ಅಗತ್ಯವಿರುವ ವಕೀಲರಿಗೆ ಉಚಿತ ಐಪ್ಯಾಡ್, ಲ್ಯಾಪ್‌ಟಾಪ್‌ ಒದಗಿಸುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಿರುವ ಬಿಸಿಐ

ಸೂಕ್ತ ಶುದ್ಧೀಕರಣ ಕ್ರಿಯೆ ಮತ್ತು ಸಾಮಾಜಿಕ ಅಂತರವನ್ನು ಪಾಲಿಸುವ ಮೂಲಕ ಸಾಧ್ಯವಿರುವಷ್ಟು ಮಟ್ಟಿಗೆ ಮಾಮೂಲಿಯಂತೆ ಕೋರ್ಟ್‌ ವಿಚಾರಣೆಗಳನ್ನು ನಡೆಸಲು ಕೋರಿರುವ ಬಿಸಿಐ.
ಅಗತ್ಯವಿರುವ ವಕೀಲರಿಗೆ ಉಚಿತ ಐಪ್ಯಾಡ್, ಲ್ಯಾಪ್‌ಟಾಪ್‌ ಒದಗಿಸುವಂತೆ  ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಿರುವ ಬಿಸಿಐ
Published on

ಅಂತರ್ಜಾಲ ಆಧರಿತ ವಿಡಿಯೋ ವಿಚಾರಣೆಯನ್ನು (ವರ್ಚುವಲ್‌ ವಿಚಾರಣೆ) ನಡೆಸುವ ವಿಷಯವಾಗಿ ಇರುವ ಸಮಸ್ಯೆಗಳು ಮತ್ತು ತುರ್ತು ಅಗತ್ಯಗಳನ್ನು ಈಡೇರಿಸುವಂತೆ ಕೋರಿ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಲು ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ಬಿಸಿಐ, ವರ್ಚುವಲ್‌ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಅಗತ್ಯವಾದ ಸೌಕರ್ಯಗಳ ಅಲಭ್ಯತೆಯ ಬಗ್ಗೆ ವಕೀಲರ ದೂರುದುಮ್ಮಾನಗಳನ್ನು ಎತ್ತಿ ತೋರಿಸಿದ್ದು, ಕೋವಿಡ್‌-19ರ ಸಂಕಷ್ಟದ ನಡುವೆಯೇ ಸೂಕ್ತ ಸುರಕ್ಷಾ ಕ್ರಮಗಳೊಂದಿಗೆ ಕನಿಷ್ಠ ಪಕ್ಷ ನಿಯಂತ್ರಿತ ಭೌತಿಕ ವಿಚಾರಣೆಯನ್ನಾದರೂ ನಡೆಸುವಂತೆ ಕೋರಲು ಮುಂದಾಗಿದೆ.

ಈ ಸಂಬಂಧ ಬಿಸಿಐನ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ಪತ್ರಿಕಾ ಹೇಳಿಕೆ ನೀಡಿದ್ದು, ವಚುವಲ್ ವಿಚಾರಣೆ ಹಾಗೂ ಇ-ಫೈಲಿಂಗ್‌ ಮಾಡಲು ಅಗತ್ಯವಿರುವ ವಕೀಲರಿಗೆ ಐಪ್ಯಾಡ್‌ ಮತ್ತು ಕಂಪ್ಯೂಟರ್‌ಗಳನ್ನು ಲಭ್ಯವಾಗಿಸುವಂತೆ ಮನವಿ ಸಲ್ಲಿಸಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.

“ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ದೇಶದ ಎಲ್ಲ ವಕೀಲರಿಗೆ ವರ್ಚುವಲ್‌ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಅಗತ್ಯವಿರುವ ಸರಳ ಐಪ್ಯಾಡ್‌ ಗಳು/ಲ್ಯಾಪ್‌ಟಾಪ್‌ ಗಳನ್ನು ಒದಗಿಸುವ ಮೂಲಕ ಅವರು ತಮ್ಮ ಮನೆ, ಕಚೇರಿ, ಖಾಸಗಿ ಸ್ಥಳಗಳಿಂದ ಕೆಲಸ ನಿರ್ವಹಿಸಲು ಅನುವು ಮಾಡಿಕೊಡುವಂತೆ ಬಿಸಿಐ ಕೋರುತ್ತಿದ್ದು ಇದು ಅಗತ್ಯ ಕೂಡ ಆಗಿದೆ.”
ಬಿಸಿಐ ಪತ್ರಿಕಾ ಹೇಳಿಕೆ

ಅಲ್ಲದೆ, ಎಲ್ಲ ವಕೀಲರ ಒಕ್ಕೂಟಗಳ ಆವರಣಗಳಲ್ಲಿ ಉಚಿತ ಮತ್ತು ಪರಿಣಾಮಕಾರಿ ವೈಫೈ ಸಂಪರ್ಕವನ್ನು, ಆಧುನಿಕ ಸ್ಕ್ಯಾನರ್‌ ಗಳನ್ನು ಒದಗಿಸುವಂತೆ ಕೂಡ ಬಿಸಿಐ ಕೋರಿದೆ. ಮುಂದುವರೆದು, ವಕೀಲರಿಗೆ ಇ-ಫೈಲಿಂಗ್‌ ಹಾಗೂ ವರ್ಚುವಲ್‌ ವಿಚಾರಣೆಗಳಿಗೆ ಅಗತ್ಯವಿರುವ ತರಬೇತಿಯನ್ನು ನೀಡಲು ತರಬೇತುದಾರರನ್ನು ನಿಯುಕ್ತಿಗೊಳಿಸುವಂತೆ ಸುಪ್ರೀ ಕೋರ್ಟ್‌ ಮತ್ತು ಹೈಕೋರ್ಟ್‌ಗಳಿಗೆ ಬಿಸಿಐ ಕೋರಿದೆ.

ಕೋವಿಡ್‌-19 ನಿಯಂತ್ರಣವಿರುವ ಕಡೆಗಳಲ್ಲಿ ಭೌತಿಕ ವಿಚಾರಣೆಗಳನ್ನು ಆರಂಭಿಸುವಂತೆ ಕೋರಿದ್ದು, ಪರಿಣಾಮಕಾರಿ ಸಾಮಾಜಿಕ ಅಂತರ ಕಾಪಾಡುವಿಕೆ ಮತ್ತು ನ್ಯಾಯಾಲಯಗಳ ಆವರಣಗಳನ್ನು ದಿನಕ್ಕೆ ಎರಡು ಬಾರಿ ಶುದ್ಧೀಕರಣಗೊಳಿಸುವ ಕ್ರಮಗಳನ್ನು ಜಾರಿಗೊಳಿಸುವಂತೆ ನ್ಯಾಯಾಲಯಗಳಿಗೆ ಮನವಿ ಮಾಡಿದೆ.

ವರ್ಚುವಲ್‌ ವಿಚಾರಣೆ ಮತ್ತು ಇ-ಫೈಲಿಂಗ್ ಪ್ರಕ್ರಿಯೆಗಳನ್ನು ಸುಗಮಗೊಳಿಸುವ ಸಲುವಾಗಿ ವಕೀಲರ ಕುರಿತ ದತ್ತಾಂಶಗಳನ್ನು ಸುಪ್ರೀಂ ಕೋರ್ಟ್‌ ಇದಾಗಲೇ ಕೇಳಿದೆ. ಇದಕ್ಕೆ ಸರ್ಕಾರದ ಬೆಂಬಲವೂ ಅತ್ಯಗತ್ಯ ಎನ್ನುವುದನ್ನು ಬಿಸಿಐ ಒತ್ತಿ ಹೇಳಿದೆ. ಸರ್ಕಾರದ ಬೆಂಬಲವಿಲ್ಲದೆ ಈ ಸಾಂಕ್ರಾಮಿಕತೆಯ ಸಂದರ್ಭದ ಸಂಕಷ್ಟವನ್ನು ಮೆಟ್ಟಿ ನಿಲ್ಲುವುದು ಕಷ್ಟಸಾಧ್ಯ. ಸರ್ಕಾರಗಳ ಬೆಂಬಲವಿಲ್ಲದೆ ದತ್ತಾಂಶಗಳ ಕ್ರೋಢೀಕರಣದಿಂದ ಉಪಯೋಗವಿಲ್ಲ ಎಂದಿದೆ.

ಬಾರ್‌ ಕೌನ್ಸಿಲ್‌ ಅಧ್ಯಕ್ಷರು ಈ ಎಲ್ಲ ಅಂಶಗಳ ಕುರಿತಾಗಿ ಪ್ರಧಾನ ಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿಗಳು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ವಿದ್ಯುನ್ಮಾನ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು, ರಾಜ್ಯಗಳ ಹೈಕೋರ್ಟ್‌ ಗಳ ಮುಖ್ಯ ನ್ಯಾಯಮೂರ್ತಿಗಳು, ಸುಪ್ರೀಂ ಕೋರ್ಟಿನ ಇ-ಸಮಿತಿ ಅಧ್ಯಕ್ಷರಿಗೆ ಪತ್ರವನ್ನು ಬರೆಯಲಿದ್ದಾರೆ.

Kannada Bar & Bench
kannada.barandbench.com