ಮಕ್ಕಳನ್ನು ಲೈಂಗಿಕ ಪ್ರಚೋದನಕಾರಿ ಕೃತ್ಯ ಹಾಗೂ ಅಶ್ಲೀಲತೆಗೆ ಬಳಸಿಕೊಂಡ ಆರೋಪ ಎದುರಿಸುತ್ತಿರುವ ಹೋರಾಟಗಾರ್ತಿ ರೆಹಾನಾ ಫಾತಿಮಾ ಸಲ್ಲಿಸಿದ್ದ ಸಂಭಾವ್ಯ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಮಾಡಿದೆ.
ಫಾತಿಮಾ ಅವರು ಅರೆನಗ್ನವಾಗಿ ತಮ್ಮ ದೇಹದ ಮೇಲೆ ಮಕ್ಕಳಿಂದ ವರ್ಣಚಿತ್ರವನ್ನು ಬಿಡಿಸಿಕೊಳ್ಳುತ್ತಿರುವ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದರು. ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ ಆರ್ ಗವಾಯಿ ಮತ್ತು ಕೃಷ್ಣ ಮುರಾರಿ ಅವರನ್ನು ಒಳಗೊಂಡಿದ್ದ ಪೀಠವು, “ ಇದು ನಿಚ್ಚಳವಾಗಿ ಅಶ್ಲೀಲವಾಗಿದೆ” ಮತ್ತು “ಮೇಲ್ನೋಟಕ್ಕೇ ಮಕ್ಕಳನ್ನು ಲೈಂಗಿಕ ಪ್ರಚೋದನೆಗೆ ಬಳಸಿಕೊಳ್ಳುವ (ಚೈಲ್ಡ್ ಫೋರ್ನೋಗ್ರಫಿ),” ಕೃತ್ಯದಡಿ ಸೇರುತ್ತದೆ ಎಂದು ಹೇಳಿತು.
ಹೋರಾಗಾರ್ತಿಯ ಕೃತ್ಯದ ಬಗ್ಗೆ ಬೇಸರಗೊಂಡ ಪೀಠವು ಹೀಗೆ ಹೇಳಿದೆ:
ಫಾತಿಮಾ ಪರ ವಕೀಲರಾದ ಗೋಪಾಲ ಶಂಕರನಾರಾರಣನ್ ಅವರು, ವಿಡಿಯೋದಲ್ಲಿ ಮಕ್ಕಳು ಪೂರ್ತಿಯಾಗಿ ಬಟ್ಟೆ ತೊಟ್ಟಿರುವುದು ಗೋಚರಿಸುತ್ತದೆ. ಹಾಗಾಗಿ ಫಾತಿಮಾ ವಿರುದ್ಧ ಮಾಡಲಾಗಿರುವ ಮಕ್ಕಳನ್ನು ಲೈಂಗಿಕ ಪ್ರಚೋದನೆಗೆ ಬಳಸಿರುವ ಕೃತ್ಯದ ಆರೋಪ ನಿರಾಧಾರವಾದುದು ಎಂದು ವಾದಿಸಿದರು. ಆದರೆ ಇದನ್ನು ಒಪ್ಪದ ಪೀಠವು, ಮೋಲ್ನೇಟಕ್ಕೇ ತಪ್ಪು ಗೋಚರಿಸುತ್ತಿರುವುದಾಗಿ ಹೇಳಿ ಅರ್ಜಿಯನ್ನು ವಜಾ ಮಾಡಿತು.
ಈ ಹಿಂದೆ ಫಾತಿಮಾ ಕೇರಳ ಹೈಕೋರ್ಟ್‌ನಲ್ಲಿ ಸಂಭಾವ್ಯ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಅಲ್ಲಿ ಅರ್ಜಿ ತಿರಸ್ಕೃತಗೊಂಡ ನಂತರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತಮ್ಮ ಅರ್ಜಿಯಲ್ಲಿ ಫಾತಿಮಾ ಪ್ರಮುಖವಾಗಿ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿದ್ದರು:
“ಮಹಿಳೆಯರ ನಗ್ನತೆಯು (ಅದು ಕಾಣಿಸದೆ ಇರುವ ಸಂದರ್ಭದಲ್ಲಿಯೂ ಸಹ) ಅಶ್ಲೀಲತೆಯಾಗುತ್ತದೆಯೇ?
ಮಕ್ಕಳು ತಮ್ಮ ತಾಯಿಯ ದೇಹದ ಮೇಲೆ ವರ್ಣಚಿತ್ರ ಬಿಡಿಸುವ ಕ್ರಿಯೆಯನ್ನು ಸಹ ಕಠಿಣ ಕಾನೂನುಗಳಡಿ “ಲೈಂಗಿಕ ತೃಪ್ತಿ” ಮತ್ತು “ಮಕ್ಕಳ ದುರ್ಬಳಕೆ” ಎಂದು ಪರಿಗಣಿಸಬಹುದೇ?”
“ಬಾಡಿ ಆರ್ಟ್ ಅಂಡ್ ಪಾಲಿಟಿಕ್ಸ್,” ಎನ್ನುವ ಯೂಟ್ಯೂಬ್ ಶೀರ್ಷಿಕೆಯಡಿ ತಮ್ಮ ಅರೆ ನಗ್ನ ದೇಹದ ಮೇಲೆ ಮಕ್ಕಳು ವರ್ಣಚಿತ್ರ ಬಿಡಿಸುತ್ತಿರುವುದನ್ನು ಫಾತಿಮಾ ಅಪ್‌ಲೋಡ್ ಮಾಡಿದ್ದರು. ಅರ್ಜಿದಾರರಾದ ಫಾತಿಮಾ ಪ್ರಕಾರ, ಯೂಟ್ಯೂಬ್ ವೇದಿಕೆಯೇ ಇದರಲ್ಲಿ ಯಾವುದೇ ನಗ್ನತೆ ಇಲ್ಲ ಎನ್ನುವ ಕಾರಣದಿಂದಾಗಿ ವಿಡಿಯೋವನ್ನು ತೆಗೆದುಹಾಕಿಲ್ಲ. ಆದಾಗ್ಯೂ ತಮ್ಮ ವಿರುದ್ಧ ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ (ಪೊಕ್ಸೊ) ಕಾಯಿದೆಯ ಸೆಕ್ಷನ್ 13, 14, ಮತ್ತು 15ರ ಅಡಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ 67B ಮತ್ತು ಅಪ್ರಾಪ್ತ ವಯಸ್ಕರ ನ್ಯಾಯದಾನ ಕಾಯಿದೆಯ ಸೆಕ್ಷನ್ 17ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು.
ಆದರೆ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ ಈ ಬಗೆಯ ಚಿತ್ರಣವು ಅಂತರ್ಜಾಲದಲ್ಲಿ ಲೈಂಗಿಕ ಶಿಕ್ಷಣ ನೀಡುವ ಉದ್ದೇಶದಿಂದ ಪ್ರಕಟಿಸಬಹುದೇ ಎನ್ನುವ ಪ್ರಶ್ನೆಯನ್ನು ಅಂತಿಮವಾಗಿ ನಿರ್ಧರಿಸಬೇಕಾಗುತ್ತದೆ, ಆದರೆ ಮೇಲ್ನೋಟಕ್ಕೇ ಇದು “ತೊಂದರೆಯಿಂದ ಕೂಡಿರುವಂಥದ್ದು” ಎಂದು ಹೇಳಿತು.
ಸುಪ್ರೀಂ ಕೋರ್ಟಿನ ಮುಂದೆ ಸಲ್ಲಿಸಿದ್ದ ಫಾತಿಮಾರ ಮನವಿಯಲ್ಲಿ ಈ ಕೆಳಗಿನ ಅಂಶಗಳನ್ನು ವಿವರಿಸಲಾಗಿತ್ತು:
“ಅರ್ಜಿದಾರರು ತಮ್ಮ ಅರೆನಗ್ನ ದೇಹವನ್ನು ಮಕ್ಕಳು ಭಿತ್ತಿಯಂತೆ ಬಳಸಿ ವರ್ಣಚಿತ್ರ ರಚಿಸಲು ಅನುವು ಮಾಡಿದ್ದರು. ಕೇವಲ ವಿಕೃತ ಮನಸ್ಸಿನವರು ಮಾತ್ರವೇ ಈ ಬಗೆಯ ಕ್ರಿಯೆಯನ್ನು ನೋಡಿ ಪ್ರಚೋದಿತರಾಗಬಹುದು. ಇದಲ್ಲದೆ ಈ ಸಂಕಲಿತ ವಿಡಿಯೋದಲ್ಲಿ ಅರ್ಜಿದಾರರು ನೀಡಿರುವ ಸಂದೇಶದಲ್ಲಿ, ಮಹಿಳೆಯ ದೇಹವನ್ನು ತಮ್ಮ ಮಕ್ಕಳಿಗೆ ಸಹಜಗೊಳಿಸುವ ಉದ್ದೇಶವನ್ನು ತಾವು ಹೊಂದಿರುವುದಾಗಿ ಹಾಗೂ ಮಕ್ಕಳ ಮನಸ್ಸಿನಲ್ಲಿ ತಿರುಚಲ್ಪಟ್ಟ ಲೈಂಗಿಕ ಚಿಂತನೆಗಳಿಗೆ ಈಡಾಗದಂತೆ ಮಾಡುವ ಉದ್ದೇಶ ಇದರ ಹಿಂದಿರುವುದಾಗಿ ತಿಳಿಸಿದ್ದಾರೆ.”