ನ್ಯಾಯಾಂಗ ನಿಂದನೆ ಪ್ರಕರಣದ ತೀರ್ಪನ್ನು ಆಗಸ್ಟ್ 14ರಂದು ಪ್ರಕಟಿಸಿದ್ದ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರನ್ನು ದೋಷಿ ಎಂದು ಘೋಷಿಸಿತ್ತು. ಪ್ರಕರಣದ ಸಂಬಂಧ ಭೂಷಣ್ ಬೇಷರತ್ ಕ್ಷಮೆ ಕೋರುವಂತೆ ಸಲಹೆ ನೀಡಿದ್ದ ನ್ಯಾಯಾಲಯವು ಶಿಕ್ಷೆ ಪ್ರಮಾಣ ಪ್ರಕಟ ವಿಚಾರಣೆಯನ್ನು ಮುಂದೂಡಿತ್ತು. ಸದರಿ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಕ್ಷಮೆ ಕೋರುವುದಿಲ್ಲ ಎಂದು ಭೂಷಣ್ ಇಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ತಮ್ಮ ಪೂರಕ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ವಕೀಲೆ ಕಾಮಿನಿ ಜೈಸ್ವಾಲ್ ಅವರು ಭೂಷಣ್ ಅವರ ಪರವಾಗಿ ಸುಪ್ರೀಂ ಕೋರ್ಟಿಗೆ ಪೂರಕ ಹೇಳಿಕೆಯ ದಾಖಲೆ ಸಲ್ಲಿಸಿದ್ದು, ದಾಖಲೆಯಲ್ಲಿನ ವಿವರ ಇಂತಿದೆ:
“ಟ್ವೀಟ್ ಮೂಲಕ ನನ್ನ ಪ್ರಾಮಾಣಿಕ ಅಭಿಪ್ರಾಯವನ್ನು ಅಭಿವ್ಯಕ್ತಿಗೊಳಿಸಿದ್ದೇನೆ. ಸಾರ್ವಜನಿಕವಾಗಿ ನಾನು ವ್ಯಕ್ತಪಡಿಸಿರುವ ಅಭಿಪ್ರಾಯವು ನಾಗರಿಕನಾಗಿ ಮತ್ತು ಈ ಕೋರ್ಟಿನ ನಿಷ್ಠಾವಂತ ಅಧಿಕಾರಿಯಾಗಿರುವುದಕ್ಕೆ ಪೂರಕವಾದ ಕಟ್ಟುಪಾಡುಗಳಾಗಿವೆ. ಆದ್ದರಿಂದ, ನ್ಯಾಯಸಮ್ಮತವಾದ ಅಭಿವ್ಯಕ್ತಿಗೆ ಷರತ್ತು ಬದ್ಧವಾಗಿ ಅಥವಾ ಬೇಷರತ್ ಆಗಿ ಕ್ಷಮೆ ಕೋರುವುದು ಅಪ್ರಾಮಾಣಿಕ ನಡೆಯಾಗುತ್ತದೆ. ಕ್ಷಮೆ ಎಂಬುದು ಮಂತ್ರಪಠಣೆಯಂಥಲ್ಲ. ನ್ಯಾಯಾಲಯ ಹೇಳುವಂತೆ ಪ್ರಾಮಾಣಿಕವಾಗಿಯೇ ಕ್ಷಮೆ ಕೋರಬೇಕು. ಪ್ರಾಮಾಣಿಕವಾಗಿ ನಾನು ಹೇಳಿಕೆ ನೀಡಿದ್ದು, ಸತ್ಯಾಂಶವನ್ನೊಳಗೊಂಡ ಕೂಲಂಕಷ ಮಾಹಿತಿಯ ಮೂಲಕ ಮನವಿ ಮಾಡಿದ್ದೇನೆ, ಆದರೆ ಅದನ್ನು ಕೋರ್ಟ್ ಪರಿಗಣಿಸಿಲ್ಲ.”
ಪ್ರಶಾಂತ್ ಭೂಷಣ್ ಗೆ ಇಚ್ಛೆಯಿದ್ದರೆ ಬೇಷರತ್ ಕ್ಷಮೆ ಕೋರಲು ಸಮಯ ನೀಡುವುದಾಗಿ ಹೇಳಿದ್ದ ಆಗಸ್ಟ್ 20ರ ಸುಪ್ರೀಂ ಕೋರ್ಟ್ ಆದೇಶವನ್ನು ನಾನು ಅತ್ಯಂತ ವಿಷಾದದಿಂದ ಓದಿದೆ ಎಂದು ಭೂಷಣ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನ್ಯಾಯಾಲಯದ ಸೂಚನೆಗೆ ಭೂಷಣ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ:
ನನ್ನ ಕಡೆಯಿಂದ ತಪ್ಪಾಗಿದ್ದರೆ ಅಥವಾ ಕೆಡುಕಾಗಿದ್ದರೆ ಆ ಸಂಬಂಧ ಕ್ಷಮೆ ಕೋರಲು ನಾನು ಹಿಂಜರಿಯುವುದಿಲ್ಲ. ಸುಪ್ರೀಂ ಕೋರ್ಟ್‌ನಂಥ ಸಂಸ್ಥೆಯಲ್ಲಿ ಕೆಲಸ ಮಾಡುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದ್ದು, ಹಲವು ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳನ್ನು ನ್ಯಾಯಾಲಯದ ಮುಂದೆ ತಂದಿದ್ದೇನೆ. ಸುಪ್ರೀಂ ಕೋರ್ಟ್‌ಗೆ ನೀಡಿದ್ದಕ್ಕಿಂತಲೂ ಪಡೆದಿದ್ದು ಹೆಚ್ಚು ಎಂಬ ವಿವೇಕದ ಮೇಲೆ ಬದುಕುತಿದ್ದೇನೆ. ಸುಪ್ರೀಂ ಕೋರ್ಟ್ ಬಗ್ಗೆ ಅತ್ಯಂತ ಹೆಚ್ಚು ಗೌರವ ಹೊಂದಿದ್ದೇನೆ”.
ಮೂಲಭೂತ ಹಕ್ಕು ಮತ್ತು ಸಾಂವಿಧಾನಿಕ ಪ್ರಜಾಪ್ರಭುತ್ವದ ರಕ್ಷಣೆ ಮಾಡಲು ಉಳಿದಿರುವ ಏಕೈಕ ಕೇಂದ್ರ ಸುಪ್ರೀಂ ಕೋರ್ಟ್ ಎಂದು ನಂಬಿರುವುದಾಗಿ ಭೂಷಣ್ ಹೇಳಿದ್ದು, ಹೀಗೆ ವಿವರಿಸಿದ್ದಾರೆ.
“ಇಂದಿನಂಥ ಕೆಟ್ಟ ದಿನಗಳಲ್ಲಿ ಕಾನೂನು ಮತ್ತು ಸಂವಿಧಾನದ ರಕ್ಷಣೆ ವಿಚಾರದಲ್ಲಿ ಭಾರತೀಯರ ಭರವಸೆ ಇರುವುದು ಸುಪ್ರೀಂ ಕೋರ್ಟ್ ಮೇಲೆಯೇ ಹೊರತು ವಿರೋಧವನ್ನೇ ದಾಖಲಿಸದ ಕಾರ್ಯಾಂಗದ ಮೇಲಲ್ಲ” ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಕೋರ್ಟ್ ಅಧಿಕಾರಿಗಳಾದ ನಮ್ಮಂಥವರು ಸುಪ್ರೀಂ ಕೋರ್ಟ್ ತನ್ನ ಗತವೈಭವದ ದಿನಗಳಿಂದ ದೂರ ಸರಿಯುತ್ತಿರುವಾಗ ಮಾತನಾಡಬೇಕಾಗಿರುವುದು ಕರ್ತವ್ಯ ಎಂದಿದ್ದಾರೆ.
ಮೇಲಿನ ವಿಚಾರಗಳ ಅವಲೋಕನೆಯ ಹಿನ್ನೆಲೆಯಲ್ಲಿ ಪ್ರಶಾಂತ್ ಭೂಷಣ್ ಅವರು ತಮ್ಮ ಹಿಂದಿನ ಹೇಳಿಕೆಗೆ ಅಂದರೆ ಆಗಸ್ಟ್ 20ರಂದು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ವಿಚಾರಕ್ಕೆ ಬದ್ಧವಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ನ್ಯಾಯಾಂಗವನ್ನು ವಿಮರ್ಶಿಸಿದ ಎರಡು ಟ್ವೀಟ್ ಗಳನ್ನು ಆಧಾರವಾಗಿಟ್ಟುಕೊಂಡು ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್ ಆಗಸ್ಟ್ 14ರಂದು ಪ್ರಶಾಂತ್ ಭೂಷಣ್ ಅವರನ್ನು ದೋಷಿ ಎಂದು ಘೋಷಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟೇ ಶಿಕ್ಷೆ ಪ್ರಮಾಣ ನಿಗದಿಯಾಗಬೇಕಿದೆ.
ಆಗಸ್ಟ್ 20ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಕೋರ್ಟ್ ಹೇಳಿತ್ತು. ಆದರೆ, ಅಂದಿನ ವಿಚಾರಣೆಯಲ್ಲಿ ಭೂಷಣ್‌ಗೆ ಬೇಷರತ್ ಕ್ಷಮೆಯಾಚಿಸಲು ಕಾಲಾವಕಾಶ ನಿಗದಿಗೊಳಿಸಿ, ವಿಚಾರಣೆಯನ್ನು ಆಗಸ್ಟ್ 25ಕ್ಕೆ ಮುಂದೂಡಿತ್ತು. ಅದೇ ದಿನ ಆಗಸ್ಟ್ 14ರ ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸುತ್ತಿರುವುದರಿಂದ ಶಿಕ್ಷೆ ಪ್ರಕಟ ವಿಚಾರಣೆಯನ್ನು ಮುಂದೂಡುವಂತೆ ಕೋರಿದ್ದರು.
ವಿಚಾರಣೆ ಮುಂದೂಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದ ನ್ಯಾಯಾಲಯವು ತೀರ್ಪು ಮರುಪರಿಶೀಲನಾ ಅರ್ಜಿ ವಿಚಾರಣೆ ಅಂತ್ಯಗೊಳ್ಳುವವರೆಗೆ ಶಿಕ್ಷೆ ಜಾರಿಗೊಳಿಸುವುದಿಲ್ಲ ಎಂದಿತ್ತು. ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಭೂಷಣ್ ಇನ್ನಷ್ಟೇ ಸಲ್ಲಿಸಬೇಕಿದೆ.