[ಕೋವಿಡ್ - 19] ಎಲ್ಲ ಮಧ್ಯಂತರ ಆದೇಶಗಳನ್ನೂ ಸೆಪ್ಟೆಂಬರ್‌ 30ರವರೆಗೆ ವಿಸ್ತರಿಸಿದ ಕರ್ನಾಟಕ ಹೈಕೋರ್ಟ್‌

ತನ್ನಿಂದ, ಅಧೀನ ನ್ಯಾಯಾಲಯಗಳಿಂದ ಮತ್ತು ರಾಜ್ಯದ ಎಲ್ಲ ನ್ಯಾಯಾಧಿಕರಣಗಳಿಂದ ನೀಡಲಾಗಿರುವ ಮಧ್ಯಂತರ ಆದೇಶಗಳ ವಿಸ್ತರಣೆಯನ್ನು ಕರ್ನಾಟಕ ಹೈಕೋರ್ಟ್‌ ಸೆಪ್ಟೆಂಬರ್‌ 30ರವರೆಗೆ ವಿಸ್ತರಿಸಿದೆ.
[ಕೋವಿಡ್ - 19] ಎಲ್ಲ ಮಧ್ಯಂತರ ಆದೇಶಗಳನ್ನೂ ಸೆಪ್ಟೆಂಬರ್‌ 30ರವರೆಗೆ ವಿಸ್ತರಿಸಿದ ಕರ್ನಾಟಕ ಹೈಕೋರ್ಟ್‌

ಕೋವಿಡ್‌ - 19 ರಾಜ್ಯದಲ್ಲಿ ವ್ಯಾಪಕವಾಗಿ ಹರಡಿರುವ ಪರಿಣಾಮ ನಾಗರಿಕರು ನ್ಯಾಯಾಲಯಗಳಿಗೆ ಮೊರೆಹೋಗುವುದಕ್ಕೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಅಂತ್ಯಗೊಳ್ಳಲಿರುವ ತನ್ನಿಂದ ಹಾಗೂ ಅಧೀನ ನ್ಯಾಯಾಲಯಗಳಿಂದ ಮತ್ತು ರಾಜ್ಯದಲ್ಲಿನ ನ್ಯಾಯಾಧಿಕರಣಗಳಿಂದ ನೀಡಲಾಗಿರುವ ಎಲ್ಲ ಮಧ್ಯಂತರ ಆದೇಶಗಳನ್ನು ಕರ್ನಾಟಕ ಹೈಕೋರ್ಟ್‌ ಸೆಪ್ಟೆಂಬರ್‌ 30ರವರೆಗೆ ವಿಸ್ತರಿಸಿದೆ.

ಈ ಕುರಿತು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಪೀಠವು, “ನಾಗರಿಕರು ನ್ಯಾಯಾಲಯಗಳನ್ನು ಮೊರೆಹೋಗಲು ಇರುವ ತಮ್ಮ ಹಕ್ಕಿನಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ, ನಮ್ಮ ಕಾನೂನು ವ್ಯಾಪ್ತಿಯನ್ನು ಬಳಸಿಕೊಂಡು ಸಂವಿಧಾನದತ್ತವಾಗಿರುವ 226 ಮತ್ತು 227ನೇ ವಿಧಿಯನ್ವಯ ನಿರ್ದಿಷ್ಟ ನಿರ್ದೇಶನಗಳನ್ನು ನೀಡಬಯಸುತ್ತೇವೆ. ನ್ಯಾಯಾಲಯಕ್ಕೆ ಮೊರೆ ಹೋಗಲು ಸಾಧ್ಯವಾಗದ ಕಾರಣದಿಂದಾಗಿ ಕಕ್ಷಿದಾರರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಈ ನಿರ್ದೇಶನಗಳ ಅಗತ್ಯವಿರುತ್ತದೆ,” ಎಂದು ವಿವರಿಸಿತು.

“ನಾಗರಿಕರು ನ್ಯಾಯಾಲಯಗಳನ್ನು ಮೊರೆಹೋಗಲು ಇರುವ ತಮ್ಮ ಹಕ್ಕಿನಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ, ನಮ್ಮ ಕಾನೂನು ವ್ಯಾಪ್ತಿಯನ್ನು ಬಳಸಿಕೊಂಡು ಸಂವಿಧಾನದತ್ತವಾಗಿರುವ 226 ಮತ್ತು 227ನೇ ವಿಧಿಯನ್ವಯ ನಿರ್ದಿಷ್ಟ ನಿರ್ದೇಶನಗಳನ್ನು ನೀಡಬಯಸುತ್ತೇವೆ. ನ್ಯಾಯಾಲಯಕ್ಕೆ ಮೊರೆ ಹೋಗಲು ಸಾಧ್ಯವಾಗದ ಕಾರಣದಿಂದಾಗಿ ಕಕ್ಷಿದಾರರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಈ ನಿರ್ದೇಶನಗಳ ಅಗತ್ಯವಿರುತ್ತದೆ.”

ಕರ್ನಾಟಕ ಹೈಕೋರ್ಟ್

ಕಕ್ಷಿದಾರರಿಗೆ ತೊಂದರೆಯಾಗಬಾರದು ಎನ್ನುವ ಸದುದ್ದೇಶದಿಂದ ಈ ಕೆಳಕಂಡ ಮಧ್ಯಂತರ ಆದೇಶಗಳನ್ನು ಕರ್ನಾಟಕ ಹೈಕೋರ್ಟ್ ವಿಸ್ತರಿಸಿದೆ:

1. ಕರ್ನಾಟಕ ಹೈಕೋರ್ಟ್‌ ನಿಂದ ಹೊರಡಿಸಲಾದ ಎಲ್ಲ ಮಧ್ಯಂತರ ಅದೇಶಗಳು, ಎಲ್ಲ ಜಿಲ್ಲಾ ನ್ಯಾಯಾಲಯಗಳು, ಸಿವಿಲ್‌ ನ್ಯಾಯಾಲಯಗಳು, ಕೌಟುಂಬಿಕ ನ್ಯಾಯಾಲಯಗಳು, ಕಾರ್ಮಿಕ ನ್ಯಾಯಾಲಯಗಳು, ಕೈಗಾರಿಕಾ ನ್ಯಾಯಾಧಿಕರಣಗಳು ಹಾಗೂ ರಾಜ್ಯದ ಹೈಕೋರ್ಟ್‌ ಅಡಿಯಲ್ಲಿ ಬರುವ ಎಲ್ಲ ನ್ಯಾಯಾಧಿಕರಣಗಳ ಮಧ್ಯಂತರ ಆದೇಶಗಳು ಈ ವ್ಯಾಪ್ತಿಗೆ ಒಳಪಡುತ್ತವೆ. ಆಗಸ್ಟ್‌ 7ರಿಂದ ಅನ್ವಯವಾಗುವಂತೆ ಮುಂದಿನ ಒಂದು ತಿಂಗಳ ಅವಧಿಯೊಳಗೆ ಅಂತ್ಯಗೊಳ್ಳುವ ಮಧ್ಯಂತರ ಅದೇಶಗಳು ಇದರಡಿ ಬರುತ್ತವೆ. ಯಾವ ಮಧ್ಯಂತರ ಆದೇಶಗಳು ನಿಯಮಿತ ಕಾಲಾವಧಿಗೆ ಒಳಪಟ್ಟಿರುವುದಿಲ್ಲವೋ, ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತವೋ ಅವುಗಳು ಹಾಗೇ ಮುಂದುವರೆಯಲಿವೆ.

2. ಆಗಸ್ಟ್‌ 7ರಿಂದ ಅನ್ವಯವಾಗುವಂತೆ ಒಂದು ತಿಂಗಳ ಅವಧಿಯೊಳಗೆ ಅಂತ್ಯಗೊಳ್ಳುವ ಎಲ್ಲ ಜಾಮೀನು/ಸಂಭಾವ್ಯ ಜಾಮೀನುಗಳು.

3. ಹೈಕೋರ್ಟ್‌, ಜಿಲ್ಲಾ ನ್ಯಾಯಾಲಯಗಳು ಅಥವಾ ಸಿವಿಲ್‌ ನ್ಯಾಯಾಲಯಗಳಿಂದ ಹೊರಡಿಸಲಾಗಿರುವ ತೆರವು, ಧ್ವಂಸ ಮತ್ತು ಸ್ವಾಧೀನ ತಪ್ಪಿಸುವಿಕೆಯ ಎಲ್ಲ ಆದೇಶಗಳನ್ನು ಆಗಸ್ಟ್‌ 7ರಿಂದ ಅನ್ವಯವಾಗುವಂತೆ ಮುಂದಿನ ಒಂದು ತಿಂಗಳ ಅವಧಿಯವರೆಗೆ ತಡೆಹಿಡಿಯಲಾಗಿರುತ್ತದೆ. ‌

ಇದಲ್ಲದೆ ನ್ಯಾಯಾಲಯವು ರಾಜ್ಯ ಸರ್ಕಾರ ಹಾಗೂ ಅದರ ಸಂಸ್ಥೆಗಳಿಗೆ ಜನರನ್ನು ತೆರವುಗೊಳಿಸುವ, ನಿರ್ಮಾಣಗಳನ್ನು ಧ್ವಂಸಗೊಳಿಸುವ ಪ್ರಕ್ರಿಯೆಯನ್ನು ನಿಧಾನಗೊಳಿಸುವಂತೆ ಸೂಚಿಸಿದೆ. ಈ ಹಿಂದೆ ಹೈಕೋರ್ಟ್‌ ಆಗಸ್ಟ್ 7ರವರೆಗೆ ಮಧ್ಯಂತರ ಆದೇಶಗಳನ್ನು ವಿಸ್ತರಿಸಿದ್ದನ್ನು ಇಲ್ಲಿ ನೆನೆಯಬಹುದು.

Related Stories

No stories found.
Kannada Bar & Bench
kannada.barandbench.com