ಪ್ರಕರಣವು ನ್ಯಾಯಾಲಯದಲ್ಲಿದ್ದಾಗ ಆ ಬಗ್ಗೆ ಮಾಧ್ಯಮದ ಮುಖೇನ ಎಷ್ಟರ ಮಟ್ಟಿಗೆ ವಾದಿಸಬಹುದು ತಿಳಿಸಿ: ಸುಪ್ರೀಂ ಪ್ರಶ್ನೆ

ಪ್ರಶಾಂತ್‌ ಭೂಷಣ್‌ ವಿರುದ್ಧದ ಹಳೆಯ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಅಂತ್ಯ ಹಾಡುವಂತೆ ಭೂಷಣ್‌ ಪರ ನ್ಯಾಯವಾದಿಗಳ ಕೋರಿಕೆ. ಪ್ರಕರಣವೊಂದು ನ್ಯಾಯಾಲಯದಲ್ಲಿದ್ದಾಗ ಆ ಬಗ್ಗೆ ಸಾರ್ವಜನಿಕವಾಗಿ ಎಷ್ಟರಮಟ್ಟಿಗೆ ವಾದಿಸಬಹುದು ಎಂದು ಆಲಿಸ ಬಯಸಿದ ಪೀಠ
ಪ್ರಕರಣವು ನ್ಯಾಯಾಲಯದಲ್ಲಿದ್ದಾಗ ಆ ಬಗ್ಗೆ ಮಾಧ್ಯಮದ ಮುಖೇನ ಎಷ್ಟರ ಮಟ್ಟಿಗೆ ವಾದಿಸಬಹುದು ತಿಳಿಸಿ: ಸುಪ್ರೀಂ ಪ್ರಶ್ನೆ

ಪ್ರಶಾಂತ್‌ ಭೂಷಣ್‌ ವಿರುದ್ಧದ 11 ವರ್ಷದ ಹಿಂದಿನ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ಕೈಗೊಂಡಿರುವ ನ್ಯಾಯಮೂರ್ತಿ ಅರುಣ್‌ ಮಿಶ್ರಾ, ಬಿ ಆರ್‌ ಗವಾಯಿ ಮತ್ತು ಕೃಷ್ಣ ಮುರಾರಿ ಅವರ ತ್ರಿಸದಸ್ಯ ಪೀಠವು ಪ್ರಕರಣವೊಂದು ನ್ಯಾಯಾಲಯದಲ್ಲಿದ್ದಾಗ ಅದರ ಬಗ್ಗೆ ಮಾಧ್ಯಮ ಅಥವಾ ಇನ್ನಾವುದೇ ವೇದಿಕೆ ಮುಖೇನ ಎಷ್ಟರ ಮಟ್ಟಿಗೆ ಸಾರ್ವಜನಿಕವಾಗಿ ವಾದಿಸಬಹುದು ಎನ್ನುವ ಕುರಿತು ವಿಸ್ತೃತವಾಗಿ ಆಲಿಸಲು ಮುಂದಾಗಿದೆ.

ಇದೇ ತ್ರಿಸದಸ್ಯ ಪೀಠವು ಪ್ರಶಾಂತ್‌ ಭೂಷಣ್‌ ಅವರನ್ನು ಮತ್ತೊಂದು ಪ್ರತ್ಯೇಕ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಿ ಆಗಸ್ಟ್ 14ರಂದು ತೀರ್ಪು ನೀಡಿತ್ತು. ಭೂಷಣ್ ಅವರು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಹಾಗೂ ಹಿಂದಿನ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಮಾಡಿದ್ದ ಎರಡು ಟ್ವೀಟ್‌ ಗಳ ಸಂಬಂಧ ಎದುರಿಸಿದ ನ್ಯಾಯಾಂಗ ನಿಂದನೆ ಆರೋಪದ ಪ್ರಕರಣ ಅದಾಗಿತ್ತು. ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿತ್ತು. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಇನ್ನೂ ನಿರ್ಧರಿಸಬೇಕಿದ್ದು ಈ ಸಂಬಂಧ ಆಗಸ್ಟ್‌ 20ರಂದು ವಿಚಾರಣೆ ನಡೆಸಲಿದೆ.

ಪ್ರಸ್ತುತ ವಿಚಾರಣೆಯು ಭೂಷಣ್ ಅವರು 2009ರಲ್ಲಿ ತೆಹಲ್ಕಾ ನಿಯತಕಾಲಿಕಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಕುರಿತು ವ್ಯಕ್ತಪಡಿಸಿದ್ದ ಅಭಿಪ್ರಾಯದ ಕುರಿತು ದಾಖಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ಕುರಿತಾದ್ದಾಗಿದೆ. ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್‌ ಎಚ್‌ ಕಪಾಡಿಯಾ ಮತ್ತು ಕೆ ಜಿ ಬಾಲಕೃಷ್ಣನ್‌ ಅವರ ವಿರುದ್ಧ ಭೂಷಣ್‌ ಅವರು ಸಂದರ್ಶನದಲ್ಲಿ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದರು. ಅಲ್ಲದೆ, ಹಿಂದಿನ 16 ಮುಖ್ಯ ನ್ಯಾಯಮೂರ್ತಿಗಳಲ್ಲಿ ಅರ್ಧದಷ್ಟು ಮಂದಿ ಭ್ರಷ್ಟಾಚಾರ ನಡೆಸಿದ್ದರು ಎಂದು ಅವರು ಹೇಳಿದ್ದರು. ಹಿರಿಯ ನ್ಯಾಯವಾದಿ ಹರೀಶ್‌ ಸಾಳ್ವೆ ಅವರು ಈ ಸಂಬಂಧ ದಾಖಲಿಸಿದ ದೂರಿನ ನಂತರ ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಇದೇ ಆಗಸ್ಟ್‌ 10ರಂದು ನ್ಯಾಯಾಲಯವು ಈ ಹಳೆಯ ಪ್ರಕರಣವನ್ನು ಅದರ ಗುಣಾವಗುಣಗಳ ಆಧಾರದಲ್ಲಿ (ಕೇಸ್ ಆನ್ ಮೆರಿಟ್‌) ವಿಚಾರಣೆ ನಡೆಸಲು ತೀರ್ಮಾನಿಸಿತ್ತು.

ಇಂದಿನ ವಿಚಾರಣೆ ವೇಳೆ ಭೂಷಣ್‌ ಅವರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ರಾಜೀವ್‌ ಧವನ್‌ ಅವರು, ಆರೋಪವು ನಿಂದನೆಯ ವ್ಯಾಪ್ತಿಯಡಿ ಬರುತ್ತದೆಯೇ ಎನ್ನುವುದು ಇಂದಿನ ವಿಚಾರಣೆಯ ಮುಖ್ಯ ಅಂಶವಾಗಿದೆ. ಇದಕ್ಕೆ ಸಂಕ್ಷಿಪ್ತ ಉತ್ತರವೆಂದರೆ, ಅದು ಈ ವ್ಯಾಪ್ತಿಯಡಿ ಬರುವುದಿಲ್ಲ ಎಂದರು. ಇದೇ ಕಾರಣಕ್ಕೆ, ತಾವು ಆಗಸ್ಟ್‌ 14ರ ತೀರ್ಪಿನ ಕುರಿತು ಪರಿಶೀಲನಾ ಅರ್ಜಿ ಸಲ್ಲಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌, ಈ ಪ್ರಕರಣವನ್ನು ಏಕೆ ಅಂತ್ಯಗೊಳಿಸಬಾರದು? ಏಕೆ ಇದರ ಬಗ್ಗೆ ವಿಚಾರಣೆ ನಡೆಸಬೇಕು? ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಅವರು, ಧವನ್‌ ಅವರು ವಾದ ಮಂಡಿಸುವುದಿದ್ದರೆ ಮಂಡಿಸಲಿ ಬಿಡಿ ಎಂದರು. ‘ಈ ಪ್ರಕರಣಕ್ಕೆ ಏಕೆ ಮಂಗಳ ಹಾಡಬಾರದು ಎನ್ನುವುದಷ್ಟೇ ನನ್ನ ಪ್ರಶ್ನೆ,’ ಎಂದು ಸಿಬಲ್‌ ಹೇಳಿದರು. ಈ ವೇಳೆ ದನಿಗೂಡಿಸಿದ ಮತ್ತೊಬ್ಬ ಹಿರಿಯ ನ್ಯಾಯವಾದಿ ಶಾಂತಿ ಭೂಷಣ್‌, ನ್ಯಾಯಾಯಲವು ಭೌತಿಕ ವಿಚಾರಣೆಯನ್ನು ಆರಂಭಿಸಿದ ನಂತರ ಪ್ರಕರಣವನ್ನು ಕೈಗೆತ್ತಿಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಮಿಶ್ರಾ ಅವರು, ನಾವು ಇದನ್ನು ಅಂತ್ಯಗೊಳಿಸಬೇಕು ಎಂದಿದ್ದೆವು. ಆದರೆ ಇಲ್ಲಿರುವ ಪ್ರಮುಖ ಪ್ರಶ್ನೆಗಳೆಂದರೆ, ಒಂದು ವೇಳೆ ನೀವು ಮಾಧ್ಯಮದೊಂದಿಗೆ ಮಾತನಾಡಬೇಕು ಎಂದು ಬಯಸಿದರೆ, ಅಥವಾ ಯಾವುದೇ ನ್ಯಾಯಮೂರ್ತಿಗಳ ಬಗ್ಗೆ ನಿಮಗೆ ದೂರುಗಳಿದ್ದರೆ ಆಗ ಯಾವ ಪ್ರಕ್ರಿಯೆಯನ್ನು ಅನುಸರಿಸಬೇಕು, ಎಂತಹ ಸಂದರ್ಭದಲ್ಲಿ ಅಂತಹ ಆರೋಪಗಳನ್ನು ಮಾಡಬಹುದು ಎನ್ನುವುದಾಗಿವೆ ಎಂದರು. ಮುಂದುವರೆದು ಪೀಠವು:

ಪ್ರಕರಣಕ್ಕೆ ಅಂತ್ಯ ಹಾಡುವುದು ನಮ್ಮ ಮುಂದಿರುವ ಸಮಸ್ಯೆಯಲ್ಲ. ಬದಲಿಗೆ, ಪ್ರಕರಣವೊಂದು ನ್ಯಾಯಾಲಯದಲ್ಲಿದ್ದಾಗ, ಎಷ್ಟರ ಮಟ್ಟಿಗೆ ಮಾಧ್ಯಮದ ಮೂಲಕ ಅಥವಾ ಇನ್ನಾವುದೇ ಮುಖೇನ ಆ ವಿಷಯವಾಗಿ ವಾದಿಸಬಹುದು ಎನ್ನುವುದಾಗಿದೆ.
ಸುಪ್ರೀಂ ಕೋರ್ಟ್‌

ಮೇಲಿನ ವಿಚಾರಗಳ ಹಿನ್ನೆಲೆಯಲ್ಲಿ ಪೀಠವು ಧವನ್ ಅವರಿಗೆ ಈ ಸಂಬಂಧ, “ನಿಮ್ಮ ವಾದವನ್ನು ನಾವು ಆಲಿಸಬಯಸುತ್ತೇವೆ. ಈಗಾಗಲಿ ಅಥವಾ ನಂತರವೇ ಆಗಲಿ,” ಎಂದು ಹೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಧವನ್‌ ಅವರು, ನಾವು ಮೂವರು (ಧವನ್‌, ಶಾಂತಿಭೂಷಣ್‌, ಸಿಬಲ್‌) ಈ ವಿಚಾರದಲ್ಲಿ ನ್ಯಾಯಾಲಯದ ಸಹಾಯಕ್ಕೆ ಸಿದ್ಧ ಎಂದರು.

ಈ ವೇಳೆ ನ್ಯಾಯಮೂರ್ತಿ, ಅರುಣ್‌ ಮಿಶ್ರಾ ಅವರು, ನಾವು ಈ ಸಂಬಂಧ ಆಲಿಸಬಯಸುತ್ತೇವೆ. ಏಕೆಂದರೆ ಈ ಪ್ರಶ್ನೆಯನ್ನು ಹಾಗೆಯೇ ಉಳಿಸಿದರೆ ಮುಂದೆ ಇದು ಉತ್ತಮವಾಗದೇ ಹೋಗಬಹುದು ಎಂದರು. ಈ ವೇಳೆ ಧವನ್ ಅವರು, ಪ್ರಸಕ್ತ ಪ್ರಕರಣವನ್ನು ಅಂತ್ಯಗೊಳಿಸಿ, ಈ ಪ್ರಕರಣ ಎತ್ತಿರುವ ಪ್ರಶ್ನೆಗಳನ್ನು ವಿಸ್ತೃತ ಪೀಠವೊಂದಕ್ಕೆ ನೀಡಬಹುದು ಎಂದರು.

ಈ ವೇಳೆ ಪೀಠವು, ಒಂದೊಮ್ಮೆ ಇಂತಹ ಹೇಳಿಕೆ ನೀಡುವುದಾದರೆ ಹಾಗೂ ಹೇಳಿಕೆ ನೀಡಿದ ನಂತರ ಯಾವ ರೀತಿಯ ಪ್ರಕ್ರಿಯೆಯಗಳನ್ನು ಅನುಸರಿಸಬೇಕು ಎನ್ನುವುದನ್ನು ತಾವು ಪರಿಣತ ವಕೀಲರಾದ ತಮ್ಮಂಥವರಿಂದ ತಿಳಿಯ ಬಯಸುತ್ತೇವೆ ಎಂದು ಹೇಳಿತು. ಈ ಎಲ್ಲ ವಿಷಯಗಳ ಹಿನ್ನೆಲೆಯಲ್ಲಿ ಮುಂದಿನ ವಾರ ಪ್ರಕರಣವನ್ನು ಪೀಠವು ಮತ್ತಷ್ಟು ವಿಸ್ತೃತವಾಗಿ ಆಲಿಸಲಿದೆ.

ಇತ್ತ ಪ್ರಶಾಂತ್‌ ಭೂಷಣ್‌ ಅವರು ಇಂದು ಟ್ವೀಟ್‌ ಒಂದನ್ನು ಮಾಡಿ, ತಮ್ಮ ವಿರುದ್ಧದ ನ್ಯಾಯಾಂಗ ನಿಂದನೆ ಆರೋಪದ ಬಗ್ಗೆ 42 ಹಿರಿಯ ನ್ಯಾಯವಾದಿಗಳು ನೀಡಿರುವ ಹೇಳಿಕೆಯನ್ನು ಪ್ರಕಟಿಸಿದ್ದಾರೆ. “ಸಾಂಕ್ರಾಮಿಕತೆಯು (ಕೋವಿಡ್) ಮುಗಿದ ಮೇಲೆ ವಿಸ್ತೃತ ಪೀಠವೊಂದು ಭೌತಿಕ ವಿಚಾರಣೆಯನ್ನು ನಡೆಸುವ ಮೂಲಕ ನ್ಯಾಯಾಂಗ ನಿಂದನೆಯ ಕ್ರಿಮಿನಲ್‌ ಪ್ರಕರಣದ ಪ್ರಮಾಣಗಳ ಬಗ್ಗೆ ಪರಿಶೀಲಿಸಬೇಕು. ಆನಂತರವಷ್ಟೇ ಈ ಕುರಿತ ತೀರ್ಪನ್ನು ನೀಡಬೇಕು ಎನ್ನುವುದು ತಮ್ಮ ದೃಢ ಅಭಿಪ್ರಾಯವಾಗಿದೆ,” ಎನ್ನುವುದು ಈ ವಕೀಲರ ಹೇಳಿಕೆಯಾಗಿದೆ.

Related Stories

No stories found.
Kannada Bar & Bench
kannada.barandbench.com