ಹಿಂದೂ ಉತ್ತರಾಧಿಕಾರತ್ವ ಕಾಯಿದೆ ತಿದ್ದುಪಡಿಗೂ ಮೊದಲು ಹುಟ್ಟಿದ ಹೆಣ್ಣುಮಕ್ಕಳು ಸಹ ಸಮಾನ ಉತ್ತರಾಧಿಕಾರಿಗಳು: ಸುಪ್ರೀಂ

ಹಿಂದೂ ಉತ್ತರಾಧಿಕಾರತ್ವ ಕಾಯಿದೆಯ 2005ರ ತಿದ್ದುಪಡಿಗೂ ಮುನ್ನವೇ ಸಮಾನ ಉತ್ತರಾಧಿಕಾರಿಯೊಬ್ಬರು ನಿಧನರಾಗಿದ್ದರೂ ಸಹ ಪುತ್ರಿಯು ಆಸ್ತಿಯ ಮೇಲೆ ಸಮಾನ ಹಕ್ಕು ಹೊಂದಿರುತ್ತಾಳೆ ಎಂದು ಮಹತ್ವದ ತೀರ್ಪೊಂದರಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ.
ಹಿಂದೂ ಉತ್ತರಾಧಿಕಾರತ್ವ ಕಾಯಿದೆ ತಿದ್ದುಪಡಿಗೂ ಮೊದಲು ಹುಟ್ಟಿದ ಹೆಣ್ಣುಮಕ್ಕಳು ಸಹ ಸಮಾನ ಉತ್ತರಾಧಿಕಾರಿಗಳು: ಸುಪ್ರೀಂ

ಹಿಂದೂ ಉತ್ತರಾಧಿಕಾರತ್ವ ಕಾಯಿದೆ, 1956ಕ್ಕೆ 2005ರಲ್ಲಿ ತಿದ್ದುಪಡಿ ಮಾಡಿದ ಸಂದರ್ಭದಲ್ಲಿ ಹೆಣ್ಣುಮಕ್ಕಳು ಜೀವಂತವಿಲ್ಲದಿದ್ದರೂ ಅವರು ಸಮಾನ ಉತ್ತರಾಧಿಕಾರಿ ಹಕ್ಕುಗಳನ್ನು ಹಿಂದೂ ಅವಿಭಜಿತ ಕುಟುಂಬದ (ಎಚ್‌ ಯು ಎಫ್‌) ಆಸ್ತಿಗಳ ಮೇಲೆ ಹೊಂದಿರುತ್ತಾರೆ ಎಂದು ಸುಪ್ರಿಂಕೋರ್ಟ್‌ ಮಹತ್ವದ ತೀರ್ಪೊಂದರಲ್ಲಿ ಹೇಳಿದೆ. (ವಿನೀತ್‌ ಶರ್ಮ V. ರಾಕೇಶ್‌ ಶರ್ಮ)

ಪರಿಣಾಮವಾಗಿ, 2005ರ ತಿದ್ದುಪಡಿಯು ಹೆಣ್ಣುಮಕ್ಕಳಿಗೆ ಆಸ್ತಿ ಹಕ್ಕನ್ನು ನೀಡುವ ವಿಚಾರದಲ್ಲಿ ಪೂರ್ವಾನ್ವಯವಾಗಲಿದ್ದು, ತಿದ್ದುಪಡಿಯ ಸಂದರ್ಭದಲ್ಲಿ ಯಾರೆಲ್ಲಾ ಜೀವಿಸಿದ್ದರೋ, 2005ಕ್ಕಿಂತ ಮುಂಚಿತವಾಗಿ ಅವರು ಹುಟ್ಟಿದ್ದರೂ ಸಹ ಅವರಿಗೆಲ್ಲಾ ಇದು ಅನ್ವಯವಾಗಲಿದೆ.

ಕಾಯಿದೆಗೆ ಮಾಡಲಾಗಿರುವ ಈ ತಿದ್ದುಪಡಿಯು, ಪೂರ್ವಜರ ಆಸ್ತಿಯನ್ನು ಪಡೆಯಲು ಹೆಣ್ಣುಮಕ್ಕಳಿಗೆ ಸಮಾನ ಹಕ್ಕನ್ನು ನೀಡುವ ವಿಚಾರದಲ್ಲಿ ಪೂರ್ವಾನ್ವಯವಾಗಲಿದೆಯೇ ಎನ್ನುವ ಪ್ರಶ್ನೆಯನ್ನು ಕೇಳಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯ ನಂತರ ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ಎಸ್‌ ಅಬ್ದುಲ್‌ ನಜೀರ್ ಮತ್ತು ಎಂ ಆರ್‌ ಶಾ ಅವರಿದ್ದ ತ್ರಿಸದಸ್ಯ ಪೀಠವು ಈ ತೀರ್ಪನ್ನು ನೀಡಿದೆ.

ಹೆಣ್ಣುಮಕ್ಕಳಿಗೆ ಗಂಡುಮಕ್ಕಳಿಗೆ ನೀಡುವಂತೆಯೇ ಆಸ್ತಿಯ ಮೇಲೆ ಸಮಾನ ಹಕ್ಕನ್ನು ನೀಡುವ ವಿಚಾರದ ಪ್ರಾಮುಖ್ಯತೆಯನ್ನು ಪೀಠವು ತೀರ್ಪಿನಲ್ಲಿ ಗುರುತಿಸಿದೆ. ಈ ಸಂಬಂಧ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಅವರು ತೀರ್ಪಿನ ಮುಖ್ಯ ಭಾಗವನ್ನು ಓದುತ್ತಾ, “ಗಂಡುಮಕ್ಕಳಿಗೆ ನೀಡುವಂತೆಯೇ ಹೆಣ್ಣು ಮಕ್ಕಳಿಗೂ ಸಹ ಸಮಾನ ಉತ್ತರಾಧಿಕಾರತ್ವದ ಹಕ್ಕಿನಲ್ಲಿ ಸಮಪಾಲನ್ನು ನೀಡಬೇಕು,” ಎಂದು ಹೇಳಿದರು.

ಹಿಂದೂ ಉತ್ತರಾಧಿಕಾರತ್ವದ ಕಾಯಿದೆ (ತಿದ್ದುಪಡಿ), 2005ರ ಜಾರಿಯ ಮೂಲಕ ಸಮಾನ ಉತ್ತರಾಧಿಕಾರಿಯೊಬ್ಬರ ಮಗಳು ಸಹ ಮಗನಂತೆಯೇ ಹುಟ್ಟಿನಿಂದಲೇ ಸ್ವಯಂ ಆಗಿ ಸಮಾನ ಉತ್ತರಾಧಿಕಾರಿತ್ವ ಪಡೆಯಲಿದ್ದಾಳೆಯೇ ಎನ್ನುವ ಪ್ರಶ್ನೆಯನ್ನು ನ್ಯಾಯಾಲಯದ ಮುಂದೆ ಇರಿಸಲಾಗಿತ್ತು. ಸರಳವಾಗಿ ಹೇಳುವುದಾದರೆ, ತಿದ್ದುಪಡಿ ಕಾಯಿದೆಯ ಜಾರಿಗೂ ಮುನ್ನ ಹುಟ್ಟಿದ ಕಾರಣದಿಂದಾಗಿ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿನ ಪಾಲನ್ನು ನಿರಾಕರಿಸಬಹುದೇ? ಸಮಾನ ಉತ್ತರಾಧಿಕಾರಿ ಎಂದು ಪರಿಗಣಿಸದೆ ಹೋಗಬಹುದೇ? ಎನ್ನುವ ಪ್ರಶ್ನೆಗಳಿದ್ದವು. ಈ ಪ್ರಶ್ನೆಗಳಿಗೆ ಈಗ ಉತ್ತರ ದೊರೆತಿದೆ.

2018ರ ನವೆಂಬರ್ ನಲ್ಲಿ ನ್ಯಾಯಮೂರ್ತಿ ಎ ಕೆ ಸಿಕ್ರಿ ಅವರ ನೇತೃತ್ವದ ತ್ರಿಸದಸ್ಯ ಪೀಠವು ಈ ವಿಚಾರಗಳನ್ನು ತ್ರಿಸದಸ್ಯ ಪೀಠವೊಂದು ಪರಾಮರ್ಶನೆ ನಡೆಸಬೇಕು ಎಂದು ಹೇಳಿತ್ತು.

Related Stories

No stories found.
Kannada Bar & Bench
kannada.barandbench.com