ಪೊಲೀಸ್ ಕ್ರಮದ ನೇರ ಪ್ರಸಾರ ಮಾಡುವುದು ಅವರ ಕರ್ತವ್ಯಕ್ಕೆ ಅಡ್ಡಿ ಎನ್ನಲಾಗದು: ಹಿಮಾಚಲ ಪ್ರದೇಶ ಹೈಕೋರ್ಟ್

ಕರ್ತವ್ಯನಿರತ ಸಂಚಾರ ಪೊಲೀಸರು ವಾಹನಕ್ಕೆ ಸಂಬಂಧಿಸಿದ ದಾಖಲೆ ತೋರಿಸಲು ಹೇಳಿದಾಗ ಫೇಸ್‌ಬುಕ್‌ ನೇರಪ್ರಸಾರ ಕೈಗೊಂಡು ಕೆಲ ಟೀಕೆ ಮಾಡಿದ್ದ ಚಾಲಕನೊಬ್ಬನ ವಿರುದ್ಧದ ಪ್ರಕರಣದ ವಿಚಾರಣೆ ವೇಳೆ ಪೀಠ ಈ ವಿಚಾರ ತಿಳಿಸಿದೆ.
Himachal Pradesh High Court, Facebook Live
Himachal Pradesh High Court, Facebook Live
Published on

ಪೊಲೀಸರ ಕ್ರಮ ಪ್ರತಿಭಟಿಸಿದರೆ  ಅಥವಾ ಅನಿಯಂತ್ರಿತ ಭಾಷೆ ಬಳಸಿದರೆ ಅದು ಸಾರ್ವಜನಿಕ ಕರ್ತವ್ಯ ನಿರ್ವಹಿಸುವ ಅಧಿಕಾರಿಗೆ ಅಡ್ಡಿಪಡಿಸುವ ಕ್ರಿಮಿನಲ್‌ ಅಪರಾಧಕ್ಕೆ ಸಮನಾಗದು ಎಂದು ಹಿಮಾಚಲ ಪ್ರದೇಶ ಹೈಕೋರ್ಟ್‌ ಈಚೆಗೆ ತಿಳಿಸಿದೆ [ಸೀತಾ ರಾಮ ಶರ್ಮ ಮತ್ತು ಹಿಮಾಚಲ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಸಂಚಾರ ಕರ್ತವ್ಯ ನಿರತ ಪೊಲೀಸರು ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಲು ಹೇಳಿದಾಗ ಫೇಸ್‌ಬುಕ್‌ ನೇರಪ್ರಸಾರ ಕೈಗೊಂಡು ಕೆಲ ಟೀಕೆಗಳನ್ನು ಮಾಡಿದ್ದ ಚಾಲಕನೊಬ್ಬನ ವಿರುದ್ಧದ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಸಂದೀಪ್ ಶರ್ಮಾ ಅವರ ಪೀಠ ಈ ವಿಚಾರ ತಿಳಿಸಿದೆ.

ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 186 (ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸಲು ಸಾರ್ವಜನಿಕ ಸೇವಕರಿಗೆ ಅಡ್ಡಿಪಡಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಶಿಮ್ಲಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಆರಂಭಿಸಲಾಗಿದ್ದ ವಿಚಾರಣೆ ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವ್ಯಕ್ತಿಯ ನಡೆ ಸಾತ್ವಿಕವಾಗಿದ್ದರೆ ಅದು ಕರ್ತವ್ಯಕ್ಕೆ ಅಡ್ಡಿ ಎಂದು ಹೇಳಲಾಗದು. ಬದಲಿಗೆ ಬಲಪ್ರದರ್ಶನ, ಬೆದರಿಕೆ ಇಲ್ಲವೇ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ಕ್ರಿಯೆ ನಡೆದಿದ್ದಾಗ ಮಾತ್ರ ಐಪಿಸಿ ಸೆಕ್ಷನ್ 186 ಅಡಿ ಕರ್ತವ್ಯಕ್ಕೆ ಅಡಚಣೆ ಎನ್ನಬಹುದು ಎಂದು ನ್ಯಾಯಾಲಯ ತಿಳಿಸಿದೆ.

ಅರ್ಜಿದಾರರ ವಿರುದ್ಧದ ನಿಖರ ಆರೋಪ ಏನೆಂದರೆ ಅವರು ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಿ ಕೆಲ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದು. ಆದರೆ ಖಂಡಿತವಾಗಿಯೂ ಅಂತಹ ಯಾವುದಾದರೂ ಕೃತ್ಯ ನಡೆದಿದ್ದರೆ ಅದು ಅರ್ಜಿದಾರರು ಕರ್ತವ್ಯಕ್ಕೆ ಉಂಟುಮಾಡಿದ ಅಡಚಣೆ ಎನ್ನಲಾಗದು ಎಂದು ನ್ಯಾಯಾಲಯ ಹೇಳಿದೆ.

ಆರೋಪಿಗಳು ದೈಹಿಕ ಬಲ ಬಳಸಿ ಪೊಲೀಸ್ ಅಧಿಕಾರಿಗೆ ಯಾವುದೇ ಅಡ್ಡಿ ಉಂಟು ಮಾಡಿದ ಆರೋಪವಿಲ್ಲದಿದ್ದರೆ, ಐಪಿಸಿ ಸೆಕ್ಷನ್ 186ರ ಅಡಿಯಲ್ಲಿ ಯಾವುದೇ ಪ್ರಕರಣವನ್ನು ಹೂಡಲಾಗದು. ಫೇಸ್‌ಬುಕ್‌ನಲ್ಲಿ ಕೆಲ ಟೀಕೆ ಮಾಡಿದ್ದಾರೆ ಎಂಬ ಅಂಶ ಅರ್ಜಿದಾರರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ತೀರ್ಮಾನಕ್ಕೆ ಬರಲು ಸಾಕಾಗುವುದಿಲ್ಲ. ಕರ್ತವ್ಯಕ್ಕೆ ಅಡ್ಡಿಪಡಿಸುವಂತೆ ಅವರ ಹೇಳಿಕೆಗಳು ಇರುವುದು ಎಲ್ಲಿಯೂ ಕಂಡುಬರುವುದಿಲ್ಲ ಎಂದು ಅದು ವಿವರಿಸಿದೆ. 

"ಬದಲಿಗೆ, ನೇರ ಪ್ರಸಾರದ ಮೂಲಕ, ಅರ್ಜಿದಾರರು ತಾನು ಅನಗತ್ಯವಾಗಿ ಕಿರುಕುಳ ಅನುಭವಿಸಿದ್ದಾಗಿ ಹೇಳಿದ್ದಾರೆ" ಎಂದು ನ್ಯಾಯಾಲಯ   ಚಾಲಕನ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿತು.

Kannada Bar & Bench
kannada.barandbench.com