ಲಿವ್‌-ಇನ್‌ ಸಂಬಂಧ ನಿಷೇಧಿಸಿಲ್ಲ; ಕಾನೂನಿನ ರಕ್ಷಣೆಗೆ ಅರ್ಹ: ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್

ಹಿಂದಿನ ವಾರ ಎರಡು ವಿಭಿನ್ನ ಪ್ರಕರಣಗಳಲ್ಲಿ ಲಿವ್‌-ಇನ್‌ ಜೋಡಿಗೆ ರಕ್ಷಣೆ ನೀಡಲು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ಎರಡು ವಿಭಿನ್ನ ಪೀಠಗಳು ನಿರಾಕರಿಸಿದ್ದನ್ನು ಇಲ್ಲಿ ನೆನೆಯಬಹುದು.
Punjab and Haryana High Court
Punjab and Haryana High Court

ಲಿವ್‌-ಇನ್‌ ಸಂಬಂಧಗಳ ಬಗ್ಗೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ಎರಡು ಪೀಠಗಳು ಒಂದು ವಾರದ ಹಿಂದಷ್ಟೇ ಕೆಂಗಣ್ಣು ಬೀರಿದ್ದ ಬೆನ್ನಿಗೇ ಅದೇ ನ್ಯಾಯಾಲಯದ ಮತ್ತೊಂದು ಪೀಠ ಲಿವ್‌-ಇನ್‌ ಜೋಡಿಗೆ ರಕ್ಷಣೆಯನ್ನು ನೀಡಿ ಸಾಂಗತ್ಯದ ಹಕ್ಕನ್ನು ಎತ್ತಿ ಹಿಡಿದಿದೆ.

ಈ ಕುರಿತು ಆದೇಶ ನೀಡಿರುವ ನ್ಯಾ. ಸುಧೀರ್ ಮಿತ್ತಲ್‌ ಅವರ ಏಕಸದಸ್ಯ ಪೀಠವು, ಸಂವಿಧಾನದ ಅಡಿಯಲ್ಲಿ ಬರುವ ಜೀವಿಸುವ ಹಾಗೂ ಸ್ವಾತಂತ್ರ್ಯದ ಹಕ್ಕಿನಡಿ ವ್ಯಕ್ತಿಯೊಬ್ಬರು ಸಂಗಾತಿಯ ಆಯ್ಕೆಯೂ ಸೇರಿಸಿದಂತೆ ತಾವು ಮಾಡಿಕೊಳ್ಳುವ ಆಯ್ಕೆಗಳ ಮೂಲಕ ತಮ್ಮೊಳಗಿನ ಸಾಮರ್ಥ್ಯದ ಪೂರ್ಣ ಬೆಳವಣಿಗೆಗೆ ಅನುವು ಮಾಡಿಕೊಡುವ ಹಕ್ಕೂ ಒಳಪಡುತ್ತದೆ ಎಂದು ಅಭಿಪ್ರಾಯಪಟ್ಟಿತು.

“ವ್ಯಕ್ತಿಗಳಿಗೆ ಸಂಗಾತಿಯೊಂದಿಗಿನ ತಮ್ಮ ಸಂಬಂಧವನ್ನು ವಿವಾಹದ ಮೂಲಕ ಔಪಚಾರಿಕಗೊಳಿಸುವ ಅಥವಾ ಲಿವ್‌-ಇನ್‌ ಸಂಬಂಧದ ಮೂಲಕ ಅನೌಪಚಾರಿಕವಾಗಿರಿಸುವ ಹಕ್ಕುಇದೆ,” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಅರ್ಜಿದಾರರು ತಮಗೆ ರಕ್ಷಣೆ ನೀಡುವಂತೆ ಕೋರಿದ್ದ ಮನವಿಗೆ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ನ್ಯಾಯಾಲಯದ ಮೆಟ್ಟಿಲೇರಿದ್ದರು.

ನ್ಯಾಯಾಲಯದ ಮುಂದೆ ಅರ್ಜಿದಾರರು, ತಾವಿಬ್ಬರೂ ವಯಸ್ಕರಾಗಿದ್ದು ತಾವು ಒಬ್ಬರು ಮತ್ತೊಬ್ಬರೆಡೆಗೆ ಹೊಂದಿರುವ ಭಾವನೆಗಳನ್ನು ಖಾತರಿಪಡಿಸಿಕೊಂಡು ಈ ಸಂಬಂಧವನ್ನು ಪ್ರವೇಶಿಸಿರುವುದಾಗಿ ತಿಳಿಸಿದ್ದರು. ಜೋಡಿಯಲ್ಲಿನ ಒಬ್ಬರ ಪೋಷಕರು ಈ ಸಂಬಂಧದ ವಿರುದ್ಧವಾಗಿದ್ದು ಜೋಡಿಯ ಮೇಲೆ ದೈಹಿಕ ಹಲ್ಲೆಗೈಯುವ ಬೆದರಿಕೆಗಳನ್ನು ಒಡ್ಡಿದ್ದರಿಂದ ನ್ಯಾಯಾಲಯದ ರಕ್ಷಣೆಗೆ ಮೊರೆ ಹೋಗಲಾಗಿತ್ತು.

ನ್ಯಾಯಾಲಯವು ತನ್ನ ಆದೇಶದಲ್ಲಿ, ಲಿವ್‌-ಇನ್‌ ಸಂಬಂಧಗಳನ್ನು ಒಪ್ಪುವುದು ಹೆಚ್ಚುತ್ತಿದ್ದು, ಈ ಪರಿಕಲ್ಪನೆಯು ಸಣ್ಣ ನಗರ ಮತ್ತು ಹಳ್ಳಿಗಳಿಗೂ ಹರಡಿದೆ ಎಂದಿತು. ಅಂತಹ ಸಂಬಂಧಗಳನ್ನು ಕಾನೂನಿನ ಅಡಿಯಲ್ಲಿ ನಿಷೇಧಕ್ಕೆ ಒಳಪಟ್ಟಿಲ್ಲ, ಹಾಗಾಗಿ ಅಂತಹ ಸಂಬಂಧಗಳಿಗೆ ಒಳಪಡುವ ವ್ಯಕ್ತಿಗಳು ಕಾನೂನಿನಡಿ ಸಮಾನ ರಕ್ಷಣೆಗೆ ಅರ್ಹರು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಆ ಮೂಲಕ ಜೋಡಿಗೆ ರಕ್ಷಣೆ ಒದಗಿಸಲು ಸೂಚಿಸಲಾಯಿತು.

Also Read
ಪರಸ್ಪರ ಸಮ್ಮತಿಯ ಇಬ್ಬರು ವಯಸ್ಕರ ಲಿವ್‌-ಇನ್ ಸಂಬಂಧ ಅಪರಾಧವಲ್ಲ: ಅಲಾಹಾಬಾದ್‌ ಹೈಕೋರ್ಟ್‌

ಇದೇ ವೇಳೆ ನ್ಯಾಯಾಲಯವು, ಲಿವ್‌-ಇನ್‌ ಸಂಬಂಧಗಳು ಹಾಗೂ ಪೋಷಕರ ಪ್ರತಿರೋಧ ಎದುರಿಸಿ ಮದುವೆಯಾಗಿರುವ ಜೋಡಿಗಳ ಪ್ರಕರಣಗಳನ್ನು ಸಾಮ್ಯೀಕರಿಸಿತು. ಎರಡನೆಯ ಪ್ರಕರಣಗಳಲ್ಲಿ ನ್ಯಾಯಾಲಯವು ರಕ್ಷಣೆ ನೀಡಿರುವ ಬಗ್ಗೆ ಗಮನಸೆಳೆಯಿತು. “ಸಂಬಂಧವನ್ನು ಸಾಮಾಜಿಕವಾಗಿ ಎಲ್ಲರೂ ಒಪ್ಪಿಲ್ಲ ಎಂದ ಮಾತ್ರಕ್ಕೆ ಏನಾದರೂ ವ್ಯತ್ಯಾಸವಾಗುತ್ತದೆಯೇ?” ಎಂದು ಪ್ರಶ್ನಿಸಿದ ಪೀಠವು “ಹಾಗೇನೂ ಇಲ್ಲ ಎನ್ನುವುದು ನಮ್ಮ ಅಭಿಮತ. ಹಾಗಾಗಿ ಅವರು (ಲಿವ್‌-ಇನ್ ಜೋಡಿ) ಸಹ ಅದೇ ಮಾದರಿಯ ಪರಿಹಾರಕ್ಕೆ (ರಕ್ಷಣೆಗೆ) ಅರ್ಹರು,” ಎಂದು ಸಮರ್ಥಿಸಿತು. “ಕಾನೂನಾತ್ಮಕ ಅಡಳಿತವಿರುವ ದೇಶದಲ್ಲಿ ಯಾವುದೇ ನಾಗರಿಕ ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ,” ಎಂದು ಇದೇ ವೇಳೆ ಹೇಳಿತು.

ಕಳೆದ ವಾರವಷ್ಟೇ ಇಂತಹದ್ದೇ ಎರಡು ಪ್ರಕರಣಗಳಲ್ಲಿ ಹೈಕೋರ್ಟ್‌ನ ಎರಡು ವಿಭಿನ್ನ ಪೀಠಗಳು ಇದಕ್ಕೆ ತದ್ವಿರುದ್ಧವಾದ ನಿಲುವನ್ನು ತೆಗೆದುಕೊಂಡಿದ್ದವು. ರಕ್ಷಣೆಗಾಗಿ ನ್ಯಾಯಾಲಯಕ್ಕೆ ಧಾವಿಸಿದ್ದ ಲಿವ್‌-ಇನ್ ಜೋಡಿಗಳಿಗೆ ರಕ್ಷಣೆಯನ್ನು ನೀಡುವ ಸಂಬಂಧ ನಿರಾಕರಿಸಿದ್ದವು. ಮೇ 11ರಂದು ನ್ಯಾ. ಎಚ್‌ ಎಸ್‌ ಮದನ್‌ ಅವರು ಲಿವ್‌-ಇನ್‌ ಸಂಬಂಧಗಳನ್ನು “ನೈತಿಕವಾಗಿ ಮತ್ತು ಸಾಮಾಜಿಕವಾಗಿ ಒಪ್ಪಿಕೊಳ್ಳಲಾಗದು” ಎಂದಿದ್ದರು. ಇದು ಚರ್ಚೆಗೆ ಕಾರಣವಾಗಿತ್ತು. ಇದರ ಮಾರನೆಯ ದಿನವೇ ನ್ಯಾ. ಅನಿಲ್‌ ಕ್ಷೇತ್ರಪಾಲ್‌ ಸಹ ಇಂತಹದ್ದೇ ಮತ್ತೊಂದು ಪ್ರಕರಣದಲ್ಲಿ, ಲಿವ್‌-ಇನ್‌ ಜೋಡಿಗೆ ಒಂದು ವೇಳೆ ರಕ್ಷಣೆ ನೀಡಿದರೆ ಅದು ಸಾಮಾಜಿಕ ಸಂರಚನೆಯನ್ನು ಹಾಳುಗೆಡವುತ್ತದೆ ಎಂದಿದ್ದರು.

Related Stories

No stories found.
Kannada Bar & Bench
kannada.barandbench.com