ಕೋವಿಡ್‌-19 ಬಿಕ್ಕಟ್ಟಿನಿಂದಾಗಿ “ವ್ಯಾಜ್ಯಗಳ ಬಗ್ಗೆ ಯಾರಿಗೂ ಆಸಕ್ತಿಯಿಲ್ಲ”: ಹರೀಶ್‌ ಸಾಳ್ವೆ ಅಭಿಪ್ರಾಯ

ಶಾರ್ದೂಲ್‌ ಅಮರ್‌ ಚಂದ್‌‌ ಮಂಗಲದಾಸ್‌ ವೇದಿಕೆ ಆಯೋಜಿಸಿದ್ದ, “ವ್ಯಾಜ್ಯಗಳು ಮತ್ತು ಮಧ್ಯಸ್ಥಿಕೆಗಳ ಪರಿಣಾಮಕಾರಿ ನಿರ್ವಹಣೆ” ಆಂತರ್ಜಾಲ ಸಂಕಿರಣದಲ್ಲಿ ನ್ಯಾಯಿಕ ಸೇವೆಗಳ ಮೇಲಾಗುವ ಕೋವಿಡ್‌ ಬಿಕ್ಕಟ್ಟಿನ ಪರಿಣಾಮಗಳ ಬಗ್ಗೆ ಚರ್ಚಿಸಲಾಯಿತು.
ಕೋವಿಡ್‌-19 ಬಿಕ್ಕಟ್ಟಿನಿಂದಾಗಿ “ವ್ಯಾಜ್ಯಗಳ ಬಗ್ಗೆ ಯಾರಿಗೂ ಆಸಕ್ತಿಯಿಲ್ಲ”: ಹರೀಶ್‌ ಸಾಳ್ವೆ ಅಭಿಪ್ರಾಯ
Published on

ಶಾರ್ದೂಲ್‌ ಅಮರ್‌ ಚಂದ್‌ ಮಂಗಲದಾಸ್‌ ವೇದಿಕೆ ಮಂಗಳವಾರ ಆಯೋಜಿಸಿದ್ದ, “ವ್ಯಾಜ್ಯಗಳು ಮತ್ತು ಮಧ್ಯಸ್ಥಿಕೆಗಳ ಪರಿಣಾಮಕಾರಿ ನಿರ್ವಹಣೆ” ಎನ್ನುವ ಆಂತರ್ಜಾಲ ಸಂಕಿರಣದಲ್ಲಿ (ವೆಬಿನಾರ್) ಹಿರಿಯ ನ್ಯಾಯವಾದಿ, ಭಾರತದ ಮಾಜಿ ಸಾಲಿಸಿಟರ್‌ ಜನರಲ್‌ ಹಾಗೂ ಕ್ವೀನ್ಸ್ ಕೌನ್ಸೆಲ್‌ ಆಗಿರುವ ಹರೀಶ್‌ ಸಾಳ್ವೆಯವರು ಕೋವಿಡ್-19 ಸಾಂಕ್ರಾಮಿಕತೆಯ ನಂತರದ ದಿನಗಳಲ್ಲಿ ಕಾನೂನು ಸೇವೆಗಳ ಭವಿಷ್ಯದ ಬಗ್ಗೆ ಮಹತ್ವದ ಒಳನೋಟಗಳನ್ನು ನೀಡಿದರು.

ಚರ್ಚೆಯಲ್ಲಿ ಶಾರ್ದೂಲ್‌ ಅಮರ್‌ಚಂದ್‌ ಮಂಗಲದಾಸ್ ನ‌‌ (ಎಸ್‌ಎಎಂ) ವಿವಿಧ ಪಾಲುದಾರರು ಪಾಲ್ಗೊಂಡಿದ್ದರು. ಸಂಸ್ಥೆಯ ವ್ಯವಸ್ಥಾಪಕ ಪಾಲುದಾರರಾದ ಪಲ್ಲವಿ ಶ್ರಾಫ್‌ ಸಂಕಿರಣದ ನಿರ್ವಹಣೆ ಮಾಡಿದರು. ವ್ಯಾಜ್ಯ ನಿರ್ವಹಣೆ, ಆಂತರಿಕ ಸಮಾಲೋಚಕರ ಪಾತ್ರ, ಆಂತರಿಕ ಸಮಾಲೋಚಕರು ಅಳವಡಿಸಿಕೊಳ್ಳಬೇಕಾದ ತಂತ್ರಗಳು ಹಾಗೂ ಬಾಹ್ಯ ಸಮಾಲೋಚಕರ ಪಾತ್ರದ ಕುರಿತು ಚರ್ಚೆಯಲ್ಲಿ ಅಭಿಪ್ರಾಯಗಳು ವ್ಯಕ್ತವಾದವು.

ಎಸ್‌ಎಎಂ ವೆಬಿನಾರ್
ಎಸ್‌ಎಎಂ ವೆಬಿನಾರ್

“ವ್ಯಾಜ್ಯಗಳ ಬಗ್ಗೆ ಯಾರಿಗೂ ಆಸಕ್ತಿ ಇಲ್ಲ”‌

ಸಾಂಕ್ರಾಮಿಕತೆಯು ಬಹಳಷ್ಟು ಮಂದಿಗೆ ಜೀವನದೆಡೆಗಿನ ದೃಷ್ಟಿಕೋನವನ್ನು ಬದಲಿಸಿದ್ದು ಅವರು ವ್ಯಾಜ್ಯಗಳನ್ನು ನ್ಯಾಯಾಲಯಗಳಿಗೆ ತೆಗೆದುಕೊಂಡು ಹೋಗಬೇಕೆ ಎನ್ನುವ ಬಗ್ಗೆಯೂ ಮರು ಪರಿಶೀಲಿಸುತ್ತಿದ್ದಾರೆ ಎಂದು ಸಾಳ್ವೆ ಅಭಿಪ್ರಾಯಪಟ್ಟರು. ಅವರು ಈ ವಿಚಾರವಾಗಿ ಹೀಗೆ ಹೇಳಿದರು:

“ವ್ಯಾಜ್ಯಗಳು ಅತ್ಯಂತ ನಿಷ್ಪ್ರಯೋಜಕ ಕೆಲಸಗಳೆನ್ನುವುದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ವ್ಯಾಜ್ಯಗಳಿಗಾಗಿ ಮೀಸಲಿಡುತ್ತಿದ್ದ ಹಣದಲ್ಲಿ ಇಳಿಕೆಯಾಗಿದೆ. ನನ್ನ ಜೀವನದಲ್ಲಿಯೇ ನಾನು ಈವರೆಗೆ ನನ್ನ ಕಕ್ಷಿದಾರರು, ‘ನಿಮ್ಮ ಶುಲ್ಕವನ್ನು ಕಡಿತಗೊಳಿಸಿದರೆ ನೀವು ಬೇಸರಿಸುವುದಿಲ್ಲವೇ?’ ಎಂದು ಕೇಳಿದ್ದನ್ನು ನೋಡಿರಲಿಲ್ಲ. ಆದರೆ, ಅದು ಮೊದಲ ಬಾರಿಗೆ ಆಗುತ್ತಿದೆ. ಸಾಮಾನ್ಯವಾಗಿ ನಾನು ಇಂತಹ ಸಂದರ್ಭಗಳಲ್ಲಿ ಸಿಡಿಮಿಡಿಗೊಳ್ಳುತ್ತಿದ್ದೆ. ಆದರೆ ಈಗ, “ಆಗಲಿ, ನೋಡಿ, ನನಗೆ ಅರ್ಥವಾಗುತ್ತದೆ…’ ಎನ್ನುತ್ತೇನೆ. ನಿಜ ಹೇಳಬೇಕೆಂದರೆ, ಯಾರಿಗೂ ವ್ಯಾಜ್ಯಗಳ ಬಗ್ಗೆ ಆಸಕ್ತಿ ಇಲ್ಲ. ವ್ಯಾಜ್ಯವೆನ್ನುವುದು ಯಾರದೇ ಮನಸ್ಸಿಗೆ ಬರುವ ಕೊನೆಯ ಆಲೋಚನೆಯಾಗಿದೆ.”

ಬದಲಾದ ಸನ್ನಿವೇಶದಲ್ಲಿನ ಸಮಾಜದ ಮನಸ್ಥಿತಿಯನ್ನು ಬಿಂಬಿಸುತ್ತಾ ಅವರು ಮುಂದುವರೆದು ಹೀಗೆಂದರು:

“ನೀವು ಯಾವುದೇ ಒಂದು ವಿಚಾರದ ಹೊರತಾಗಿ 6 ತಿಂಗಳು ಬದುಕಲು ಸಾಧ್ಯವಿದೆ ಎಂದರೆ, ಅದಿಲ್ಲದೆ ನೀವು ಹಾಗೆಯೂ ಬದುಕಬಹುದು. ಜಗತ್ತು ಕಡಿಮೆ ವ್ಯಾಜ್ಯಗಳಿಂದ ಕಳೆದ ಆರು ತಿಂಗಳು ಜೀವಿಸಿದೆ ಎಂದರೆ, ಜನರು ಸಹಜವಾಗಿಯೇ ವ್ಯಾಜ್ಯ ರಹಿತವಾಗಿ ಬದುಕುವ ಸಾಧ್ಯತೆಯ ಬಗ್ಗೆ ಹುಡುಕುತ್ತಿರುತ್ತಾರೆ.”
ಹರೀಶ್ ಸಾಳ್ವೆ, ಹಿರಿಯ ನ್ಯಾಯವಾದಿ

ಬರುವ ದಿನಗಳಲ್ಲಿ ವಕೀಲರ ಪಾತ್ರದಲ್ಲಿ ಬದಲಾವಣೆಗಳಾಗಬಹುದು, ಮುಂದೇನಾದರೂ ಸಮಸ್ಯೆ ಆದರೆ ಅದನ್ನು ಬಗೆಹರಿಸಿಕೊಳ್ಳಬಹುದು ಎನ್ನುವ ದೃಷ್ಟಿಯಿಂದ ವ್ಯವಹಾರಗಳನ್ನು ಪರಿಗಣಿಸಿ ಆರಂಭದಲ್ಲಿ “ಏನೋ ಒಂದಷ್ಟು ತುಂಬುತ್ತಿದ್ದ” ರೀತಿ ಇನ್ನು ಬದಲಾಗಬಹುದು. ಬದಲಿಗೆ, “ವ್ಯಾಜ್ಯಗಳು ಕೊನೆಯ ಆಯ್ಕೆ”, ಎನ್ನುವ ಮನೋಭಾವದಿಂದ ಯಾವುದೇ ಸಮಸ್ಯೆಗಳು ಉದ್ಭವಿಸದಂತೆ ತಡೆಯುವ ನಿಟ್ಟಿನಲ್ಲಿ ವಕೀಲರು ಗಮನಹರಿಸಬೇಕಾಗಬಹುದು ಎಂದು ಅವರು ವಿವರಿಸಿದರು.

ಎಸ್‌ಎಎಂ ಪಾಲುದಾರರಾದ ಅಜಿತ್‌ ವಾರಿಯರ್ ಮಾತನಾಡಿ, ಈ ಮುಂಚೆ ವ್ಯಾಜ್ಯದಲ್ಲಿ, “ಗೆದ್ದವರು ಎಲ್ಲವನ್ನೂ ಕೊಂಡೊಯ್ಯುತ್ತಾರೆ” ಎನ್ನುವ ಧೋರಣೆ ಇತ್ತು. ಹೀಗೆ “ನಿಮ್ಮದೆಲ್ಲವನ್ನೂ” ಪಣಕ್ಕೆ ಇಡುವ ಬದಲಿಗೆ ಈಗ ವ್ಯಾಜ್ಯಕ್ಕೆ ಕಾರಣವಾದ ಅಂಶಗಳನ್ನು ಪರ್ಯಾಯ ವ್ಯಾಜ್ಯ ತೀರ್ಮಾನದ(ಎಡಿಆರ್) ಮೂಲಕ ಪರಿಹರಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಅಭಿಪ್ರಾಯಪಟ್ಟರು.

ಕೋವಿಡ್‌-19 ನಂತರ ವ್ಯಾಜ್ಯಗಳಲ್ಲಿ ಹೆಚ್ಚಿನ ನಿರ್ದಿಷ್ಟತೆಯನ್ನು ತರುವ ಅಗತ್ಯವಿದೆ

ಕೋವಿಡ್‌-19ರ ನಂತರ ವ್ಯಾಜ್ಯಗಳಲ್ಲಿ ಹೆಚ್ಚಿನ ನಿರ್ದಿಷ್ಟತೆಯನ್ನು ತರಬೇಕಿದೆ, ಚುಟುಕು ಮತ್ತು ಪರಿಣಾಮಕಾರಿಯಾಗಿಸಬೇಕಿದೆ. ಇಲ್ಲವಾದರೆ, ಈ ಹಿಂದಿನಂತೆ “ವ್ಯಾಜ್ಯಗಳು ಸಾಂಪ್ರದಾಯಿಕವಾದ ‘ಮಂದಗತಿಯ ನೃತ್ಯ’ದ ಜಾಡಿಗೆ ಬೀಳುತ್ತವೆ,” ಎಂದು ಸಾಳ್ವೆ ಭವಿಷ್ಯದ ಹಾದಿಯ ಬಗ್ಗೆ ವಿವರಿಸಿದರು.

ಎಲ್ಲ ಪಕ್ಷಕಾರರ ಧೋರಣೆಯು ಸಮಸ್ಯೆ ಎಲ್ಲಿದೆ ಎನ್ನುವುದನ್ನು ಹುಡುಕಿ, ಸಂವಾದವನ್ನು ಸಾಧ್ಯವಾಗಿಸುವುದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕೋವಿಡ್‌-19 ಹೆಚ್ಚಿನ ಸಹಕಾರ ಮತ್ತು ಅರ್ಥಮಾಡಿಕೊಳ್ಳುವ ವಾತಾವರಣವನ್ನು ನಿರ್ಮಿಸಿದೆ ಎಂದು ಅಭಿಪ್ರಾಯಪಟ್ಟರು.

Kannada Bar & Bench
kannada.barandbench.com