ದೇಶದ ನ್ಯಾಯಾಂಗದ ಇತಿಹಾಸದಲ್ಲಿಯೇ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿವಸವಾಗಿದ್ದು, ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠವು ತನ್ನ ಕಲಾಪಗಳ ನೇರ ಪ್ರಸಾರವನ್ನು ಇಂದಿನಿಂದ ಆರಂಭಿಸುವ ಮೂಲಕ ನ್ಯಾಯಾಲಯಗಳನ್ನು ಮುಕ್ತವಾಗಿರಿಸುವ ಮತ್ತು ಪಾರದರ್ಶಕವಾಗಿರಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಹೆಜ್ಜೆ ಇರಿಸಿದೆ.
ಸಾಂವಿಧಾನಿಕ ಪೀಠದ ಪ್ರಕರಣಗಳ ನೇರ ಪ್ರಸಾರ ಪ್ರಾರಂಭಿಸಲು ಕೆಲ ದಿನಗಳ ಹಿಂದೆ ಭಾರತದ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರು ಕರೆದಿದ್ದ ಪೂರ್ಣ ನ್ಯಾಯಾಲಯದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ನಿರ್ಧಾರ ಸರ್ವಾನುಮತದಿಂದ ಅನುಮೋದಿಸಲ್ಪಟ್ಟಿದ್ದು ಆರಂಭಿಕ ಹಂತದಲ್ಲಿ ವಿಚಾರಣೆಗಳನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಮೂಲಗಳು ʼಬಾರ್ & ಬೆಂಚ್ʼಗೆ ತಿಳಿಸಿದ್ದವು.
ನಿನ್ನೆ ವಿಚಾರಣೆಯೊಂದರ ವೇಳೆ ಸಿಜೆಐ ಬಹಿರಂಗಪಡಿಸಿದಂತೆ ಕಲಾಪದ ನೇರಪ್ರಸಾರಕ್ಕೆ ಶೀಘ್ರವೇ ತನ್ನದೇ ಆದ ವೇದಿಕೆಯನ್ನು ಸುಪ್ರೀಂ ಕೋರ್ಟ್ ಹೊಂದಲಿದೆ.
ಆರ್ಥಿಕವಾಗಿ ದುರ್ಬಲ ವರ್ಗದ ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಅರ್ಜಿ ಸೇರಿದಂತೆ ವಿವಿಧ ಸಾಂವಿಧಾನಿಕ ಪ್ರಕರಣಗಳನ್ನು ಪ್ರಸ್ತುತ ಸುಪ್ರೀಂ ಕೋರ್ಟ್ ಆಲಿಸುತ್ತಿದೆ. ಇಂದು ವಿಚಾರಣೆ ನಡೆಯಲಿರುವ ಇತರ ಪ್ರಕರಣಗಳಲ್ಲಿ ಮಹಾರಾಷ್ಟ್ರದ ಇತ್ತೀಚಿನ ರಾಜಕೀಯ ಬಿಕ್ಕಟ್ಟು, ದೆಹಲಿಯಲ್ಲಿ ಕೇಂದ್ರ ಮತ್ತು ದೆಹಲಿ ಸರ್ಕಾರಗಳ ಅಧಿಕಾರ ಸಂಘರ್ಷ, ಅಖಿಲ ಭಾರತ ವಕೀಲರ ಪರೀಕ್ಷೆಯ ಸಿಂಧುತ್ವ ಪ್ರಶ್ನಿಸಿರುವ ಮನವಿಗಳು ಸೇರಿವೆ.
ಬೊಹ್ರಾ ಸಮುದಾಯ ಬಹಿಷ್ಕಾರದ ಹಕ್ಕು, ಭೋಪಾಲ್ ಅನಿಲ ದುರಂತದ ಸಮರ್ಪಕ ಪರಿಹಾರ, ಬಂಧನದ ವಿರುದ್ಧದ ಪೂರ್ವಾನ್ವಯ ರಕ್ಷಣೆ, ಅಖಿಲ ಭಾರತ ವಕೀಲರ ಪರೀಕ್ಷೆಯ ಸಿಂಧುತ್ವ ಹಾಗೂ ಪ್ರಕರಣಗಳನ್ನು ನೇರವಾಗಿ ಆಲಿಸಲು ಸುಪ್ರೀಂ ಕೋರ್ಟ್‌ಗೆ ಇರುವ ಅಧಿಕಾರ ಕುರಿತಂತೆ ಶೀಘ್ರದಲ್ಲೇ ಸಾಂವಿಧಾನಿಕ ಪೀಠ ವಿಚಾರಣೆ ಆರಂಭಿಸಲಿದೆ.
ನ್ಯಾಯಾಲಯ 1- ಆರ್ಥಿಕವಾಗಿ ದುರ್ಬಲ ವರ್ಗದ ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಅರ್ಜಿ.
ನ್ಯಾಯಾಲಯ 2 - ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದ ಪ್ರಕರಣ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಮತ್ತು ದೆಹಲಿ ಸರ್ಕಾರಗಳ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ.
ನ್ಯಾಯಾಲಯ 3 - ಅಖಿಲ ಭಾರತ ವಕೀಲರ ಪರೀಕ್ಷೆಯ ಸಿಂಧುತ್ವ ಪ್ರಶ್ನಿಸಿರುವ ಅರ್ಜಿ.
ನೇರ ಪ್ರಸಾರವನ್ನು ಸುಪ್ರೀಂ ಕೋರ್ಟ್ ಜಾಲತಾಣದಲ್ಲಿಯೂ ವೀಕ್ಷಿಸಬಹುದಾಗಿದೆ.