ಆಸ್ತಿ ಹಕ್ಕು ಮೂಲಭೂತ ಹಕ್ಕಲ್ಲದೆ ಹೋದರೂ, ಸಾಂವಿಧಾನಿಕ ಹಕ್ಕಾಗಿದೆ: ಸುಪ್ರೀಂ ಕೋರ್ಟ್‌

ಪರಿಹಾರವನ್ನು ನೀಡುವುದರ ಬಗ್ಗೆ 300ಎ ವಿಧಿಯು ನಿಚ್ಚಳವಾಗಿ ಏನನ್ನು ಹೇಳದೇ ಹೋದರೂ, ಸಾರ್ವಜನಿಕ ಬಳಕೆಗಾಗಿ ಖಾಸಗಿ ಸ್ವತ್ತನ್ನು ವಶಪಡಿಸಿಕೊಂಡಾಗ ಸರ್ಕಾರವು ಪರಿಹಾರವನ್ನು ನೀಡುವುದರಿಂದ ವಿಮುಖವಾಗುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
ಆಸ್ತಿ ಹಕ್ಕು ಮೂಲಭೂತ ಹಕ್ಕಲ್ಲದೆ ಹೋದರೂ, ಸಾಂವಿಧಾನಿಕ ಹಕ್ಕಾಗಿದೆ: ಸುಪ್ರೀಂ ಕೋರ್ಟ್‌
Published on

ಸುಪ್ರೀಂ ಕೋರ್ಟ್‌ ಶುಕ್ರವಾರದಂದು ನೀಡಿರುವ ಮಹತ್ವದ ತೀರ್ಪಿನಲ್ಲಿ ಆಸ್ತಿ ಹಕ್ಕು ಮೂಲಭೂತ ಹಕ್ಕಾಗಿ ಉಳಿದಿರದೇ ಹೋದರೂ, ಅದು ಇಂದಿಗೂ ಸಾಂವಿಧಾನಿಕ ಹಕ್ಕಾಗಿದೆ ಎಂದು ಪುನರುಚ್ಚರಿಸಿದೆ. ಹರಿ ಕೃಷ್ಣ ಮಂದಿರ ಟ್ರಸ್ಟ್‌ V. ಮಹಾರಾಷ್ಟ್ರ ಸರ್ಕಾರ ಮತ್ತು ಇತರರ ನಡುವಿನ ಪ್ರಕರಣದ ತೀರ್ಪಿನಲ್ಲಿ ಈ ಅಂಶವನ್ನು ಅದು ಒತ್ತಿ ಹೇಳಿದೆ.

ಪ್ರಕರಣದ ವಿಚಾರಣೆ ನಡೆಸಿದ ಇಂದೂ ಮಲ್ಹೋತ್ರಾ ಮತ್ತು ಇಂದಿರಾ ಬ್ಯಾನರ್ಜಿ ಅವರಿದ್ದ ಪೀಠವು ತಮ್ಮ ತೀರ್ಪಿನಲ್ಲಿ, ಸಂವಿಧಾನದ ಮೂರನೇ ಪರಿಚ್ಛೇದದ ಅಡಿ ಆಸ್ತಿ ಹಕ್ಕು ಮೂಲಭೂತ ಹಕ್ಕಾಗಿ ಉಳಿದಿರದೇ ಹೋದರೂ, ಅದು ಇಂದಿಗೂ ಸಾಂವಿಧಾನಿಕ ಹಕ್ಕಾಗಿ ಉಳಿದಿದ್ದು, ಸಾಂವಿಧಾನಿಕ ರಕ್ಷಣೆ ಪಡೆದಿದೆ ಎಂದು ಪುನರುಚ್ಚರಿಸಿದೆ.

ಧಾರ್ಮಿಕ ದತ್ತಿಗಳ ನಿರ್ವಹಣೆಯನ್ನು ಸಹ ಸಾಂವಿಧಾನಿಕ ಹಕ್ಕು ಒಳಗೊಳ್ಳುತ್ತದೆ. ಇದರಡಿಯಲ್ಲಿ ವಂಶಪಾರಂಪರ್ಯವಾಗಿ ಹಾಗೂ ಅನುವಂಶಿಕ ಆಸಕ್ತಿಯಿಂದ ವಶಪಡಿಸಿಕೊಂಡ ಧಾರ್ಮಿಕ ದತ್ತಿ ನಿರ್ವಹಣೆಯೂ ಬರುತ್ತದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

“ಆಸ್ತಿ ಹಕ್ಕು ಮೂಲಭೂತ ಹಕ್ಕಾಗಿ ಉಳಿಯದೇ ಹೋಗಿರಬಹುದು, ಅಧರೆ ಅದು ಇಂದಿಗೂ ಸಂವಿಧಾನದ 300ಎ ವಿಧಿಯಡಿ ಸಾಂವಿಧಾನಿಕ ಹಕ್ಕಾಗಿದ್ದು, ಮಾನವ ಹಕ್ಕಾಗಿಯೂ ಉಳಿದಿರುವುದನ್ನು ವಿಮಲಾಬೆನ್‌ ಅಜಿತ್‌ ಬಾಯ್‌ ಪಟೇಲ್‌ V. ವತ್ಸಲಾಬೆನ್‌ ಅಶೋಕ್ ಭಾಯ್ ಪಟೇಲ್‌ ಪ್ರಕರಣದಲ್ಲಿ ಇದೇ ನ್ಯಾಯಾಲಯವು ತಿಳಿಸಿದೆ. ಭಾರತದ ಸಂವಿಧಾನದ 300ಎ ವಿಧಿಯನ್ವಯ, ಕಾನೂನಿನ ಅಧಿಕಾರದಿಂದ ಹೊರತಾಗಲ್ಲದೆ ಮತ್ತಾವುದೇ ರೀತಿಯಲ್ಲಿಯೂ ಯಾವುದೇ ವ್ಯಕ್ತಿಯು ತನ್ನ ಆಸ್ತಿಯಿಂದ ವಂಚಿತನಾಗಬಾರದು.”

ಸುಪ್ರೀಂಕೋರ್ಟಿನ ಈ ವಿವರಣೆಯು ಹರಿ ಕೃಷ್ಣ ಮಂದಿರ ಟ್ರಸ್ಟ್‌ ಸಲ್ಲಿಸಿದ್ದ ಅರ್ಜಿಯ ತೀರ್ಪಿನ ವೇಳೆ ಮೂಡಿಬಂದಿದೆ. ಟ್ರಸ್ಟ್ ಗೆ ಸಂಬಂಧಿಸಿದ ಆಂತರಿಕ ರಸ್ತೆಯೊಂದನ್ನು ಪುಣೆ ನಗರ ಪಾಲಿಕೆಯು ವಶಪಡಿಸಿಕೊಂಡಿರುವುದಾಗಿನ ದಾಖಲೆಗಳನ್ನು ಸರಿಪಡಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ ಟ್ರಸ್ಟ್ ಮೊರೆ ಹೋಗಿತ್ತು. ಪ್ರಾಂತೀಯ ಮತ್ತು ನಗರ ಯೋಜನಾ ಕಾಯಿದೆಯ 88ನೇ ನಿಯಮದ ಅಡಿ ಹೈಕೋರ್ಟ್‌ ಟ್ರಸ್ಟ್‌ ನ ಅರ್ಜಿಯನ್ನು ವಜಾಗೊಳಿಸಿದ್ದರಿಂದ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.

Kannada Bar & Bench
kannada.barandbench.com