
ನಟ ವಿಜಯ್ ಮತ್ತು ಅವರು ಸ್ಥಾಪಿಸಿರುವ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ವಿರುದ್ಧ ವಾಣಿಜ್ಯ ಚಿಹ್ನೆ ಮತ್ತು ಹಕ್ಕುಸ್ವಾಮ್ಯದ ಉಲ್ಲಂಘನೆಯ ಆರೋಪ ಕೇಳಿಬಂದಿದೆ. ಈ ಕುರಿತು ಸಿವಿಲ್ ಮೊಕದ್ದಮೆ ದಾಖಲಾಗಿರುವ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ವಿಜಯ್ ಮತ್ತು ಟಿವಿಕೆಗೆ ಗುರುವಾರ ನೋಟಿಸ್ ಜಾರಿ ಮಾಡಿದೆ [ಜಿಬಿ ಪಚೈಯಪ್ಪನ್ ವಿ. ತಮಿಳಗ ವೆಟ್ರಿ ಕಳಗಂ].
ಜಿ ಬಿ ಪಚೈಯಪ್ಪನ್ ಮತ್ತು ಅವರು ಪ್ರತಿನಿಧಿಸುವ ಟ್ರಸ್ಟ್ - ಥೊಂಡೈ ಮಂಡಲ ಸಾಂಡ್ರೋರ್ ಧರ್ಮ ಪರಿಬಲನ ಸಭಾ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಜುಲೈ 29 ರಂದು ನಡೆಯಲಿದೆ.
ಆಗಸ್ಟ್ 2024 ರಲ್ಲಿ ಅನಾವರಣಗೊಂಡ ಟಿವಿಕೆ ಧ್ವಜವು ನೋಡಲು ಹಾಗೂ ಪರಿಕಲ್ಪನಾತ್ಮಕವಾಗಿ ತಮ್ಮ ಟ್ರಸ್ಟ್‌ನ ನೋಂದಾಯಿತ ವಾಣಿಜ್ಯ ಚಿಹ್ನೆಯನ್ನು ಹೋಲುತ್ತದೆ. ಇದು ಕೇಂದ್ರ ವೃತ್ತಾಕಾರದ ವಿಶಿಷ್ಟ ಲಕ್ಷಣದೊಂದಿಗೆ ಕೆಂಪು-ಹಳದಿ-ಕೆಂಪು ತ್ರಿವರ್ಣವನ್ನು ಒಳಗೊಂಡಿದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನ ಸೆಳೆದಿದ್ದಾರೆ.
ಟ್ರೇಡ್‌ಮಾರ್ಕ್ ದಾಖಲೆಗಳ ಪ್ರಕಾರ, ಪಚೈಯಪ್ಪನ್ ನವೆಂಬರ್ 28, 2023 ರಂದು ವರ್ಗ 45 ರ ಅಡಿಯಲ್ಲಿ ಚಿಹ್ನೆಯ ನೋಂದಣಿಗೆ ಅರ್ಜಿ ಸಲ್ಲಿಸಿದ್ದರು. ವೈಯಕ್ತಿಕ ಅಗತ್ಯಗಳನ್ನು ಪೂರೈಸಲು ಇತರರು ಸಲ್ಲಿಸುವ ವೈಯಕ್ತಿಕ ಮತ್ತು ಸಾಮಾಜಿಕ ಸೇವೆಯನ್ನು ಇದು ಒಳಗೊಳ್ಳುತ್ತದೆ.
ಅರ್ಜಿಯ ಪ್ರಕಾರ, 2023 ರಿಂದ ಅರ್ಜಿದಾರರು ಟ್ರಸ್ಟ್‌ನ ಸೇವೆಗಾಗಿ ಈ ಧ್ವಜವನ್ನು ಬಳಸುತ್ತಿದ್ದಾರೆ. ಟ್ರಸ್ಟ್ ಮೂಲಕ ಸಾಂಡ್ರೋರ್ ಕುರಲ್ ಎಂಬ ತಮಿಳು ನಿಯತಕಾಲಿಕೆಯ ಪ್ರಕಟಣೆ ಮತ್ತು ಅದೇ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್‌ನ ಕಾರ್ಯಾಚರಣೆ ನಡೆಯುತ್ತಿದೆ.
ವಾಣಿಜ್ಯ ಚಿಹ್ನೆ ಗುರುತನ್ನು ಜೂನ್ 1, 2024 ರಂದು ವರ್ಗ 45 ರ ಅಡಿಯಲ್ಲಿ ನೋಂದಾಯಿಸಲಾಗಿದೆ. ಅಲ್ಲದೆ, ಕೇಂದ್ರ ವಿನ್ಯಾಸವು ಹಕ್ಕುಸ್ವಾಮ್ಯ ರಕ್ಷಣೆಗೆ ಅರ್ಹವಾದ ಮೂಲ ಕಲಾತ್ಮಕ ಕೃತಿಯಾಗಿ ಅರ್ಹತೆ ಪಡೆದಿದೆ ಎಂದು ಅರ್ಜಿದಾರರು ಹೇಳಿಕೊಂಡಿದ್ದಾರೆ. ಟಿವಿಕೆ ಧ್ವಜವು ತಮ್ಮ ವಾಣಿಜ್ಯ ಚಿಹ್ನೆ ಮತ್ತು ಹಕ್ಕುಸ್ವಾಮ್ಯ ಎರಡನ್ನೂ ಉಲ್ಲಂಘಿಸುತ್ತದೆ. ಎರಡೂ ಗುರುತುಗಳ ನಡುವಿನ ಹೋಲಿಕೆಯು ಸಾರ್ವಜನಿಕರಲ್ಲಿ ಗೊಂದಲವನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ದಾವೆಯಲ್ಲಿ ಆರೋಪಿಸಲಾಗಿದೆ.
ಟ್ರಸ್ಟ್ ಸಮಾಜದಲ್ಲಿ ಹೊಂದಿರುವ ಸದ್ಭಾವನೆ ಮತ್ತು ಖ್ಯಾತಿಯ ಮೇಲೆ ಸವಾರಿ ಮಾಡಲು ದುರುದ್ದೇಶದಿಂದ ಅದರ ಚಿಹ್ನೆಯನ್ನು ಬಳಸಲು ಟಿವಿಕೆ ಮುಂದಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಮುಂದುವರೆದು, ಅರ್ಜಿದಾರರು ಈ ಕೆಳಗಿನ ಕೋರಿಕೆಗಳನ್ನು ನ್ಯಾಯಾಲಯದ ಮುಂದಿರಿಸಿದ್ದಾರೆ:
- ಟಿವಿಕೆ ಮತ್ತು ವಿಜಯ್ ತಮ್ಮ ಧ್ವಜದ ಬಳಕೆ ಮಾಡುವುದರ ವಿರುದ್ಧ ಶಾಶ್ವತ ತಡೆಯಾಜ್ಞೆ ನೀಡಬೇಕು;
- ವಾಣಿಜ್ಯ ಚಿಹ್ನೆ ಮತ್ತು ಹಕ್ಕುಸ್ವಾಮ್ಯದ ಉಲ್ಲಂಘನೆ ಮಾಡಿರುವುದಕ್ಕಾಗಿ ₹5 ಲಕ್ಷ ಹಾನಿ ಪರಿಹಾರ ನೀಡಬೇಕು;
- ಚಿಹ್ನೆಯನ್ನು ಉಲ್ಲಂಘಿಸುವ ಮೂಲಕ ಮಾಡಿಕೊಂಡಿರುವ ಲಾಭದ ಲೆಕ್ಕಪತ್ರಗಳನ್ನು ಸಲ್ಲಿಸಲು ಪ್ರತಿವಾದಿಗಳಿಗೆ ನಿರ್ದೇಶನ ನೀಡಬೇಕು;
- ಚಿಹ್ನೆಯ ಉಲ್ಲಂಘನೆಯ ಮೂಲಕ ಮುದ್ರಿಸಲಾದ ಧ್ವಜಗಳು, ಇತರೆ ವಸ್ತುಗಳು ಮತ್ತು ಜಾಹೀರಾತುಗಳು ಸೇರಿದಂತೆ ಎಲ್ಲಾ ವಸ್ತುಗಳ ನಾಶಗೊಳಿಸಬೇಕು;
- ನ್ಯಾಯಾಲಯದ ವೆಚ್ಚ ಭರಿಸಬೇಕು