ಏಳು ದಶಕಗಳ ಸುಪ್ರೀಂ ಕೋರ್ಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ವೋಚ್ಚ ನ್ಯಾಯಾಲಯದ ಕಲಾಪವನ್ನು ಇಂದು ನೇರ ಪ್ರಸಾರ ಮಾಡಲಾಗುತ್ತಿದೆ. ಲೈವ್ ಸ್ಟ್ರೀಮಿಂಗ್ ಶಿಷ್ಟಾಚಾರ ಪೀಠಕ್ಕೆ ಮಾತ್ರ ಸೀಮಿತವಾಗಿದ್ದು, ನಿವೃತ್ತಿ ಹೊಂದುತ್ತಿರುವ ಸಿಜೆಐ ಎನ್ ವಿ ರಮಣ ಅವರ ಅವರನ್ನು ಒಳಗೊಂಡ ಪೀಠದ ನೇರ ಪ್ರಸಾರ ನಡೆಯುತ್ತಿದೆ.
ಶಿಷ್ಟಾಚಾರದ ಪ್ರಕಾರ ಸಿಜೆಐ ಎನ್ ವಿ ರಮಣ ಅವರು ಮುಂದಿನ ಸಿಜೆಐ ಅವರ ಜೊತೆ ಪೀಠ ಹಂಚಿಕೊಂಡು ಕೊನೆಯ ಬಾರಿಗೆ ವಿಚಾರಣೆ ನಡೆಸಲಿದ್ದಾರೆ. ನ್ಯಾಯಮೂರ್ತಿ ಯು ಯು ಲಲಿತ್ ಅವರು 49ನೇ ಸಿಜೆಐ ಆಗಿ ನೇಮಕಗೊಂಡಿದ್ದಾರೆ. ಎನ್‌ಐಸಿಯ ವೆಬ್‌ಕಾಸ್ಟ್ ಪೋರ್ಟಲ್‌ನಲ್ಲಿ ಲೈವ್ ಸ್ಟ್ರೀಮಿಂಗ್ ನಡೆಸಲಾಗುತ್ತಿದೆ.
ಸಾರ್ವಜನಿಕರು https://webcast.gov.in/events/MTc5Mg-- ವಿಚಾರಣೆ ನೋಡಬಹುದಾಗಿದೆ ಎಂದು ಎನ್‌ಐಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಂವಿಧಾನಿಕ ಮಹತ್ವ ಹೊಂದಿರುವ ಮುಖ್ಯ ನ್ಯಾಯಮೂರ್ತಿ ಅವರ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಸಲಾಗುವ ಪ್ರಕರಣಗಳನ್ನು ಲೈವ್ ಸ್ಟ್ರೀಮ್ ಮಾಡುವುದಕ್ಕೆ 2018ರ ಸೆಪ್ಟೆಂಬರ್ 26ರಂದು ಅಂದಿನ ಸಿಜೆಐ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ಆದೇಶಿಸಿತ್ತು.
ಸಿಜೆಐ ರಮಣ ಅವರ ನಿವೃತ್ತಿ ಹೊಂದುವುದಕ್ಕೂ ಮುನ್ನ ಲೈವ್ ಸ್ಟ್ರೀಮಿಂಗ್‌ಗೆ ಚಾಲನೆ ನೀಡುವುದಕ್ಕೆ ಸುಪ್ರೀಂ ಕೋರ್ಟ್ ಎಲ್ಲಾ ಸಿದ್ಧತೆ ಮಾಡುತ್ತಿದೆ ಎಂದು 2021ರ ಮೇ 31ರಂದು ಬಾರ್ ಅಂಡ್ ಬೆಂಚ್ ವರದಿ ಮಾಡಿತ್ತು.