಎಚ್ ಎಸ್ ಕೆಂಪಣ್ಣ ಅವರನ್ನು ಪರಿಹಾರ ಆಯುಕ್ತರನ್ನಾಗಿ ಹೈಕೋರ್ಟ್‌ ಶುಕ್ರವಾರ ನೇಮಕ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾ. ಅಶೋಕ್ ಎಸ್ ಕಿಣಗಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಕೆಳಗಿನ ನಿರ್ದೇಶನಗಳನ್ನು ನೀಡಿದೆ.

  • ರಾಜ್ಯ ಸರ್ಕಾರವು ಕ್ಲೇಮ್ ಕಮಿಷನರ್‌ಗೆ ಕಚೇರಿ, ಪೀಠೋಪಕರಣ, ವಾಹನ ಹಾಗೂ ಅಗತ್ಯ ಸಿಬ್ಬಂದಿಯನ್ನೊಳಗೊಂಡ ಮೌಲ ಸೌಕರ್ಯ ಕಲ್ಪಿಸಬೇಕು.

  • ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂಬುದನ್ನು ಪರಿಗಣಿಸಿ ಅವರಿಗೆ ರಾಜ್ಯ ಸರ್ಕಾರ ಸಂಭಾವನೆ ನಿಗದಿಗೊಳಿಸಬೇಕು.

  • ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಗೆ ನೀಡಲಾಗುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕು. ಅವರಿಗೆ ಸಂಭಾವನೆ ನಿಗದಿಗೊಳಿಸುವಾಗ ನಿವೃತ್ತಿ ಸೌಲಭ್ಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು.

  • ಪರಿಹಾರ ಆಯುಕ್ತರ ನೇಮಕವಾದ ವಾರದೊಳಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಬೇಕು.

  • ಪರಿಹಾರ ಆಯುಕ್ತರ ನೇಮಕಾತಿಯನ್ನು ವ್ಯಾಪಕವಾಗಿ ಪ್ರಚಾರ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವ ನ್ಯಾಯಾಯಲಯವು ಆಸ್ತಿ ಹಾನಿ ಅಥವಾ ನಾಶದ ಮಾಹಿತಿಯನ್ನು ಕ್ಲೇಮ್ ಕಮಿಷನರ್‌ಗೆ ಸಲ್ಲಿಸುವಂತೆ ಸೂಚಿಸಿದೆ.

  • ಆಸ್ತಿ ಮೌಲ್ಯ ನಿರ್ಧಾರಕರ ಪಟ್ಟಿಯನ್ನು ಪರಿಹಾರ ಅಯುಕ್ತರಿಗೆ ರಾಜ್ಯ ಸರ್ಕಾರ ಪೂರೈಸಬೇಕು.

  • ಗಲಭೆಯಲ್ಲಿ ಭಾಗಿಯಾಗುವ ಮೂಲಕ ಆಸ್ತಿಗೆ ಹಾನಿ ಹಾಗೂ ನಷ್ಟ ಉಂಟು ಮಾಡಿದವರ ಮಾಹಿತಿ ಸಂಗ್ರಹಿಸಲು ಸಾರ್ವಜನಿಕರ ಬಳಿರುವ ವಿಡಿಯೋ ಮತ್ತು ರೆಕಾರ್ಡಿಂಗ್ಸ್‌ ಅನ್ನು ಪರಿಹಾರ ಆಯುಕ್ತರಿ‌ಗೆ ಸಲ್ಲಿಸುವಂತೆ ರಾಜ್ಯ ಸರ್ಕಾರ ನೋಟಿಸ್‌ ಹೊರಡಿಸಬೇಕು. ತನ್ನ ಬಳಿ ಇರುವ ವಿಡಿಯೋ ಮತ್ತು ರೆಕಾರ್ಡಿಂಗ್ ಗಳನ್ನು ರಾಜ್ಯ ಸರ್ಕಾರವು ಪರಿಹಾರ ಆಯುಕ್ತರಿ‌ಗೆ ಸಲ್ಲಿಸಬೇಕು.

  • ಸಾಕ್ಷಿಗಳ ಹಾಜರಾತಿ ಅಥವಾ ದಾಖಲೆಗಳ ಸಲ್ಲಿಕೆಗೆ ನಿರ್ದೇಶನ ನೀಡಬೇಕೆಂದಾದಲ್ಲಿ ಪರಿಹಾರ ಆಯುಕ್ತರ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್‌ಗೆ ಮನವಿ ಸಲ್ಲಿಸಬಹುದು.

ಪ್ರಕರಣದ ವಿಚಾರಣೆಯ ಮೇಲುಸ್ತುವಾರಿಯನ್ನು ಹೈಕೋರ್ಟ್ ಅಥವಾ ಪ್ರಾಸಿಕ್ಯೂಷನ್ ಹಾಗೂ ಜನರ ಮನಸ್ಸಿನಲ್ಲಿ ನಂಬಿಕೆ ಸೃಷ್ಟಿಸುವ ಸಂಸ್ಥೆಗೆ ವಹಿಸಬೇಕು ಎಂದು ವಕೀಲ ಶ್ರೀಧರ್ ಪ್ರಭು ಮನವಿ ಮಾಡಿದ್ದರು. ಪ್ರಕರಣದಲ್ಲಿ ಪೊಲೀಸ್ ಇಲಾಖೆ ಸಂತ್ರಸ್ತ ಸ್ಥಾನದಲ್ಲಿರುವುದರಿಂದ ಮುಂದೆ ಕೆಸರೆರಚಾಟ ಆರಂಭವಾಗುವ ಸಾಧ್ಯತೆ ಇದೆ. ಇದನ್ನು ತಡೆಯುವ ಉದ್ದೇಶದಿಂದ ಪ್ರಕರಣದ ವಿಚಾರಣೆಯನ್ನು ಕೇಂದ್ರೀಯ ಸಂಸ್ಥೆಗೆ ವಹಿಸಬೇಕು ಎಂದು ಕೋರಿದ್ದರು.

Also Read
ಬೆಂಗಳೂರು ಗಲಭೆ: ಎನ್‌ಐಎ ಗೆ ಪ್ರಕರಣ ಹಸ್ತಾಂತರ ಕೋರಿದ್ದ ಅರ್ಜಿಗಳನ್ನು ಆಧರಿಸಿ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್‌

ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇದುವರೆಗೆ ಕೈಗೊಂಡಿರುವ ಕ್ರಮಗಳ ದಾಖಲೆಗಳನ್ನು ಸಲ್ಲಿಸುವಂತೆ ಮತ್ತೊಮ್ಮೆ ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿತು.

ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಸಾಚಾತನದ ಬಗ್ಗೆ ಇನ್ನೂ ಪರಿಶೀಲಿಸಿಲ್ಲ ಎಂದಿರುವ ನ್ಯಾಯಾಲಯವು ಗಲಭೆಯ ಸಂದರ್ಭದಲ್ಲಿ ಆಸ್ತಿಗೆ ಉಂಟಾಗಿರುವ ಹಾನಿ ಮತ್ತು ನಷ್ಟಕ್ಕೆ ಮಾತ್ರ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 11ಕ್ಕೆ ವಿಚಾರಣೆ ಮುಂದೂಡಲಾಗಿದೆ.

Kannada Bar & Bench
kannada.barandbench.com