“ದೇವರು ನಮ್ಮೊಳಗಿದ್ದಾನೆ, ಎಲ್ಲೆಡೆಯೂ ಇದ್ದಾನೆ”, ಈ ಸಂದರ್ಭದಲ್ಲಿ ಪೂಜಾಸ್ಥಳಗಳನ್ನು ತೆರೆಯಲಾಗದು: ಬಾಂಬೆ ಹೈಕೋರ್ಟ್‌

“ಧಾರ್ಮಿಕ ಕರ್ತವ್ಯಗಳನ್ನು, ಸಾರ್ವಜನಿಕ ಕರ್ತವ್ಯಗಳೊಂದಿಗೆ ಬೆಸೆಯುವುದು, ಮನುಕುಲದೆಡೆಗೆ ಜವಾಬ್ದಾರಿ ಪ್ರದರ್ಶಿಸುವುದು ಈ ಸಂದರ್ಭದಲ್ಲಿ ಎಲ್ಲ ವಿವೇಕಯುತ ವ್ಯಕ್ತಿಗಳ ಕರ್ತವ್ಯ,” ಎಂದು ಹೇಳಿದ ಘನ ನ್ಯಾಯಾಲಯ. ಕೋವಿಡ್‌ ನಿರ್ಬಂಧ ಮುಂದುವರಿಕೆ
“ದೇವರು ನಮ್ಮೊಳಗಿದ್ದಾನೆ, ಎಲ್ಲೆಡೆಯೂ ಇದ್ದಾನೆ”, ಈ ಸಂದರ್ಭದಲ್ಲಿ ಪೂಜಾಸ್ಥಳಗಳನ್ನು ತೆರೆಯಲಾಗದು: ಬಾಂಬೆ ಹೈಕೋರ್ಟ್‌

ಕೊರೊನಾ ಸಾಂಕ್ರಾಮಿಕತೆಯ ತೀವ್ರತೆಯ ಹಿನ್ನೆಲೆಯಲ್ಲಿ ಮುಚ್ಚಲಾಗಿರುವ ಜೈನ ದೇವಾಲಯಗಳನ್ನು ತೆರೆಯುವುದನ್ನು ಕೋರಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳನ್ನು ಸಾರ್ವಜನಿಕ ಆರೋಗ್ಯ ಮತ್ತು ಜೀವನದ ಅಮೂಲ್ಯತೆಯನ್ನು ಕಾಪಾಡುವ ಉದ್ದೇಶದಿಂದ ಬಾಂಬೆ ಹೈಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ (ಅಂಕಿತ್‌ ಹೀರ್‌ ಜಿ ವೋರಾ V. ಭಾರತೀಯ ಒಕ್ಕೂಟ ಮತ್ತು ಇತರರು; ಶ್ರೀ ಟ್ರಸ್ಟಿ ಆತ್ಮ ಕಮಲ್‌ ಲಬ್ದೀಸುರೀಶ್ವರ್‌ ಜೀ ಜೈನ್ ಗ್ಯಾನ್‌ ಮಂದಿರ್‌ ಟ್ರಸ್ಟ್ ಮತ್ತು ಇತರರು V. ಮಹಾರಾಷ್ಟ್ರ ಸರ್ಕಾರ ಮತ್ತ ಇತರರು). ಅರ್ಜಿಯನ್ನು ತಿರಸ್ಕರಿಸುತ್ತಾ ನ್ಯಾಯಾಲಯವು ಹೀಗೆ ಹೇಳಿತು:

“ಧಾರ್ಮಿಕ ಕರ್ತವ್ಯಗಳನ್ನು, ಸಾರ್ವಜನಿಕ ಕರ್ತವ್ಯಗಳೊಂದಿಗೆ ಬೆಸೆಯುವುದು ಹಾಗೂ ಮನುಕುಲದೆಡೆಗೆ ಜವಾಬ್ದಾರಿ ಪ್ರದರ್ಶಿಸುವುದು ಈ ಸಂದರ್ಭದಲ್ಲಿ ಎಲ್ಲ ವಿವೇಕಯುತ ವ್ಯಕ್ತಿಗಳ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಅರ್ಜಿದಾರರಿಗೆ ಈ ಮುಂಚೆ ವಿಚಾರಣೆಯ ವೇಳೆ ಹೇಳಿದ್ದನ್ನೇ ಮತ್ತೊಮ್ಮೆ ಪುನರುಚ್ಚರಿಸುತ್ತೇವೆ, ‘ದೇವರು ನಮ್ಮೊಳಗಿದ್ದಾನೆ’ ಮತ್ತು ‘ದೇವರು ಎಲ್ಲೆಡೆಯೂ ಇದ್ದಾನೆ’.” ಎಂದು ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸುತ್ತಾ ತಿಳಿಸಿತು.
ಬಾಂಬೆ ಹೈಕೋರ್ಟ್

ನ್ಯಾಯಮೂರ್ತಿ ಎಸ್‌ ಜೆ ಕಥಾವಲ್ಲಾ ಮತ್ತು ಮಾಧವ್‌ ಜೆ ಜಾಮ್‌ದಾರ್ ಅವರಿದ್ದ ಪೀಠವು “ಅತ್ಯಂತ ಒಲ್ಲದ ಮನಸ್ಸಿನಿಂದ” ಅರ್ಜಿಯಲ್ಲಿ ಕೋರಲಾಗಿರುವ ಪರಿಹಾರವನ್ನು ತಿರಸ್ಕರಿಸುತ್ತಿರುವುದಾಗಿ ಹೇಳಿತು. ಜೈನರಿಗೆ ಅತ್ಯಂತ ಪವಿತ್ರವಾದ ಪರ್ಯೂಷನ್‌ ಅವಧಿಯಲ್ಲಿ ಪೂಜೆಯನ್ನು ಸಲ್ಲಿಸಲು ತ್ವರಿತವಾಗಿ ಅವಕಾಶ ಮಾಡಿಕೊಡಬೇಕು ಎನ್ನುವ ಮನವಿಯನ್ನು ಅರ್ಜಿದಾರರು ನ್ಯಾಯಾಲಯದ ಮುಂದೆ ಮಾಡಿದ್ದರು.

ಆಗಸ್ಟ್‌ 11ರಂದು ನ್ಯಾಯಾಲಯವು ಮಹಾರಾಷ್ಟ್ರದ ಪ್ರಕೃತಿ ವಿಕೋಪ ನಿರ್ವಹಣೆ ಮತ್ತು ಪರಿಹಾರ ಇಲಾಖೆಯ ಕಾರ್ಯದರ್ಶಿಯವರಿಗೆ, ಅರ್ಜಿದಾರರ ಮನವಿಯ ಅನುಸಾರ ದೇವಸ್ಥಾನಗಳನ್ನು ತೆರೆಯಲು ಅನುಮತಿ ನೀಡುವ ಸಂಬಂಧ ತಮ್ಮ ತೀರ್ಮಾನವನ್ನು ತಿಳಿಸಿವಂತೆ ಸೂಚಿಸಿತ್ತು. ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ ಕಾರ್ಯದರ್ಶಿಯವರ ಆದೇಶವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ನ್ಯಾಯಾಲಯವು ಕಾರ್ಯದರ್ಶಿಯವರು ನೀಡಿದ್ದ ಕಾರಣಗಳನ್ನು ಒಪ್ಪಿಕೊಂಡು ಹೀಗೆ ಹೇಳಿದೆ:

“...ನಾವು ಜೈನ ಸಮುದಾಯದ ಧಾರ್ಮಿಕ ತೀವ್ರತೆಯನ್ನು ಶ್ಲಾಘಿಸುತ್ತೇವೆ. ಅವರು ಅಧ್ಯಾತ್ಮಿಕ ಸಾಧನೆಗಾಗಿ/ಚಟುವಟಿಕೆಗಳಿಗಾಗಿ ಪೂಜಾಸ್ಥಳಗಳಿಗೆ ಪ್ರವೇಶವನ್ನು ಕೋರಿದ್ದಾರೆ. ಅಲ್ಲದೆ, ರಾಜ್ಯದ ವಿವಿಧ ವರ್ಗದ ಜನತೆಗೆ ವಿವಿಧ ನಿರ್ಬಂಧಗಳಿಂದಾಗಿ ತೀವ್ರ ತೊಂದರೆಯಾಗಿರುವುದರ ಬಗ್ಗೆಯೂ ನಾವು ಸಹಾನುಭೂತಿ ಹೊಂದಿದ್ದೇವೆ. ಇದೇ ವೇಳೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಮೇಲಿರುವ ಅತೀವ ಹೊರೆಯ ನಡುವೆಯೂ ತನ್ನ ನಾಗರಿಕರ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಸಾಧ್ಯವಿರುವ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿರುವುದನ್ನು ಹಾಗೂ ಒಟ್ಟಾರೆ ಹಿತದೃಷ್ಟಿಯಿಂದ ಮೇಲೆ ಹೇಳಿದ ನಿರ್ಬಂಧಗಳನ್ನು ಹೇರಿರುವುದನ್ನು ಸಾರ್ವಜನಿಕರು ಶ್ಲಾಘಿಸಬೇಕು ಎನ್ನುವುದು ನಮ್ಮ ಅಭಿಪ್ರಾಯವಾಗಿದೆ. ಸಾರ್ವಜನಿಕ ಆರೋಗ್ಯವನ್ನು ಕಾಪಾಡುವುದು ಅತ್ಯಂತ ಮಹತ್ವದ ಪ್ರಾಮುಖ್ಯತೆಯನ್ನು ಪಡೆದಿದೆ. ಜಗತ್ತನ್ನೇ ಆವರಿಸಿಕೊಂಡಿರುವ ಸಾಂಕ್ರಾಮಿಕತೆಯು ನಮ್ಮ ದೇಶದಲ್ಲಿಯೂ ಸಹ ತೀವ್ರ ಸಾವುನೋವಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಕಾರ್ಯದರ್ಶಿಯವರು ನೀಡಿರುವ ಕಾರಣಗಳನ್ನು ಒಪ್ಪುತ್ತೇವೆ…”

ಬಾಂಬೆ ಹೈಕೋರ್ಟ್

ಅರ್ಜಿದಾರರ ಮನವಿಯ ನಂತರ ಕಾರ್ಯದರ್ಶಿ ಕಿಶೋರ್‌ ರಾಜೆ ನಿಂಬಾಳ್ಕರ್‌ ಅವರು, ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಅರ್ಜಿದಾರರ ಮನವಿಯನ್ನು ಪುರಸ್ಕರಿಸಲಾಗದು ಎಂದಿದ್ದರು. ವಿವಿಧ ಹಂತಗಳಲ್ಲಿ ಅನ್‌ ಲಾಕ್‌ ಪ್ರಕ್ರಿಯೆಗೆ ಚಾಲನೆ ನೀಡಿದಾಗ, ಪೂಜಾಸ್ಥಳಗಳನ್ನು ತೆರೆಯುವ ಕುರಿತ ನಿರ್ಧಾರವನ್ನು ಅನ್‌ ಲಾಕ್ ಮಾರ್ಗಸೂಚಿ ಅನುಸಾರ ಪ್ರಮಾಣಿತ ಕಾರ್ಯಾಚರಣೆ ಪ್ರಕ್ರಿಯೆಗಳಿಗೆ (ಎಸ್‌ಒಪಿ) ಬದ್ಧವಾಗಿ ತೆರೆಯುವಂತೆ ಸೂಚಿಸಲಾಗಿತ್ತು.

ಮಹಾರಾಷ್ಟ್ರವು ತೀವ್ರ ಕೋವಿಡ್‌ ಸಾಂಕ್ರಾಮಿಕತೆಗೆ ಈಡಾಗಿದೆ.ಈ ವಾಸ್ತವ ಸನ್ನಿವೇಶದ ಹಿನ್ನೆಲೆಯಲ್ಲಿ ಪೂಜಾ ಸ್ಥಳಗಳನ್ನು ತೆರೆಯದೆ ಇರುವ ಹಾಗೂ ಯಾವುದೇ ರೀತಿಯ ಧಾರ್ಮಿಕ ಸಭೆ, ಸಮಾರಂಭ, ಆರಾಧನೆಗಳಿಗೆ ಅನುಮತಿ ನೀಡದೆ ಇರುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com