ನ್ಯಾಯಾಲಯಗಳ ಕಲಾಪ ನೇರ ಪ್ರಸಾರ, ಆಡಳಿತ ವ್ಯವಸ್ಥೆ ಆಧುನೀಕರಣಕ್ಕೆ ₹180 ಕೋಟಿ: ಬಜೆಟ್‌ನಲ್ಲಿ ಸಿಎಂ ಘೋಷಣೆ

2023-24ನೇ ಸಾಲಿನಲ್ಲಿ ₹175 ಕೋಟಿ ವೆಚ್ಚದಲ್ಲಿ ರಾಜ್ಯದ ವಿವಿಧ ನ್ಯಾಯಾಲಗಳ ಕಟ್ಟಡಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ 2024-25ನೇ ಸಾಲಿನಲ್ಲಿ ₹ 175 ಕೋಟಿ ಒದಗಿಸಲಾಗುವುದು ಎಂದು ತಿಳಿಸಲಾಗಿದೆ.
CM Siddaramaiah
CM Siddaramaiah

ರಾಜ್ಯದ ಎಲ್ಲಾ ನ್ಯಾಯಾಲಯಗಳ ಕಲಾಪ ನೇರ ಪ್ರಸಾರ ಮಾಡಲು ಮತ್ತು ನ್ಯಾಯಾಲಯಗಳ ಆಡಳಿತ ವ್ಯವಸ್ಥೆಯನ್ನು ಆಧುನೀಕರಿಸಲು ₹ 94 ಕೋಟಿ ಬಿಡುಗಡೆ ಮಾಡಲಾಗಿದ್ದು, ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ₹ 180 ಕೋಟಿ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ತಿಳಿಸಿದ್ದಾರೆ.

2023-24 ನೇ ಸಾಲಿನಲ್ಲಿ ₹ 175 ಕೋಟಿ ವೆಚ್ಚದಲ್ಲಿ ಈಗಾಗಲೇ ರಾಜ್ಯದ ವಿವಿಧ ನ್ಯಾಯಾಲಗಳ ಕಟ್ಟಡಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ 2024-25ನೇ ಸಾಲಿನಲ್ಲಿ ₹ 175 ಕೋಟಿ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ವಿರಾಜಪೇಟೆಯಲ್ಲಿ ಹೊಸ ನ್ಯಾಯಾಲಯ ಸಂಕೀರ್ಣವನ್ನು ₹ 12 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಅಪೂರ್ಣವಾಗಿರುವ ಮೈಸೂರಿನ ವಕೀಲರ ಭವನವನ್ನು ಈ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು ಎಂದು ವಿವರಿಸಲಾಗಿದೆ.

ರಾಜ್ಯದಲ್ಲಿ ನ್ಯಾಯಾಲಯಗಳು ಮತ್ತು ಶಾಸನಬದ್ಧ ನ್ಯಾಯಮಂಡಳಿಗಳ ಮುಂದೆ ಸರ್ಕಾರಿ ವ್ಯಾಜ್ಯ ನಿರ್ವಹಿಸುವ ವಿಷಯದಲ್ಲಿ ಸಮರ್ಥ ಮತ್ತು ಜವಾಬ್ದಾರಿಯುತ ನಡವಳಿಕೆಯನ್ನು ಕಾನೂನಿನ ಮೂಲಕ ಖಚಿತಪಡಿಸಿಕೊಳ್ಳಲು ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ಅಧಿನಿಯಮ 2023 ಅನ್ನು ಜಾರಿಗೆ ತರಲಾಗಿದೆ ಎಂದು ಹೇಳಲಾಗಿದೆ.

ರೈತರು ಮತ್ತು ಆರ್ಥಿಕವಾಗಿ ದುರ್ಬಲ ವ್ಯಕ್ತಿಗಳಿಗೆ ತ್ವರಿತ ನ್ಯಾಯ ಒದಗಿಸಲು ಸಿವಿಲ್‌ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಅಧಿನಿಯಮ 2023 ಅನ್ನು ಜಾರಿಗೆ ತರಲು ಕ್ರಮವಹಿಸಲಾಗಿದೆ. ಹೈಕೋರ್ಟ್‌ ಮತ್ತು ಸಿವಿಲ್‌ ನ್ಯಾಯಾಲಯಗಳಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಕಡಿಮೆಗೊಳಿಸಲು ಕರ್ನಾಟಕ ಉಚ್ಚ ನ್ಯಾಯಾಲಯ ಕಾಯಿದೆ ಮತ್ತು ಕರ್ನಾಟಕ ಸಿವಿಲ್‌ ನ್ಯಾಯಾಲಯಗಳ ಕಾಯಿದೆಗೆ ತಿದ್ದುಪಡಿ ತರಲು ಕ್ರಮವಹಿಸಲಾಗಿದೆ ಎಂದು ವಿವರಿಸಲಾಗಿದೆ.

ವಕೀಲರ ಮೇಲಿನ ಹಿಂಸೆ ತಡೆಯಲು ಮತ್ತು ನಿರ್ಭೀತರಾಗಿ ಕರ್ತವ್ಯ ನಿರ್ವಹಿಸಲು ಅನುವಾಗುವ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ 2023 ಅನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದೂ ತಿಳಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com