ಎನ್ಎಲ್ಎಸ್ಐಯು ಸ್ಥಳೀಯ ಮೀಸಲಾತಿ ವಿಚಾರಣೆ: ಪ್ರತಿಷ್ಠಿತ ಶಾಲಾ ವಿದ್ಯಾರ್ಥಿಗಳಿಗೆ ಏಕೆ ಮೀಸಲಾತಿ ಎಂದ ಹೈಕೋರ್ಟ್

“ಯಾರಿಗಾಗಿ ಈ ಮೀಸಲಾತಿ? ಮೀಸಲಾತಿ ಎನ್ನುವುದು ಮೇಲೆತ್ತಲು ಇರಬೇಕು, ಜೀವನವನ್ನು ಸುಲಭ ಮಾಡುವುದಕ್ಕಲ್ಲ… ಈ ಮೀಸಲಾತಿಯು ಪ್ರತಿಷ್ಠಿತ ಶಾಲಾ ವಿದ್ಯಾರ್ಥಿಗಳಿಗಿದೆ,” ಎಂದು ಸ್ಥಳೀಯ ಮೀಸಲಾತಿ ವಿಚಾರಣೆ ವೇಳೆ ಚಾಟಿ ಬೀಸಿದ ಹೈಕೋರ್ಟ್.
ಎನ್ಎಲ್ಎಸ್ಐಯು ಸ್ಥಳೀಯ ಮೀಸಲಾತಿ ವಿಚಾರಣೆ: ಪ್ರತಿಷ್ಠಿತ ಶಾಲಾ ವಿದ್ಯಾರ್ಥಿಗಳಿಗೆ ಏಕೆ ಮೀಸಲಾತಿ ಎಂದ ಹೈಕೋರ್ಟ್

ಪ್ರತಿಷ್ಠಿತ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಸ್ಥಳೀಯರಿಗೆ ಶೇ.25 ಮೀಸಲಾತಿ ಕಲ್ಪಿಸಲು ಉದ್ದೇಶಿಸಲಾಗಿದೆಯೇ ಎಂದು ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರವನ್ನು ಕಟುವಾಗಿ ಪ್ರಶ್ನಿಸಿದೆ.

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ಎನ್ಎಲ್ಎಸ್ಐಯು) ಸ್ಥಳೀಯರಿಗೆ ಶೇ.25 ಪ್ರಾತಿನಿಧ್ಯ ಕಲ್ಪಿಸಿರುವ ರಾಜ್ಯ ಸರ್ಕಾರದ ವಿರುದ್ಧ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಹಾಗೂ ರವಿ ಹೊಸಮನಿ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಸದರಿ ತಿದ್ದುಪಡಿಯಿಂದ ಅಂತಿಮವಾಗಿ ಯಾರಿಗೆ ಅನುಕೂಲವಾಗುತ್ತದೆ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿರುವ ಪೀಠವು ಮೌಖಿಕವಾಗಿ ಹೀಗೆ ಹೇಳಿತು:

“ಕೆನೆಪದರದ ಕರ್ನಾಟಕ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಿದರೆ ಏನು ಪ್ರಯೋಜನ? ನೀವು ಇದನ್ನು ವಿದ್ಯಾರ್ಥಿಗಳಿಗೆ ಹರಿವಾಣದಲ್ಲಿಟ್ಟು ಕೊಡುತ್ತಿದ್ದೀರಿ. ಯಾರಿಗಾಗಿ ಈ ಮೀಸಲಾತಿ?… ಮೀಸಲಾತಿ ಎನ್ನುವುದು ಮೇಲೆತ್ತಲು ಇರಬೇಕು, ಜೀವನವನ್ನು ಸುಲಭ ಮಾಡುವುದಕ್ಕಲ್ಲ… ಆ ಪದ ಬಳಸಿದ್ದಕ್ಕೆ ವಿಷಾದವಿದೆ. ಈ ಮೀಸಲಾತಿಯನ್ನು ಪ್ರತಿಷ್ಠಿತ ಶಾಲಾ ವಿದ್ಯಾರ್ಥಿಗಳಿಗೆ ಕಲ್ಪಿಸಲಾಗುತ್ತಿದೆ. ಇದರಿಂದ ಅಂತಿಮವಾಗಿ ಯಾರಿಗೆ ಅನುಕೂಲವಾಗುತ್ತದೆ? ಯಾರಿಗೆ ಸಹಾಯದ ಅಗತ್ಯವಿಲ್ಲವೋ ಅವರಿಗೆ ಸಹಾಯ ಮಾಡಲು ಏಕೆ ರಾಜ್ಯ ಸರ್ಕಾರ ಹೊರಟಿದೆ?”.
ಕರ್ನಾಟಕ ಹೈಕೋರ್ಟ್

ಎರಡು ದಿನಗಳ ಸುದೀರ್ಘ ವಿಚಾರಣೆಯ ಬಳಿಕ ಪೀಠವು ಹಿರಿಯ ವಕೀಲ ಕೆ ಜಿ ರಾಘವನ್ ಮತ್ತು ಸಿ ಕೆ ನಂದಕುಮಾರ್ ಅವರ ವಿಸ್ತೃತ ವಾದಗಳನ್ನು ಗಣನೆಗೆ ತೆಗೆದುಕೊಂಡಿತು.

ಕಳೆದ ಸೋಮವಾರ ವಿಚಾರಣೆ ಆರಂಭವಾದಾಗ ರಾಘವನ್ ಅವರು ತಿದ್ದುಪಡಿ ಕಾಯ್ದೆಯು ಪರಿಚ್ಛೇದ (14) ಮತ್ತು (19) (1) (g)ರ ಸ್ಪಷ್ಟ ಉಲ್ಲಂಘನೆಯಾಗಿದೆ. ಕರ್ನಾಟಕ ವಿದ್ಯಾರ್ಥಿಗಳು ಮತ್ತು ಇತರೆ ವಿದ್ಯಾರ್ಥಿಗಳ ನಡುವಿನ ವ್ಯತ್ಯಾಸ ಗುರುತಿಸಲು ಯಾವುದೇ ತರ್ಕಬದ್ಧವಾದ ಆಧಾರ ಗೋಚರಿಸುತ್ತಿಲ್ಲ ಎಂದರು.

ಇನ್ನಷ್ಟು ಸ್ಪಷ್ಟತೆ ಒದಗಿಸುವ ಉದ್ದೇಶದಿಂದ ವಿಶ್ಲೇಷಣೆಗೆ ಇಳಿದ ರಾಘವನ್ ಅವರು ಹಿಂದೆ ಎಸ್‌ಸಿ/ಎಸ್‌ಟಿ ಮೀಸಲಾತಿ ಅಡಿ 100ರ ಪೈಕಿ 22.5 ಸೀಟುಗಳು ಮೀಸಲಾತಿಗೆ ಒಳಪಟ್ಟಿದ್ದವು. ಉಳಿದಂತೆ ಸಾಮಾನ್ಯ ವರ್ಗದ ಅಡಿ 77 ಸೀಟುಗಳಿಗೆ ಸ್ಪರ್ಧೆ ಮಾಡಬಹುದಿತ್ತು. ಈಗ ತಿದ್ದುಪಡಿ ಕಾಯ್ದೆಯಿಂದ ಸಾಮಾನ್ಯ ವರ್ಗಕ್ಕೆ ಕೇವಲ 58 ಸೀಟುಗಳು ಸಿಗಲಿವೆ ಎಂದರು.

ಸದರಿ ತಿದ್ದುಪಡಿ ಕಾಯ್ದೆ ತರುವುದರ ಹಿಂದಿನ ನೈಜ ಉದ್ದೇಶವನ್ನು ರಾಜ್ಯ ಸರ್ಕಾರ ತಿಳಿಸಿಲ್ಲ ಎಂದ ರಾಘವನ್ ಅವರು, “18 ಕಾನೂನು ಶಾಲೆಗಳ ಪೈಕಿ 9 ಶಾಲೆಗಳು ಸಾಂಸ್ಥಿಕ ಮೀಸಲಾತಿ ಕಲ್ಪಿಸಿವೆ. ಸ್ಥಳೀಯರಿಗೆ ಶೇ.25 ಮೀಸಲಾತಿ ಕಲ್ಪಿಸಲು ಎನ್‌ಎಲ್‌ಎಸ್‌ಐಯುಗೆ ಇರುವುದು ಇದೊಂದೇ ಸ್ಥಳವೇ. ಇತರರು ಮಾಡುತ್ತಿರುವುದರಿಂದ ನಾವು ಮಾಡುತ್ತಿದ್ದೇವೆ ಎಂಬ ಏಕೈಕ ಸಬೂಬು ನೀಡಿ ಕರ್ನಾಟಕ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವುದು ಸರಿಯೇ?” ಎಂದರು.

ಎನ್‌ಎಲ್‌ಎಸ್‌ಐಯು ಚಟುವಟಿಕೆಗಳ ಮೇಲೆ ರಾಜ್ಯ ಸರ್ಕಾರಕ್ಕೆ ಅತ್ಯಂತ ಕಡಿಮೆ ನಿಯಂತ್ರಣವಿದೆ ಎಂದು ವಾದಿಸಿದ ರಾಘವನ್, ಒಟ್ಟಾರೆ ಎನ್‌ಎಲ್‌ಎಸ್‌ಐಯು ವಿಶ್ವವಿದ್ಯಾಲಯ ಆರಂಭ, ನಿರ್ವಹಣೆ ಇತ್ಯಾದಿ ವಿಚಾರಗಳು ಬೇರೊಬ್ಬರ ಕಲ್ಪನೆಯಾಗಿದೆ ಎಂದರು.

ರಾಘವನ್ ಅವರ ವಾದ ಆಲಿಸಿದ ನ್ಯಾಯಪೀಠವು “ಇದನ್ನು (ಎನ್‌ಎಲ್‌ಎಸ್‌ಐಯು) ಬಾರ್ ಕೌನ್ಸಿಲ್ ಸೃಷ್ಟಿಸಿತೇ?” ಎಂದಿತು.

ಇದಕ್ಕೆ ಪ್ರತಿಕ್ರಿಯಿಸಿದ ರಾಘವನ್, “ರಾಜ್ಯ ಸರ್ಕಾರದ ಆಶೀರ್ವಾದದಿಂದ ಬಾರ್ ಕೌನ್ಸಿಲ್ ಎನ್‌ಎಲ್‌ಎಸ್‌ಐಯು ಅನ್ನು ಸೃಷ್ಟಿಸಿದೆ” ಎಂದರು.

ಯಾವುದೇ ಮೀಸಲಾತಿಗೆ ಸಾಂವಿಧಾನಿಕ ಮಹತ್ವ ದೊರೆಯಬೇಕಾದರೆ ಅದು ಪರಿಚ್ಛೇದ 15(4) ಮತ್ತು (5) ಅಡಿಯಲ್ಲಿ ಬರಬೇಕು ಎಂದು ರಾಘವನ್ ಮತ್ತೊಂದು ವಾದ ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು “ಯಾವುದೇ ಮೀಸಲಾತಿಯು ಪರಿಚ್ಛೇದ 15(1)ಕ್ಕೆ ವಿರುದ್ಧವಾಗಿಲ್ಲವಾದರೆ ಅದಕ್ಕೆ ಅನುಮತಿ ಇದೆ” ಎಂದಿತು.

“ಪರಿಚ್ಛೇದ 15(1) ಅಸ್ತಿತ್ವದಲ್ಲಿರುವಾಗ ಪರಿಚ್ಛೇದ 15(4) ಅನ್ನು ಪರಿಚಯಿಸುವ ಅಗತ್ಯವೇನಿದೆ? ಯಾವುದೇ ಮೀಸಲಾತಿ ವಿನಾಯಿತಿಯು ಪರಿಚ್ಛೇದ 15(4) ಮತ್ತು 15(5)ರಿಂದ ಹೊರಗಿರಬೇಕು” ಎಂದು ರಾಘವನ್ ವಾದಿಸಿದರು.

ರಾಜ್ಯ ಸರ್ಕಾರವು ತಿದ್ದುಪಡಿ ಕಾಯ್ದೆಯನ್ನು ಪರಿಚ್ಛೇದ 15(5)ರ ಅಡಿ ತರದಿದ್ದರೆ ಅದು ಸಾಂವಿಧಾನಿಕ ಯೋಜನೆಗೆ ವಿರುದ್ಧವಾಗಲಿದೆ ಎಂದರು. ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಾತಿ ಯೋಜನೆಯ ಲಾಭ ಪಡೆಯಲು ಅನುಸರಿಸುವ ಮಾನದಂಡಗಳ ಬಗ್ಗೆಯೂ ರಾಘವನ್ ಅವರು ಕಳವಳ ವ್ಯಕ್ತಪಡಿಸಿದರು.

“ವಿದ್ಯಾರ್ಥಿಯೊಬ್ಬ 11 ಮತ್ತು 12ನೇ ತರಗತಿಯನ್ನು ಕರ್ನಾಟಕದಲ್ಲಿ ಪೂರ್ಣಗೊಳಿಸಿದ್ದಾನೆ ಎಂದು ಇಟ್ಟುಕೊಂಡರೂ ಆತ 10 ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ವಾಸಿಸದಿದ್ದರೆ ತಿದ್ದುಪಡಿ ಕಾಯ್ದೆಯ ಅನ್ವಯ ಆತ ಕರ್ನಾಟಕದ ವಿದ್ಯಾರ್ಥಿ ಎನಿಸಿಕೊಳ್ಳುವುದಿಲ್ಲ” ಎಂದು ರಾಘವನ್ ಅವರ ನ್ಯಾಯಪೀಠದ ಗಮನಸೆಳೆದರು.

ಮುಂದುವರಿದು ನ್ಯಾಯಪೀಠವು, “ ಅರ್ಹತಾ ಪರೀಕ್ಷೆಯ ಹಿಂದಿನ 10 ವರ್ಷಗಳು ಹೀಗೆಂದರೆ ಏನು ಅರ್ಥ? ವಿದ್ಯಾರ್ಥಿಯೊಬ್ಬ 1-10ನೇ ತರಗತಿ ವರೆಗೆ ಕರ್ನಾಟಕದಲ್ಲಿ ಕಲಿತು 11 ಮತ್ತು 12ನೇ ತರಗತಿಯನ್ನು ಚೆನ್ನೈನಲ್ಲಿ ಪೂರ್ಣಗೊಳಿಸಿದ್ದರೆ, ಆತನಿಗೆ ಮೀಸಲಾತಿ ಸೌಲಭ್ಯ ದಕ್ಕುತ್ತದೆಯೇ? ಎಂದು ಪ್ರಶ್ನಿಸಿತು.

ಕರ್ನಾಟಕದ ವಿದ್ಯಾರ್ಥಿ/ವಿದ್ಯಾರ್ಥಿನಿ ಸಾಮಾಜಿಕ-ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರೂ ನಿಯಮದಂತೆ ಅವರು 10 ವರ್ಷ ಇಲ್ಲಿ ಶಿಕ್ಷಣ ಪಡೆದಿದ್ದರೆ ಅವರಿಗೆ ಮೀಸಲಾತಿ ಸೌಲಭ್ಯ ಸಿಗುತ್ತದೆ ಎಂದು ರಾಘವನ್ ವಾದ ಪೂರ್ಣಗೊಳಿಸಿದರು.

Also Read
ಬಾರ್ ಅಂಡ್ ಬೆಂಚ್ ಕನ್ನಡದಲ್ಲಿ ಮೂಡಿ ಬರುತ್ತಿರುವುದು ಖುಷಿಯ ಸಂಗತಿ: ನ್ಯಾ.ಪ್ರತಿಭಾ.ಎಮ್.ಸಿಂಗ್

ತಿದ್ದುಪಡಿ ಕಾಯ್ದೆ ಜಾರಿಯಿಂದ ಎನ್‌ಎಲ್‌ಎಸ್‌ಐಯು ಕಾರ್ಯಕಾರಿ ಸಮಿತಿ ಅಧಿಕಾರಕ್ಕೆ ಹೊಡೆತ ಬೀಳುತ್ತದೆ. ಇದು ಮೂಲ ಕಾಯಿದೆಯ ನಿಬಂಧನೆಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಮೂಲ ಕಾಯಿದೆ ಅಡಿ ರಾಜ್ಯ ಸರ್ಕಾರದ ಪಾತ್ರ ಅತ್ಯಂತ ಸೀಮಿತವಾಗಿದೆ ಎಂದು ವಕೀಲ ನಂದಕುಮಾರ್‌ ವಾದಿಸಿದರು.

ಇಂಥ ಮೀಸಲಾತಿಯನ್ನು ಸಮರ್ಥಿಸುವ ಹೊರೆ ರಾಜ್ಯ ಸರ್ಕಾರದ ಮೇಲಿದೆ. ಸದರಿ ಮೀಸಲಾತಿಯು ಹಿಂದುಳಿದ ಪ್ರದೇಶಕ್ಕೋ ಅಥವಾ ಅದರಲ್ಲಿ ರಾಜ್ಯದ ಹಿತಾಸಕ್ತಿ ಇದೆಯೋ ಎಂಬುದನ್ನು ರಾಜ್ಯ ಸರ್ಕಾರ ವಿವರಿಸಬೇಕಿದೆ. ತನ್ನ ನಿರ್ಧಾರದ ಸಮರ್ಥನೆಗೆ ರಾಜ್ಯ ಸರ್ಕಾರವು ಒಂದೇ ಒಂದು ದಾಖಲೆ ಸಲ್ಲಿಸಿಲ್ಲ ಎಂದು ನಂದಕುಮಾರ್‌ ಅವರು ನ್ಯಾಯಪೀಠದ ಗಮನಸೆಳೆದರು.

“ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಾತಿ ಅಗತ್ಯವಿದೆ ಎಂಬುದಕ್ಕೆ ಯಾವುದೇ ಸಕಾರಣಗಳನ್ನು ರಾಜ್ಯ ಸರ್ಕಾರ ನೀಡಿಲ್ಲ. ಕರ್ನಾಟಕದ ವಿದ್ಯಾರ್ಥಿಗಳು ಸಶಕ್ತವಾಗಿದ್ದು, ಅವರಿಗೆ ಮೀಸಲಾತಿಯ ಅಗತ್ಯವಿಲ್ಲ ಎಂಬುದು ನನ್ನ ನಂಬಿಕೆ…. ದೇಶದ ಜನಸಂಖ್ಯೆಯಲ್ಲಿ ರಾಜ್ಯದ ಪಾಲು ಶೇ. 5. ಎನ್‌ಎಲ್‌ಎಸ್‌ಐಯು ನ ಒಟ್ಟು 354 ವಿದ್ಯಾರ್ಥಿಗಳ ಪೈಕಿ ಕರ್ನಾಟಕದವರು 35 ಮಂದಿಯಾಗಿದ್ದು, ಇದು ಸಾಮಾನ್ಯವಾಗಿ ಶೇ.10ರಷ್ಟಾಗುತ್ತದೆ. ಮೇಲ್ನೋಟಕ್ಕೆ ನೋಡುವುದಾದರೆ ಎನ್ಎಲ್ಎಸ್‌ ನಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ಪ್ರಾತಿನಿಧ್ಯವು ರಾಜ್ಯದ ಜನಸಂಖ್ಯೆಗಿಂತ ಹೆಚ್ಚಾಗಿದೆ” ಎಂದರು.

ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್‌ 26ಕ್ಕೆ ಪೀಠವು ಮುಂದೂಡಿದೆ.

Related Stories

No stories found.
Kannada Bar & Bench
kannada.barandbench.com