ಸ್ವಯಂ ಕ್ವಾರಂಟೈನ್‌ ನಿಂದ ಮರಳಿದ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಅಭಯ್‌ ಓಕಾ

ಕರ್ನಾಟಕ ಹೈಕೋರ್ಟ್‌ ನ 46 ಸಿಬ್ಬಂದಿಗಳಿಗೆ ಕೋವಿಡ್‌-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವುದಾಗಿ ಮುಖ್ಯ ನ್ಯಾಯಮೂರ್ತಿ ಓಕಾ ಅವರು ಹೇಳಿದ್ದಾರೆ.
Abhay Oka
Abhay Oka

ಹಿಂದಿನ ವಾರವಿಡೀ ತಾವು ಸ್ವಯಂ ಪ್ರೇರಿತರಾಗಿ ಕ್ವಾರಂಟೈನ್ ನಲ್ಲಿ ಇದ್ದುದಾಗಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರು ಗುರುವಾರ ತಿಳಿಸಿದರು. ಕೋವಿಡ್-19ರ ವಿರುದ್ಧ ಮುಂಜಾಗರೂಕತಾ ಕ್ರಮವಾಗಿ ಕ್ವಾರಂಟೈನ್‌ ಗೆ ಒಳಗಾಗಿದ್ದಾಗಿ ಅವರು ಹೇಳಿದರು. ‌

ಹೈಕೋರ್ಟಿನ ಸುಮಾರು 46 ಸಿಬ್ಬಂದಿಗೆ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಈ ಪರಿಸ್ಥಿತಿಯಿಂದಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ತೀವ್ರ ಒತ್ತಡದಲ್ಲಿದ್ದಾರೆ ಎಂದು ಅವರು ವಿವರಿಸಿದರು. ಫ್ರ್ಯಾಂಕ್ಲಿನ್‌ ಟೆಂಪಲ್ಟನ್‌ ಮ್ಯೂಚುವಲ್‌ ಫಂಡ್‌ ಕುರಿತ ಪ್ರಕರಣದ ವಿಚಾರಣೆ ವೇಳೆ ಅವರು ಈ ಅಂಶಗಳನ್ನು ಬಹಿರಂಗಪಡಿಸಿದರು.

ಮುಖ್ಯ ನ್ಯಾಯಮೂರ್ತಿಗಳು ಜುಲೈ 29ರಿಂದ ಪ್ರಕರಣದ ವಿಚಾರಣೆಯಲ್ಲಿ ಭಾಗವಹಿಸಿರಲಿಲ್ಲ. ಆಗಸ್ಟ್‌ 3ರ ಮಧ್ಯಾಹ್ನದ ನ್ಯಾಯಾಂಗದ ಕಲಾಪಗಳಿಗೆ ಅವರು ಹಾಜರಿದ್ದರು. ಇದಕ್ಕೂ ಮುನ್ನ ಮುಖ್ಯ ನ್ಯಾಯಮೂರ್ತಿಗಳು, ಅನೇಕ ಹೈಕೋಟ್‌F ಸಿಬ್ಬಂದಿಗಳು ಕೋವಿಡ್‌ ನಿಂದಾಗಿ ಕ್ವಾರಂಟೈನ್‌ ಗೆ ಒಳಗಾಗಿರುವುದಾಗಿ ತಿಳಿಸಿದ್ದರು. ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಅವರೂ ಸಹ ಕಳೆದ ವಾರ ಪ್ರಕರಣವೊಂದರ ವಿಚಾರಣೆ ವೇಳೆ ಇಬ್ಬರು ಹೈಕೋರ್ಟ್‌ ನ್ಯಾಯಮೂರ್ತಿಗಳು ಕ್ವಾರಂಟೈನ್‌ ಗೆ ಒಳಗಾಗಿರುವುದಾಗಿ ತಿಳಿಸಿದ್ದರು.

ಪ್ರಸ್ತುತ ಕರ್ನಾಟಕ ಹೈಕೋರ್ಟ್‌ ನ 25 ಪೀಠಗಳು ವಿಡಿಯೋ ಮುಖಾಂತರ ಪ್ರಕರಣಗಳ ವಿಚಾರಣೆಯನ್ನು ನಡೆಸುತ್ತಿವೆ. ಕರ್ನಾಟಕದಲ್ಲಿ ಕಳೆದ ಕೆಲ ವಾರಗಳಿಂದ ಕೋವಿಡ್‌ ಪೀಡಿತರ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವುದನ್ನು ಇಲ್ಲಿ ಗಮನಿಸಬಹುದು. ಜೂನ್ 1ರಿಂದ ಕರ್ನಾಟಕ ಹೈಕೋರ್ಟ್ ಕೇವಲ‌ ನಿಯಮಿತ ಪ್ರಕರಣಗಳನ್ನಷ್ಟೇ ತೆರೆದ ಕೋರ್ಟ್‌ ನಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳುತ್ತಿತ್ತು. ಆದರೆ, ಜೂನ್‌ 30ರ ನಂತರ ಕೋವಿಡ್‌ ಪ್ರಕರಣದಲ್ಲಿ ತೀವ್ರ ಹೆಚ್ಚಳದ ಕಾರಣದಿಂದಾಗಿ ದೈಹಿಕ ಉಪಸ್ಥಿತಿ ವಿಚಾರಣೆಗಳನ್ನು ರದ್ದುಗೊಳಿಸಿತ್ತು. ಪ್ರಸ್ತುತ ಮಧ್ಯಾಹ್ನದ ವೇಳೆಯಲ್ಲಿ ದೈಹಿಕ ಉಪಸ್ಥಿತಿ ವಿಚಾರಣೆಯನ್ನು ನಡೆಸಲಾಗುತ್ತಿದೆ. ಈ ವೇಳೆ ನ್ಯಾಯಾಲಯದ ಸಭಾಂಗಣದಲ್ಲಿ 20ಕ್ಕಿಂತ ಹೆಚ್ಚು ವಕೀಲರು ಉಪಸ್ಥಿತರಿರುವಂತಿಲ್ಲ.

ಆಗಸ್ಟ್‌ 7 (ಶುಕ್ರವಾರ) ರಂದು ಸಹ ಕೋರ್ಟ್‌ ಪ್ರಾಂಗಣವನ್ನು ಶುದ್ಧೀಕರಿಸುವ ಸಲುವಾಗಿ ಮುಚ್ಚಲಾಗಿರುತ್ತದೆ.

Related Stories

No stories found.
Kannada Bar & Bench
kannada.barandbench.com