

ಸುಪ್ರೀಂ ಕೋರ್ಟ್ ನಲ್ಲಿ ಭೌತಿಕ ವಿಚಾರಣೆ ನಡೆಸಲು ಒಂದು ವಾರದೊಳಗೆ ಮೂರು ದೊಡ್ಡ ನ್ಯಾಯಾಲಯದ ಕೊಠಡಿಗಳನ್ನು ಸಜ್ಜುಗೊಳಿಸುವಂತೆ ಸುಪ್ರೀಂ ಕೋರ್ಟ್ ನ ಏಳು ನ್ಯಾಯಮೂರ್ತಿಗಳ ಸಮಿತಿಯು ನ್ಯಾಯಾಲಯದ ಅಧಿಕಾರಿಗಳಿಗೆ ಸೂಚಿಸಿದೆ.
ಭೌತಿಕ ನ್ಯಾಯಾಲಯದ ಕೊಠಡಿಗಳನ್ನು ಸಜ್ಜುಗೊಳಿಸಿದ ಹತ್ತು ದಿನಗಳ ಬಳಿಕ ಪ್ರಕರಣಗಳ ವಿಚಾರಣೆಗೆ ಪಟ್ಟಿಮಾಡಬೇಕು ಎಂಬ ಸಲಹೆ ನೀಡಲಾಗಿದೆ. ಸುಪ್ರೀಂಕೋರ್ಟ್ ನ ಏಳು ನ್ಯಾಯಮೂರ್ತಿಗಳ ಸಮಿತಿಯು ಆಗಸ್ಟ್ 11ರಂದು ನಡೆಸಿದ ವರ್ಚುವಲ್ ಸಭೆಯಲ್ಲಿ ಎಸ್‌ಸಿಬಿಎ, ಎಸ್‌ಸಿಎಒಆರ್ ಎ ಮತ್ತು ಭಾರತೀಯ ವಕೀಲರ ಒಕ್ಕೂಟ (ಬಿಸಿಐ) ಪದಾಧಿಕಾರಿಗಳು ಭಾಗವಹಿಸಿದ್ದರು.
ಸಾಮಾಜಿಕ ಅಂತರ ಸೇರಿದಂತೆ ವಿವಿಧ ಮಾರ್ಗಸೂಚಿಗಳನ್ನು ಒಳಗೊಂಡ ವೈದ್ಯಕೀಯ ಸಲಹೆಗಳಿಗೆ ಅನುಗುಣವಾಗಿ ಮೂರು ದೊಡ್ಡ ನ್ಯಾಯಪೀಠಗಳ ಕೊಠಡಿಗಳನ್ನು ಪ್ರಾಯೋಗಿಕವಾಗಿ ಆರಂಭಿಸಲು ನ್ಯಾಯಮೂರ್ತಿಗಳು ನಿರ್ಧರಿಸಿದ್ದಾರೆ ಎಂಬ ಮಾಹಿತಿಯನ್ನು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ವಕೀಲರ ಸಂಘಟನೆಗೆ ಕೋರ್ಟ್ ತಿಳಿಸಿದೆ.
ಇದೇ ಸಂವಹನದಲ್ಲಿ, ಭೌತಿಕ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಎಲ್ಲ ಪಕ್ಷಕಾರರ ಸಮ್ಮತಿಯನ್ನು ಮುಂಚಿತವಾಗಿ ಪಡೆಯಲಾಗುವುದು. ಸದ್ಯ ಇದು ಪ್ರಾಯೋಗಿಕವಾಗಿರಲಿದ್ದು, ಅಂತಿಮ ವಿಚಾರಣೆಗೆ ಸಿದ್ಧವಾಗಿರುವ ನಿಯಮಿತ ಪ್ರಕರಣಗಳನ್ನು ಇಲ್ಲಿ ಕೈಗೆತ್ತಿಕೊಳ್ಳಲಾಗುವುದು. ಭವಿಷ್ಯದಲ್ಲಿ, “ವಾಸ್ತವ ಪರಿಸ್ಥಿತಿಯು ಅನುವು ಮಾಡಿದರೆ” ಇದನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ತಿಳಿಸಲಾಗಿದೆ.
ಪ್ರಸ್ತುತ, ಎಲ್ಲ ಇತರೆ ವಿಚಾರಣೆಗಳು, ಎಂದಿನಂತೆ ವಿಡಿಯೋ ಕಾನ್ಫೆರೆನ್ಸಿಂಗ್ ಮುಖೇನವೇ ಸೋಮವಾರದಿಂದ ಶುಕ್ರವಾರದವರೆಗೆ ನಡೆಯಲಿದೆ.
ಸುಪ್ರೀಂ ಕೋರ್ಟ್ ನ ಏಳು ನ್ಯಾಯಮೂರ್ತಿಗಳ ಸಮಿತಿಯು. ನ್ಯಾಯಮೂರ್ತಿಗಳಾದ ಎನ್ ವಿ ರಮಣ, ಅರುಣ್ ಮಿಶ್ರಾ, ರೋಹಿನ್ಟನ್ ಫಾಲಿ ನಾರಿಮನ್, ಯು ಯು ಲಲಿತ್, ಎ ಎಂ ಖಾನ್ವಿಲ್ಕರ್, ಡಿ ವೈ ಚಂದ್ರಚೂಡ್ ಮತ್ತು ಎಲ್ ನಾಗೇಶ್ವರ ರಾವ್ ಅವರನ್ನು ಒಳಗೊಂಡಿದೆ.
ಈ ಹಿಂದೆ, ಎಸ್ ಸಿ ಬಿ ಎ ಮತ್ತು ಎಸ್ ಸಿ ಒ ಆರ್ ಎ ಅದ್ಯಕ್ಷರು ಸಮಿತಿಯನ್ನು ಆಗಸ್ಟ್ 18ರ ನಂತರ ಭೌತಿಕ ವಿಚಾರಣೆಯನ್ನು ಆರಂಭಿಸುವಂತೆ ಕೋರಿ ಒತ್ತಾಯಿಸಿದ್ದನ್ನು ಇಲ್ಲಿ ನೆನೆಯಬಹುದು. ಈ ಸಂದರ್ಭದಲ್ಲಿ ಸಮಿತಿಯು ಎರಡು ವಾರಗಳ ನಂತರ ಅಂದಿನ ಪರಿಸ್ಥಿತಿಯನ್ನು ಆಧರಿಸಿ ಹೊಸದಾಗಿ ಈ ಸಂಬಂಧ ಪರಿಶೀಲಿಸಲು ತಜ್ಞರು ಸೂಚಿಸಿರುವುದನ್ನು ತಿಳಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ಒಕ್ಕೂಟದ ಪ್ರತಿನಿಧಿಗಳು ಎರಡು ವಾರಗಳ ನಂತರವೂ ಸಹ ಪರಿಸ್ಥಿತಿ ಹೆಚ್ಚು ಕಡಿಮೆ ಇದೇ ರೀತಿಯೇ ಇರಲಿದೆ. ಹಾಗಾಗಿ, ನ್ಯಾಯಾಲಯವು ಶೀಘ್ರವೇ ಭೌತಿಕ ವಿಚಾರಣೆಯನ್ನು ಆಂಭಿಸಬೇಕು. ಆ ಮೂಲಕ ಮುಂದೆ ಎದುರಾಗಬಹುದಾದ ಸವಾಲುಗಳಿಗೂ ಸಹ ನಾವು ಅಷ್ಟರಮಟ್ಟಿಗೆ ಮುಂಚಿತವಾಗಿ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದ್ದರು.
ಭೌತಿಕ ವಿಚಾರಣೆ ಕುರಿತ ಸುಪ್ರೀಂಕೋರ್ಟಿನ ಸಂದೇಶವನ್ನು ಓದಲು ಇಲ್ಲಿ ಕ್ಲಿಕ್ಕಿಸಿ.