‘ಡಿಜಿಟಲ್‌ ಅಸಮಾನತೆ’ಯ ಕಾರಣದಿಂದಾಗಿ ಅಂತಿಮ ವರ್ಷದ ಪರೀಕ್ಷೆ ನಡೆಸಲಾಗುತ್ತಿಲ್ಲ: ಸುಪ್ರೀಂಗೆ ದೆಹಲಿ ಸರ್ಕಾರದ ಹೇಳಿಕೆ

ದೆಹಲಿ ರಾಜ್ಯ ವ್ಯಾಪ್ತಿಗೆ ಒಳಪಡುವ ವಿಶ್ವವಿದ್ಯಾಲಯಗಳಲ್ಲಿ ಆನ್‌ಲೈನ್‌ ತರಗತಿಗಳನ್ನು ನಡೆಸಲು ಕೈಗೊಂಡ ಉತ್ತಮ ಪ್ರಯತ್ನಗಳ ಹೊರತಾಗಿಯೂ ‘ಡಿಜಿಟಲ್‌ ಅಸಮಾನತೆ’ಯಿಂದಾಗಿ ಎಲ್ಲರಿಗೂ ಆನ್‌ಲೈನ್‌ ತರಗತಿಗಳು ಲಭ್ಯವಾಗುತ್ತಿಲ್ಲ ಎಂದ ದೆಹಲಿ ಸರ್ಕಾರ.
‘ಡಿಜಿಟಲ್‌ ಅಸಮಾನತೆ’ಯ ಕಾರಣದಿಂದಾಗಿ ಅಂತಿಮ ವರ್ಷದ ಪರೀಕ್ಷೆ ನಡೆಸಲಾಗುತ್ತಿಲ್ಲ: ಸುಪ್ರೀಂಗೆ ದೆಹಲಿ ಸರ್ಕಾರದ ಹೇಳಿಕೆ
Published on

ಸೆಪ್ಟೆಂಬರ್ 30ರ ಒಳಗೆ ಅಂತಿಮ ಪದವಿ ಪರೀಕ್ಷೆಗಳನ್ನು ನಡೆಸಬೇಕು ಎನ್ನುವ ಯುಜಿಸಿ ನಿಯಮಾವಳಿಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯೊಂದಕ್ಕೆ ಉತ್ತರವಾಗಿ ದೆಹಲಿ ಸರ್ಕಾರವು ಸುಪ್ರೀಂ ಕೋರ್ಟ್‌ ಗೆ ದೆಹಲಿ ರಾಜ್ಯ ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ರದ್ದುಗೊಳಿಸಿರುವುದಾಗಿ ತಿಳಿಸಿದೆ.

ನೂತನ ಆದೇಶವೊಂದರಲ್ಲಿ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋದಿಯಾ ಅವರು, ದೆಹಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಅಂತಿಮವರ್ಷದ ಪದವಿ ಪರೀಕ್ಷೆಗಳೂ ಸೇರಿದಂತೆ ಎಲ್ಲ ಆನ್‌ಲೈನ್ ಮತ್ತು ಆಫ್‌ಲೈನ್ ಲಿಖಿತ‌ ಸೆಮಿಸ್ಟರ್‌ ಪರೀಕ್ಷೆಗಳನ್ನು ರದ್ದುಗೊಳಿಸಲು ಸೂಚಿಸಿದ್ದಾರೆ.

ಈ ಸಂಬಂಧ ಎಲ್ಲ ಪಕ್ಷಕಾರರು ತಮ್ಮ ಅಫಿಡವಿಟ್ ಅನ್ನು ಆಗಸ್ಟ್ ಏಳರೊಳಗೆ ಸಲ್ಲಿಸುವಂತೆ‌ ಸುಪ್ರೀಂ ಕೋರ್ಟ್‌ ಸೂಚಿಸಿತ್ತು, ಇದಕ್ಕೆ ಸಂಬಂಧಿಸಿದಂತೆ ಪ್ರತ್ಯುತ್ತರಗಳನ್ನು ಆನಂತರದ ದಿನ ಸಲ್ಲಿಸಬಹುದಾಗಿದೆ.

ದೆಹಲಿ ಸರ್ಕಾರವು ತನ್ನ ಅಫಿಡವಿಟ್‌ ಸಲ್ಲಿಸಿದ್ದು, ಜುಲೈ 11ರಂದು ದೆಹಲಿ ಸರ್ಕಾರದ ಉಪ ಮುಖ್ಯಮಂತ್ರಿ/ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವರು ನಿರ್ಣಯವೊಂದನ್ನು ತೆಗೆದುಕೊಂಡಿದ್ದು, ಇದರ ಅನುಸಾರ ರಾಜ್ಯದ ಅಡಿ ಬರುವ ಎಲ್ಲ ವಿಶ್ವವಿದ್ಯಾಲಯಗಳ ಆನ್‌ಲೈನ್‌ - ಆಫ್‌ಲೈನ್ ಪರೀಕ್ಷೆಗಳನ್ನು ಕೋವಿಡ್‌ - 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ. ‌

ಕೆಲ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಅಂತಿಮ ವರ್ಷದ ಸೆಮಿಸ್ಟರ್‌ ಪರೀಕ್ಷೆಗಳನ್ನು ಮಾಡಿ ಮುಗಿಸುವುದರ ಪರವಾಗಿದ್ದರು. ಆದರೆ ಸೆಪ್ಟೆಂಬರ್ ಅಂತ್ಯದೊಳಗೆ ಅಂತಿಮ ವರ್ಷದ ಪರೀಕ್ಷೆಗಳನ್ನು ಮಾಡಬೇಕು ಎನ್ನುವ ಯುಜಿಸಿ ನಿರ್ದೇಶನವೂ ಸೇರಿದಂತೆ ಎಲ್ಲ ಮಾಹಿತಿಗಳನ್ನು ಪರಿಶೀಲಿಸಿದ ಮೇಲೆ ದೆಹಲಿ ಸರ್ಕಾರವು ಜುಲೈ 11ರ ತನ್ನ ನಿರ್ಧಾರಕ್ಕೇ ಬದ್ಧವಾಗಿದ್ದು ಪರೀಕ್ಷೆಗಳನ್ನು ನಡೆಸದೆ ಇರಲು ತೀರ್ಮಾನಿಸಿದೆ.

ಉಪಕುಲಪತಿಗಳ ಅಭಿಪ್ರಾಯಗಳು, ಎಂಎಚ್‌ಆರ್ಡಿ/ಯುಜಿಸಿ ನಿಯಮಾವಳಿಗಳನ್ನು ಉಪಮುಖ್ಯಮಂತ್ರಿಗಳ ಮುಂದಿರಿಸಲಾಯಿತು. ಅವರು ಜುಲೈ 11ರಂದು ತೆಗೆದುಕೊಂಡಿದ್ದ ನಿರ್ಧಾರವನ್ನೇ ಪುನರುಚ್ಚರಿಸಿದರು. ಇದರ ಅನುಸಾರ, ದೆಹಲಿ ರಾಜ್ಯ ವಿಶ್ವವಿದ್ಯಾಲಯಗಳೆಲ್ಲವೂ ಅಂತಿಮ ವರ್ಷದ ಪದವಿ ಪರೀಕ್ಷೆಯೂ ಸೇರಿದಂತೆ ಎಲ್ಲ ರೀತಿಯ ಆನ್‌ಲೈನ್‌ ಮತ್ತು ಆಫ್‌ಲೈನ್‌ ಸೆಮಿಸ್ಟರ್‌ ಪರೀಕ್ಷೆಗಳನ್ನು ರದ್ದುಗೊಳಿಸಬೇಕು. ಅಲ್ಲದೆ, ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಪದವಿ ನೀಡಲು ಹಾಗೂ ಮಧ್ಯಂತರ ಸೆಮಿಸ್ಟರ್‌ಗಳಲ್ಲಿರುವ ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ಉತ್ತೀರ್ಣಗೊಳಿಸಲು ಅನುವಾಗುವಂತೆ ಪರ್ಯಾಯ ಪರೀಕ್ಷಾ ಕ್ರಮಗಳನ್ನು ಕೈಗೊಳ್ಳಲು ವಿಶ್ವವಿದ್ಯಾಲಯಗಳಿಗೆ ಸಲಹೆ ನೀಡಲಾಗಿದೆ

ದೆಹಲಿ ಸರ್ಕಾರದ ಅಫಿಡವಿಟ್‌ನಲ್ಲಿನ ಹೇಳಿಕೆ

ಮುಂದುವರೆದು ದೆಹಲಿ ಸರ್ಕಾರವು, “ದೆಹಲಿ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಆನ್‌ಲೈನ್‌ ತರಗತಿಗಳನ್ನು ನಡೆಸಲು ಎಲ್ಲ ಉತ್ತಮ ಪ್ರಯತ್ನಗಳನ್ನೂ ಮಾಡಲಾಯಿತು, ಆದರೆ ನಮ್ಮ ಮುಂದಿರುವ ಡಿಜಿಟಲ್ ಅಸಮಾನತೆಯ ವಾಸ್ತವವೆಂದರೆ ಆನ್‌ಲೈನ್‌ ತರಗತಿಗಳು ಎಲ್ಲರಿಗೂ ಸಮನಾಗಿ ಲಭ್ಯವಾಗುತ್ತಿಲ್ಲ,” ಎಂದು ತಿಳಿಸಿದೆ.

ಅಲ್ಲದೆ, “ಅತ್ಯಂತ ಕಷ್ಟಕರವಾದ ಈ ಸಮಯದಲ್ಲಿ, ಸಾಮಾನ್ಯ ರೀತಿಯ ದೈಹಿಕ ಉಪಸ್ಥಿತಿಯ ತರಗತಿಗಳು ಸಂಪೂರ್ಣವಾಗಿ ಅಡಚಣೆಗೊಳಗಾದವು. ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿಗಳ ಲಭ್ಯತೆ ಇರಲಿಲ್ಲ, ಕಾಲೇಜುಗಳ ಗ್ರಂಥಾಲಯಗಳು ಮುಚ್ಚಿದ್ದವು. ಇಂತಹ ವಿಚಿತ್ರ ಪರಿಸ್ಥಿತಿಯಲ್ಲಿ ಆನ್‌ಲೈನ್‌ ಮೂಲಕ ಶೈಕ್ಷಣಿಕ ಲಭ್ಯತೆ ಮಾಡಲು ಪ್ರಯತ್ನಿಸಲಾಯಿತಾದರೂ ಸಂಪೂರ್ಣವಾದ ಪರೀಕ್ಷೆಗಳನ್ನು ಎದುರಿಸಲು ಬೇಕಾದ ಸಿದ್ಧತೆ ವಿದ್ಯಾರ್ಥಿಗಳಿಗೆ ದೊರೆಯಲಿಲ್ಲ,” ಎಂದು ಹೇಳಿದೆ.

Kannada Bar & Bench
kannada.barandbench.com