Chief Justice N V Anjaria and K V Aravind, Karnataka HC
Chief Justice N V Anjaria and K V Aravind, Karnataka HC

[ಮರಣ ಇಚ್ಛೆಯ ಉಯಿಲು] ಸುಧಾರಿತ ವೈದ್ಯಕೀಯ ನಿರ್ದೇಶನ ಜಾರಿಗೊಳಿಸಲು ಮನವಿ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ವ್ಯಕ್ತಿ ಅಥವಾ ರೋಗಿಯು ತಾನು ಭವಿಷ್ಯದಲ್ಲಿ ಕೋಮಾ ಸ್ಥಿತಿಗೆ ತಲುಪಿದರೆ ಜೀವರಕ್ಷಕದ ಸಹಾಯದಿಂದ ಬದುಕಿಸದಿರಿ ಎಂದು ಲಿವಿಂಗ್ ವಿಲ್ (ಮರಣ ಇಚ್ಚೆಯ ಉಯಿಲು) ಬರೆಯಲು ಅವಕಾಶ ನೀಡಿ ಸುಪ್ರೀಂ ಕೋರ್ಟ್ 2018ರಲ್ಲಿ ಐತಿಹಾಸಿಕ ತೀರ್ಪು ನೀಡಿತ್ತು.
Published on

ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿ ಅದು ವಾಸಿಯಾಗದ ಹಂತ ತಲುಪಿ ವ್ಯಕ್ತಿಯೊಬ್ಬ ಮರಣದ ಹಾಸಿಗೆಯಲ್ಲಿದ್ದಾಗ ಅವರಿಗೆ ಘನತೆಯ ಸಾವು ಸಾಧ್ಯವಾಗಿಸುವ ‘ಮರಣ ಇಚ್ಛೆಯ ಉಯಿಲು’ (ಲಿವಿಂಗ್ ವಿಲ್) ಬರೆಯುವ ಕುರಿತು ಸುಪ್ರೀಂಕೋರ್ಟ್ 2023ರಲ್ಲಿ ಜಾರಿಗೊಳಿಸಿರುವ ‘ಸುಧಾರಿತ ವೈದ್ಯಕೀಯ ನಿರ್ದೇಶನಗಳನ್ನು’ ಕರ್ನಾಟಕದಲ್ಲಿ ಜಾರಿಗೊಳಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ  ಕರ್ನಾಟಕ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೊಳಿಸಿದೆ.

ಬೆಂಗಳೂರು ನಿವಾಸಿಯಾದ ವಕೀಲ ಶಿವಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲೆ ಸ್ನೇಹ ನಾಗರಾಜ್ ಅವರ ವಾದ ಆಲಿಸಿದ ಪೀಠವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ಮುಂದೂಡಿತು.

ಮರಣದ ಹಾಸಿಗೆಯಲ್ಲಿರುವ ವ್ಯಕ್ತಿಗೆ ಯಾವಾಗ ಕೊನೆಯುಸಿರೆಳೆಬೇಕು ಎಂದು ನಿರ್ಧರಿಸುವ ಹಕ್ಕಿರುತ್ತದೆ. ಮನುಷ್ಯ ಗೌರವಯುತವಾಗಿ ಸಾಯುವ ಹಕ್ಕು ಹೊಂದಿದ್ದು, ಆತನಿಗೆ ಮಾರ್ಗಸೂಚಿಗಳ ಅನ್ವಯ ದಯಾಮರಣಕ್ಕೆ ಅನುಮತಿ ನೀಡಬಹುದು. ಪುನಶ್ಚೇತನಗೊಳ್ಳುವ ಯಾವುದೇ ಸಾಧ್ಯತೆಗಳು ಇಲ್ಲದ ಪರಿಸ್ಥಿತಿಯಿದ್ದಾಗ, ಬದುಕಿರಲು ಇಚ್ಛಿಸದ ವ್ಯಕ್ತಿಗೆ ಸಂಕಷ್ಟದಲ್ಲಿ ಜೀವನ ಮುಂದುವರಿಸುವ ಸ್ಥಿತಿ ಇರಬಾರದು. ಒಂದು ವೇಳೆ ವ್ಯಕ್ತಿ ಅಥವಾ ರೋಗಿಯು ತಾನು ಭವಿಷ್ಯದಲ್ಲಿ ಕೋಮಾ ಸ್ಥಿತಿಗೆ ತಲುಪಿದರೆ ಜೀವರಕ್ಷಕದ ಸಹಾಯದಿಂದ ಬದುಕಿಸದಿರಿ ಎಂದು ಲಿವಿಂಗ್ ವಿಲ್ (ಮರಣ ಇಚ್ಚೆಯ ಉಯಿಲು) ಬರೆಯಲು ಅವಕಾಶ ನೀಡಿ ಸುಪ್ರೀಂ ಕೋರ್ಟ್ 2018ರಲ್ಲಿ ಐತಿಹಾಸಿಕ ತೀರ್ಪು ನೀಡಿತ್ತು.

ಅದರಂತೆ, ಮಾರಣಾಂತಿಕ ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಅಳವಡಿಸಿರುವ ಜೀವ ರಕ್ಷಕ ಸಾಧನ ತೆಗೆಯುವುದಕ್ಕೆ ಪ್ರಥಮ ದರ್ಜೆಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಜೆಎಂಎಫ್ಸಿ) ಅನುಮತಿಯನ್ನು ಈ ಮೊದಲು ಕಡ್ಡಾಯಗೊಳಿಸಲಾಗಿತ್ತು. ಆದರೆ, ಈ ಆದೇಶವನ್ನು 2023ರಲ್ಲಿ ಮಾರ್ಪಡಿಸಿದ್ದ ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ನು ಸರಳೀಕರಿಸಿತ್ತು. ಸುಧಾರಿತ ವೈದ್ಯಕೀಯ ನಿರ್ದೇಶನಗಳನ್ವಯ ಮರಣ ಇಚ್ಛೆಯ ಉಯಿಲು ಬರೆಯುವ ವ್ಯಕ್ತಿಯು ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ದಾಖಲೆಗಳಿಗೆ ಸಹಿ ಹಾಕಬೇಕು. ಅದನ್ನು ನೋಟರಿ ಅಥವಾ ಗೆಜೆಟೆಡ್ ಅಧಿಕಾರಿ ದೃಢೀಕರಿಸಬೇಕು ಎಂದು ಹೇಳಲಾಗಿತ್ತು. ಈ ಸುಧಾರಿತ ವೈದ್ಯಕೀಯ ನಿರ್ದೇಶನಗಳನ್ನು ಜಾರಿಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಸುಧಾರಿತ ವೈದ್ಯಕೀಯ ನಿರ್ದೇಶನಗಳನ್ನು ಕರ್ನಾಟಕದಲ್ಲಿ ಜಾರಿಗೊಳಿಸಿರುವ ಸಂಬಂಧ ಮಾಹಿತಿ ಹಕ್ಕು ಕಾಯಿದೆ ಅಡಿ ಆರೋಗ್ಯ ಇಲಾಖೆಗೆ ಮಾಹಿತಿ ಕೇಳಲಾಗಿತ್ತು. ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Also Read
ಉಯಿಲು 30 ವರ್ಷಕ್ಕಿಂತ ಹಳೆಯದಾದ ಮಾತ್ರಕ್ಕೆ ಅದನ್ನು ಅಸಲಿ ಎಂದು ಭಾವಿಸಲಾಗದು: ಸುಪ್ರೀಂ ಕೋರ್ಟ್

ಮರಣ ಇಚ್ಚೆಯ ಉಯಿಲು ಸಂಬಂಧ 2023ರ ಜನವರಿ 24ರಂದು ಸುಪ್ರೀಂ ಕೋರ್ಟ್ ಹೊರಡಿಸಿರುವ ಮಾರ್ಪಡಿಸಿದ ಆದೇಶದಂತೆ ಸ್ಥಳೀಯ ಸಕ್ಷಮ ಅಧಿಕಾರಿಯನ್ನು ನೇಮಕ ಮಾಡಬೇಕು. ಈ ಅಧಿಕಾರಿಯು ಸುಧಾರಿತ ವೈದ್ಯಕೀಯ ನಿರ್ದೇಶನಗಳಿಗೆ (ಮರಣ ಇಚ್ಚೆಯ ಉಯಿಲು) ಸಂಬಂಧಿಸಿದ ದಾಖಲೆಗಳ ಸಂಗ್ರಹ, ನಿರ್ವಹಣೆ ಮತ್ತು ಅವುಗಳನ್ನು ಸಂರಕ್ಷಿಸಿಡುವ ಅಧಿಕಾರವನ್ನು ಖಾತರಿಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಸ್ಥಳೀಯ ಸಕ್ಷಮ ಅಧಿಕಾರಿಯು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ಅಗತ್ಯ ನಿಯಮಗಳು, ಮಾರ್ಗಸೂಚಿಗಳನ್ನು ರೂಪಿಸಿ ಅವುಗಳನ್ನು ಜಾರಿಗೊಳಿಸುವಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.  

Kannada Bar & Bench
kannada.barandbench.com