

“ಸೌಹಾರ್ದದಿಂದ ಬದುಕುವುದೇ ಯಾವುದೇ ಮನುಷ್ಯ ಬದುಕುವ ಅತ್ಯುತ್ತಮ ವಿಧಾನವಾಗಿದೆ. ಸೌಹಾರ್ದತೆ ಕದುಡುವ ಮತ್ತು ಸಾಮಾಜಿಕ ಅಶಾಂತಿ ಮೂಡಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವುದರಿಂದ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಿಲ್ಲ” ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಮಾರ್ಮಿಕವಾಗಿ ನುಡಿಯಿತು.
ರಸ್ತೆಯಲ್ಲಿ ನಮಾಜ್ ಮಾಡಿದ ಪ್ರಕರಣದಲ್ಲಿ 24 ಗಂಟೆಯಲ್ಲೇ ಬಿ ರಿಪೋರ್ಟ್ ಹಾಕಿದ ಪೊಲೀಸರ ಕ್ರಮ ಪ್ರಶ್ನಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ವಿವಿಧ ಸಮುದಾಯಗಳ ನಡುವೆ ದ್ವೇಷ ಉತ್ತೇಜಿಸಿದ ಆರೋಪದ ಮೇಲೆ ತಮ್ಮ ವಿರುದ್ಧ ಮಂಗಳೂರು ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಹಿಂದು ಸಂಘಟನೆಯ ಮುಖಂಡ ಶರಣು ಪಂಪ್‌ವೆಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಎಂ ಅರುಣ ಶ್ಯಾಮ್ ಅವರು “ರಸ್ತೆಯಲ್ಲಿ ನಮಾಜ್ ಮಾಡಿದ ಘಟನೆ ಬಗ್ಗೆ ಎಫ್‌ಐಆರ್ ದಾಖಲಿಸಿದ ಪೊಲೀಸರು, ಆ ಪ್ರಕರಣ ಕುರಿತಂತೆ 24 ಗಂಟೆಯಲ್ಲಿ ವಿಚಾರಣಾಧೀನ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಅದನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ (ಫೇಸ್‌ಬಕ್) ಕಾಮೆಂಟ್ ಮಾಡಿ ಪೋಸ್ಟ್ ಹಾಕಿರುವುದಕ್ಕೆ ಅರ್ಜಿದಾರರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಹೇಳಲಾಗಿರುವ ಅಪರಾಧದ ಅಂಶಗಳು ಅರ್ಜಿದಾರರಿಗೆ ಅನ್ವಯಿಸುವುದಿಲ್ಲ” ಎಂದು ವಿವರಿಸಿದರು.
ಅದಕ್ಕೆ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಅರ್ಜಿದಾರರು ಸಾಮಾಜಿಕ ಅಶಾಂತಿ ಮೂಡಿಸುವ ರೀತಿಯಲ್ಲಿ ಪೋಸ್ಟ್ ಹಾಕಿದ್ದಾರೆ. ಇದರಿಂದ ಕೋಮು ಸೌಹಾರ್ದತೆ ಹಾಗೂ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಮುಂದೆ ಮತ್ತೊಬ್ಬರು ಇನ್ನೊಂದು ಸಮುದಾಯದ ಸಂಪ್ರದಾಯ ಆಚರಣೆ ಬಗ್ಗೆ ಕಾಮೆಂಟ್ ಮಾಡಿದರೆ ಏನು ಸಂದೇಶ ರವಾನೆಯಾಗುತ್ತದೆ. ಆಗ ಕಾನೂನು ಸುವ್ಯವಸ್ಥೆ ಏನಾಗಬೇಡ?” ಎಂದು ಖಾರವಾಗಿ ಕೇಳಿದರು.
ಅದಕ್ಕೆ ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು “ಇದೆಲ್ಲಾ ಏಕೆ ಮಾಡುತ್ತಾರೆ? ಸೌಹಾರ್ದತೆಯಿಂದ ಬುದುಕುವುದೇ ಯಾವುದೇ ಮನುಷ್ಯ ಬುದುಕುವ ಅತ್ಯುತ್ತಮ ವಿಧಾನವಾಗಿದೆ. ಸೌಹಾರ್ದತೆಯನ್ನು ಏಕೆ ಹೀಗೆ ಕದುಡುವುದು? ಅವರ ಮೇಲೆ; ಇವರ ಮೇಲೆ ಏಕೆ ಕಾಮೆಂಟ್ ಮಾಡಬೇಕು? ಇದರಿಂದ ಯಾವ ಪ್ರಗತಿ ಸಾಧ್ಯವಾಗುತ್ತದೆ? ಪಟ್ಟಭದ್ರ ಹಿತಾಸಕ್ತಿಯಿಂದ ಅಥವಾ ಮತ್ತೊಂದು ಗಳಿಸಲು ಹೀಗೆ ಮಾಡಲಾಗುತ್ತದೆ ಅಷ್ಟೇ” ಎಂದು ಬೇಸರ ವ್ಯಕ್ತಪಡಿಸಿದರು.
ಅಲ್ಲದೆ, “ನಾನು ಯಾವುದೇ ಸಮುದಾಯವನ್ನು ಉದ್ದೇಶಿಸಿ ಹೇಳುತ್ತಿಲ್ಲ. ಆದರೆ, ಅನಾದಿ ಕಾಲದಿಂದ ಜನರು ತಮ್ಮದೇ ಆದಾದ ಹಬ್ಬ-ಸಂಪ್ರದಾಯ ಆಚರಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಏಕೆ ಈಗ ಒಂದು ಸಮುದಾಯದ ಆಚರಣೆಯ ಬಗ್ಗೆ ಬೊಟ್ಟು ಮಾಡಿ ಹೇಳುವುದು? ಅರ್ಜಿದಾರರ ವಿರುದ್ಧ 20 ಕೇಸುಗಳು ದಾಖಲಾಗಿವೆ. ಏಕೆ ಇಷ್ಟು ಕೇಸ್‌ಗಳು ದಾಖಲಾಗಿವೆ?” ಎಂದು ಕೇಳಿದರು.
ಅರ್ಜಿದಾರರ ಪರ ವಕೀಲರು “ಪೊಲೀಸರು ಸಾಮಾಜಿಕ ಪೋಸ್ಟ್‌ಗಳಿಗೆ ಮಾಡಿರುವ ವಿಚಾರಗಳಿಗೆ ಅನಗತ್ಯವಾಗಿ ಹಾಗೂ ಸೂಕ್ತ ಕಾನೂನು ಪ್ರಕ್ರಿಯೆ ಪಾಲಿಸದೆ ಹಲವು ಎಫ್‌ಐಆರ್‌ಗಳನ್ನು ದಾಖಲಿಸುತ್ತಿದ್ದಾರೆ. ಪ್ರಕರಣದಲ್ಲಿ ಯಾವುದೇ ಅಪರಾಧಿಕ ಅಂಶಗಳು ಇಲ್ಲ” ಎಂದು ಪ್ರತಿಪಾದಿಸಿದರು.
ಸರ್ಕಾರಿ ಅಭಿಯೋಜಕರು “ಇಂತಹ ಘಟನೆಗಳಿಂದ ಬಂದ್ ಮಾಡಲಾಗುತ್ತದೆ. ಅದರಿಂದ ಸರ್ಕಾರದ ಬೊಕ್ಕಸಕ್ಕೆ ಎಷ್ಟೊಂದು ನಷ್ಟ ಉಂಟಾಗುತ್ತದೆ. ಇದನ್ನೇ ಅವರು ಬಯಸುತ್ತಾರೆ. ಇಂತಹ ಬೆಳವಣಿಗೆಗಳೇ ಆ ಭಾಗದಲ್ಲಿ (ಮಂಗಳೂರು) ನಡೆಯುತ್ತಿದೆ. ಕಾನೂನು ಸುವ್ಯವಸ್ಥೆಯು ಬಹುಮುಖ್ಯ ವಿಚಾರವಾಗಿದೆ. ಪ್ರಕರಣ ಕುರಿತು ತನಿಖೆ ಮುಂದುವರಿಸಲು ನ್ಯಾಯಾಲಯ ಅನುಮತಿಸಬೇಕು. ಪ್ರಕರಣದಲ್ಲಿ ಯಾವುದೇ ಅಪರಾಧದ ಅಂಶಗಳು ಇಲ್ಲವಾದರೆ, ಪೊಲೀಸರು ಬಿ ರಿಪೋಟ್ ಸಲ್ಲಿಸುತ್ತಾರೆ. ನನ್ನ ಈ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಬಹುದು” ಎಂದು ಪ್ರಬಲವಾಗಿ ವಾದಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿತು. ಹಾಗೆಯೇ, ಆದೇಶ ಪ್ರಕಟಿಸುವವರೆಗೆ ಅರ್ಜಿದಾರರ ವಿರುದ್ಧದ ತನಿಖೆಗೆ ನೀಡಲಾಗಿರುವ ತಡೆಯನ್ನು ಮುಂದುವರಿಸಿತು.