ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪ್ರಸಕ್ತ ವರ್ಷದ ಅಕ್ಟೋಬರ್ 5ರಿಂದ ನಡೆಸಲಿರುವ ಮಧ್ಯಂತರ ಸೆಮಿಸ್ಟರ್ ಪರೀಕ್ಷೆಗಳು ಯುಜಿಸಿ ನಿಯಮಾವಳಿಗಳಿಗೆ ವಿರುದ್ಧವಾಗಿವೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಹಿಂಪಡೆದ ಕಾರಣಕ್ಕೆ ಹೈಕೋರ್ಟ್ ಗುರುವಾರ ಅರ್ಜಿ ವಜಾಗೊಳಿಸಿದೆ.
ಇದೇ ವೇಳೆ ನ್ಯಾಯಾಲಯವು ಅರ್ಜಿದಾರರಾದ ಪೂರ್ಬಯಾನ್ ಚಕ್ರವರ್ತಿ ಅವರಿಗೆ ವೈಯಕ್ತಿಕ ಅರ್ಜಿ ಸಲ್ಲಿಕೆಗೆ ಅವಕಾಶವಿರುವುದಾಗಿ ತಿಳಿಸಿತು.
ಪ್ರಕರಣದ ವಿಚಾರಣೆಯು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ರವಿ ಹೊಸಮನಿ ಅವರಿದ್ದ ಪೀಠದ ಮುಂದೆ ಬಂದಾಗ ಅರ್ಜಿಯ ಊರ್ಜಿತತೆಯ ಬಗ್ಗೆ ಪ್ರಶ್ನಿಸಲಾಯಿತು. “ನೀವು ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಸಲ್ಲಿಸಲು ಹೇಗೆ ಸಾಧ್ಯ?”, ಎಂದು ಪೀಠವು ಕೇಳಿತು.
ಇದಕ್ಕೆ ಅರ್ಜಿದಾರರು, “ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ” ಸಲ್ಲಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ, ವಿದ್ಯಾರ್ಥಿ ಸಮುದಾಯವನ್ನು ಪ್ರತಿನಿಧಿಸಲು ಅನ್ಯ ಮಾರ್ಗವಿಲ್ಲ ಎಂದರು. ಇದಕ್ಕೆ ತನ್ನ ಅತೃಪ್ತಿಯನ್ನು ವ್ಯಕ್ತಪಡಿಸಿದ ಪೀಠವು ಅಂತಿಮವಾಗಿ ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಿತು.
ಕೆಎಸ್‌ಎಲ್ ಯು ವಿದ್ಯಾರ್ಥಿಯಾಗಿರುವ ಅರ್ಜಿದಾರ ಚಕ್ರವರ್ತಿ ಅವರು ಮಧ್ಯಂತರ ಪರೀಕ್ಷೆಗಳನ್ನು ಈಗಲೇ ನಡೆಸಲು ಸಾಧ್ಯವೇ ಇಲ್ಲ. ಹಾಗೆ ಮಾಡುವುದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹಾಗೂ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ನೀಡಿರುವ ನಿಯಮಾವಳಿಗಳಿಗೆ ವಿರುದ್ಧವಾಗಿದೆ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು. ಅಕ್ಟೋಬರ್ 5ರಿಂದ ನಡೆಸಲಿರುವ ಪರೀಕ್ಷೆಗಳು ವಿದ್ಯಾರ್ಥಿಗಳ ಮೂಲಭೂತ ಹಕ್ಕಿಗೆ ವಿರುದ್ಧ ಎಂದು ವಾದಿಸಿದ್ದರು.