ಸಾಲ ಮರುಪಾವತಿ ಮುಂದೂಡಿಕೆ ವಿಚಾರಣೆ: “ಆರ್‌ಬಿಐನ ಹಿಂದೆ ಅವಿತುಕೊಂಡ” ಕೇಂದ್ರದ ಕಿವಿ ಹಿಂಡಿದ ಸುಪ್ರೀಂ ಕೋರ್ಟ್‌

ಸಾಂಕ್ರಾಮಿಕತೆಯ ಹೊಡೆತಕ್ಕೆ ಸಿಲುಕಿ ದೇಶ ನಲುಗುತ್ತಿದ್ದು, ಜನರು ತತ್ತರಿಸಿರುವಾಗ ವಾಣಿಜ್ಯ ಚಿಂತನೆಯೆಡೆಗಷ್ಟೇ ಗಮನಹರಿಸುವುದು ಅಧಿಕಾರಿಗಳ ನಿಲುವಾಗಬಾರದು ಎಂದ ನ್ಯಾಯಾಲಯ.
ಸಾಲ ಮರುಪಾವತಿ ಮುಂದೂಡಿಕೆ ವಿಚಾರಣೆ: “ಆರ್‌ಬಿಐನ ಹಿಂದೆ ಅವಿತುಕೊಂಡ” ಕೇಂದ್ರದ ಕಿವಿ ಹಿಂಡಿದ ಸುಪ್ರೀಂ ಕೋರ್ಟ್‌
RBI

ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ಮುಂದೂಡಿಕೆಯ ಕಂತುಗಳ ಮೇಲಿನ ಬಡ್ಡಿಗೆ ಸಂಬಂಧಿಸಿದಂತೆ ತನ್ನ ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಷಾ ನೇತೃತ್ವದ ತ್ರಿಸದಸ್ಯ ಪೀಠವು "ಆರ್‌ಬಿಐ ಹಿಂದೆ ಅವಿತಿಕೊಂಡಿರುವ" ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ತನ್ನ ನಿಲುವು ಸ್ಪಷ್ಟಪಡಿಸುವಂತೆ ನಿರ್ದೇಶಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್ ಜೊತೆಗೂಡಿ ಸಮನ್ವಯದಿಂದ ಕರ್ತವ್ಯ ನಿರ್ವಹಿಸುತ್ತಿದೆ ಎಂದರು.

ಸಾಂಕ್ರಾಮಿಕತೆಯ ಹೊಡೆತಕ್ಕೆ ಸಿಲುಕಿ ದೇಶ ನಲುಗುತ್ತಿರುವಾಗ ಜನರು ತತ್ತರಿಸಿ ಹೋಗಿರುವಾಗ ಸಂಸ್ಥೆಗಳು ಉದ್ಯಮದ ಬಗ್ಗೆಯಷ್ಟೇ ಚಿಂತಿಸುವುದು ಸೂಕ್ತವಲ್ಲ ಎಂದು ನ್ಯಾಯಾಲಯ ಹೇಳಿತು.

ನ್ಯಾ. ಷಾ ಅವರು “ವ್ಯವಹಾರದ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯವಲ್ಲ” ಎಂದರು.

ಈ ಪ್ರಶ್ನೆಗಳು ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಬಡ್ಡಿಯ ಮೇಲಿನ ಬಡ್ಡಿಯ ಕುರಿತಾಗಿದ್ದು, ಕೇಂದ್ರ ಸರ್ಕಾರವು ಈ ಎರಡು ಪ್ರಮುಖ ವಿಚಾರಗಳಿಗೆ ಸಂಬಂಧಿಸಿದಂತೆ ಉತ್ತರಿಸಬೇಕಿದೆ ಎಂದು ನ್ಯಾಯಪೀಠ ಹೇಳಿತು.

ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ಸಾಲ ಮರುಪಾವತಿ ಮುಂದೂಡಿಕೆಯ ಸಂದರ್ಭದಲ್ಲಿ ಸಾಲ ಮರುಪಾವತಿಯ ವೇಳೆ ಬಡ್ಡಿ ವಿಧಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕಳೆದ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಅನ್ನು ನ್ಯಾಯಾಲಯ ಪ್ರಶ್ನಿಸಿತ್ತು.

ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಹೊಸ ಮಾರ್ಗಸೂಚಿಗಳನ್ನು ರೂಪಿಸುವ ಬಗ್ಗೆಯೂ ಚಿಂತನೆ ನಡೆಸುವಂತೆ ಭಾರತೀಯ ಬ್ಯಾಂಕ್ ಒಕ್ಕೂಟಕ್ಕೂ (ಐಬಿಎ) ನ್ಯಾಯಾಲಯ ಸೂಚಿಸಿತ್ತು. ಆರ್‌ಬಿಐ ಸೂಚನೆಯಂತೆ ಸಾಲ ಮರುಪಾವತಿ ಮುಂದೂಡಿಕೆಗೆ ಸಂಬಂಧಿಸಿದ ಲಾಭ ಪಡೆದವರಿಗೆ ಬಡ್ಡಿ ವಿಧಿಸುವ ಪ್ರಶ್ನೆಯನ್ನೂ ಕೋರ್ಟ್‌ ಪರಿಗಣನೆಗೆ ತೆಗೆದುಕೊಂಡಿದೆ.

ಬಡ್ಡಿ ಮನ್ನಾ ತೊಂದರೆ ಎದುರಾದಾಗ ಇದರಲ್ಲಿ ಕಿರು ಅವಧಿಯ ಸಾಲ ಪಡೆದವರೂ ಸೇರಿದಂತೆ ನೂರಾರು ಕೋಟಿ ಸಾಲ ಪಡೆದವರೂ ಸೇರಿರುತ್ತಾರೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೋರ್ಟ್‌ ಗೆ ತಿಳಿಸಿದರು.

ಸಾಲ ಮರುಪಾವತಿ ಅವಧಿ ವಿಸ್ತರಣೆಯಲ್ಲಿನ ಹಣ ಪಾವತಿ ಕಂತುಗಳ ಲಾಭದ ಕುರಿತು ಆರ್‌ಬಿಐ ಅಧಿಸೂಚನೆ ಹೊರಡಿಸಿದೆ. ಆದರೆ, ಹಣಪಾವತಿ ಮುಂದೂಡಿದುದರ ಬಡ್ಡಿಯನ್ನೂ ಸೇರಿಸಲಾಗಿದೆ ಎಂದು ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ವಿವರಿಸಿದರು. ತಮ್ಮ ಗ್ರಾಹಕರಿಗೆ ಬಡ್ಡಿ ಪಾವತಿಸುವ ಬ್ಯಾಂಕ್‌ ಗಳ ಕರ್ತವ್ಯದ ಕುರಿತೂ ಅವರು ಒತ್ತಿ ಹೇಳಿದರು.

ಸಂಕಷ್ಟದ ಸಂದರ್ಭದಲ್ಲಿ ಬಡ್ಡಿ ವಿಧಿಸುವ ನಿರ್ಧಾರವನ್ನು ಪ್ರಶ್ನಿಸಿದ ಪೀಠ:

“ಹಣಪಾವತಿಯನ್ನು ಮುಂದೂಡುವ ಮೂಲಕ ನೀವು ಅವರಿಗೆ ಸಹಾಯ ಮಾಡಿದ್ದೀರಿ. ವಸೂಲಾಗದ ಸಾಲದ (ಎನ್‌ಪಿಎ) ರೂಪದಲ್ಲಿ ಸಾವಿರಾರು ಕೋಟಿ ಖೋತಾ ಆಗಿದೆ, ಆದರೆ ನೀವು ಮಾತ್ರ ಇಲ್ಲಿ ಬಡ್ಡಿ ವಿಧಿಸುತ್ತಿದ್ದೀರಿ, ಇದು ವಿಪರ್ಯಾಸವಲ್ಲವೇ. ಬಡ್ಡಿ ವಿಧಿಸಲಿಲ್ಲ ಎಂದರೆ ಉಂಟಾಗುವ ಸಮಸ್ಯೆಯ ಬಗ್ಗೆ ನಮಗೆ ಅರಿವಿದೆ, ಆದರೆ, ಸಾಂಕ್ರಾಮಿಕತೆ ಎನ್ನುವದೂ ಸಹ ಸಾಮಾನ್ಯ ಸಂದರ್ಭವಲ್ಲ.”
ಸಂಜಯ್‌ ಕಿಶನ್ ಕೌಲ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

ಮೆಹ್ತಾ ಹೇಳಿಕೆಗೆ ಪೂರಕವಾಗಿ ಮಾತನಾಡಿದ ಐಬಿಎ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು “ಹಣಪಾವತಿ ಕಂತುಗಳನ್ನು ಸುಮ್ಮನೆ ಮುಂದೂಡಲಾಗುತ್ತಿದೆ. ಬ್ಯಾಂಕುಗಳು ಠೇವಣಿದಾರರಿಗೆ ಬಡ್ಡಿ ಪಾವತಿಸಬೇಕಿರುವುದರಿಂದ ಸಾಲ ಮರುಪಾವತಿ ಮುಂದೂಡಿಕೆ ಅವಧಿಯಲ್ಲಿಯೇ ಅದಕ್ಕೂ ಯೋಜನೆ ರೂಪಿಸಿಕೊಳ್ಳಬೇಕಿದೆ” ಎಂದರು.

ಬಡ್ಡಿ ಮನ್ನಾ ಕೋರಿರುವ ಮನವಿಯು 'ಅಕಾಲಿಕ'ವಾಗಿದ್ದು, ನಾವು ಇನ್ನೂ ಸಮಸ್ಯೆಯ ಸುರಂಗದೊಳಗೇ ಇದ್ದೇವೆ ಎಂದರು. ಎಲ್ಲಾ ಕ್ಷೇತ್ರಗಳು ತೊಂದರೆಯಲ್ಲಿದ್ದರೆ ಸರ್ಕಾರವೇ ನೆರವಿನ ಹಸ್ತ ಚಾಚಬೇಕು ಎಂದು ಅವರು ವಾದಿಸಿದರು. “ಕೆಲವು ಸಂಸ್ಥೆಗಳು ನಷ್ಟದಲ್ಲಿದ್ದರೆ ಇನ್ನೂ ಕೆಲವು ಉತ್ತಮ ಆದಾಯ ಗಳಿಸುತ್ತಿವೆ” ಎಂದ ಸಾಳ್ವೆ, ವಿಡಿಯೋ ಸ್ಟ್ರೀಮಿಂಗ್ ಕಂಪೆನಿ “ನೆಟ್‌ ಫ್ಲಿಕ್ಸ್” ಅನ್ನು ಉದಾಹರಿಸಿದರು.

ಎಲ್ಲಾ ಬಡ್ಡಿಯನ್ನು ಮನ್ನಾ ಮಾಡುವಂತೆ ನ್ಯಾಯಾಲಯವು ಕೇಳುತ್ತಿಲ್ಲ. ಬಡ್ಡಿಯ ಮೇಲಿನ ಬಡ್ಡಿಯನ್ನಷ್ಟೇ ಮನ್ನಾ ಮಾಡಲು ಬ್ಯಾಂಕ್ ಗಳಿಗೆ ಕೇಳಲಾಗುತ್ತಿದೆ. ಈ ಸೀಮಿತ ಹೊರೆಯನ್ನು ಬ್ಯಾಂಕ್‌ಗಳು ಹೊರಬಹುದೇ ಎಂದು ಪೀಠವು ಕೇಳಿತು.

RBI
ಹೊಗೆಯಲ್ಲಿ ಮರೆಯಾಯಿತೇ ಕಲಾಪದ ಶಿಷ್ಟಾಚಾರ? ವಿಚಾರಣೆ ವೇಳೆ ಗುಟ್ಕಾ ಜಗಿದ ವಕೀಲನ ಕಿವಿಹಿಂಡಿದ ಸುಪ್ರೀಂ ಕೋರ್ಟ್‌

ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು “ ಸಾಲ ಮರುಪಾವತಿ ಮುಂದೂಡಿಕೆ ಅವಧಿ ಯೋಜನೆ ಉಚಿತವಲ್ಲ ಎಂದಾದುದರಿಂದ ಶೇ.90ರಷ್ಟು ಸಾಲಗಾರರು ಈ ಸೌಲಭ್ಯದ ಲಾಭ ಪಡೆದಿಲ್ಲ” ಎಂದು ತಿಳಿಸಿದ್ದರಿಂದ ಕೋರ್ಟ್ ಮೇಲಿನ ಪ್ರಶ್ನೆ ಎತ್ತಿತು.

ಕೋವಿಡ್ ಸಾಂಕ್ರಾಮಿಕತೆ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ಮುಂದೂಡಿಕೆ ಅವಧಿಯ ಲಾಭ ಯೋಜನೆಯಡಿ ಸಾಲಗಾರರ ಹಣಪಾವತಿ ಕಂತುಗಳನ್ನು ಮೂರು ತಿಂಗಳವರೆಗೆ ವಿಸ್ತರಿಸುವಂತೆ ಆರ್‌ಬಿಐ ಮಾರ್ಚ್‌ 27ರಂದು ಅಧಿಸೂಚನೆ ಹೊರಡಿಸಿತ್ತು. ಆ ಬಳಿಕ ಅದನ್ನು ಆರು ತಿಂಗಳಿಗೆ ವಿಸ್ತರಿಸಲಾಯಿತು, ಈ ಅವಧಿಯಲ್ಲಿ ಸಾಲದ ಮೇಲೆ ಕ್ರೋಢೀಕರಣವಾಗುವ ಬಡ್ಡಿಯನ್ನು ಪಾವತಿಸಬೇಕು ಎಂದು ಆರ್ ಬಿಐ ಸ್ಪಷ್ಟಪಡಿಸಿತ್ತು.

ಆರ್‌ಬಿಐ ಅಧಿಸೂಚನೆಯಲ್ಲಿ ಉಲ್ಲೇಖಿಸಿದ್ದ ಬಡ್ಡಿ ಪಾವತಿ ವಿಚಾರವನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಬಡ್ಡಿ ಪಾವತಿ ಮಾಡಬೇಕೆಂದಾದರೆ ಇಎಂಐ ಮೊತ್ತ ಹೆಚ್ಚಾಗುತ್ತದೆ ಎಂದು ಅವರು ದೂರಿದ್ದರು.

No stories found.
Kannada Bar & Bench
kannada.barandbench.com