ಸಾಲ ಮರುಪಾವತಿ ಪ್ರಕರಣ: ನಟ ವಿಶಾಲ್ ಸಿನಿಮಾ ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಿದ ಮದ್ರಾಸ್ ಹೈಕೋರ್ಟ್

ಲೈಕಾ ಪ್ರೊಡಕ್ಷನ್ಸ್ ಸಲ್ಲಿಸಿದ ಮೊಕದ್ದಮೆಗೆ ಸಂಬಂಧಿಸಿದಂತೆ ₹ 15 ಕೋಟಿ ಸ್ಥಿರ ಠೇವಣಿ ಇರಿಸುವವರೆಗೆ ವಿಶಾಲ್ ಅವರು ನಿರ್ಮಿಸಿದ ಅಥವಾ ಬಂಡವಾಳ ಹೂಡಿದ ಚಲನಚಿತ್ರಗಳನ್ನು ಬಿಡುಗಡೆ ಮಾಡದಂತೆ ನ್ಯಾಯಾಲಯ ನಿರ್ಬಂಧಿಸಿದೆ.
Actor Vishal
Actor Vishal A1
Published on

ತಮಿಳು ನಟ ವಿಶಾಲ್ ಕೃಷ್ಣಾ ರೆಡ್ಡಿ ಅವರಿಂದ ₹21.29 ಕೋಟಿ ಸಾಲ ವಸೂಲಾತಿ ಕೋರಿ ಲೈಕಾ ಪ್ರೊಡಕ್ಷನ್ಸ್ ಹೂಡಿರುವ ಮೊಕದ್ದಮೆಗೆ ಸಂಬಂಧಿಸಿದಂತೆ ₹15 ಕೋಟಿ ಮೌಲ್ಯದ ಬಡ್ಡಿ ಸಹಿತ ನಿಶ್ಚಿತ ಠೇವಣಿ ಇರಿಸುವವರೆಗೆ ಯಾವುದೇ ಸಿನಿಮಾ ಮಾಡದಂತೆ ನಟನಿಗೆ ಮದ್ರಾಸ್‌ ಹೈಕೋರ್ಟ್‌ ಬುಧವಾರ ತಡೆ ನೀಡಿದೆ.

ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ಇಡುವಂತೆ ವಿಶಾಲ್‌ ಅವರಿಗೆ ಹೈಕೋರ್ಟ್‌ನ ಏಕಸದಸ್ಯ ಪೀಠ ಮಾರ್ಚ್ 2022ರಲ್ಲಿ ಸೂಚಿಸಿತ್ತು. ಈ ಆದೇಶ ಪ್ರಶ್ನಿಸಿ ವಿಶಾಲ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಇದೀಗ ಅವರ ಮೇಲ್ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ ರಾಜಾ ಮತ್ತು ನ್ಯಾಯಮೂರ್ತಿ ಡಿ ಭರತ ಚಕ್ರವರ್ತಿ ಅವರಿದ್ದ ಪೀಠ ವಜಾಗೊಳಿಸಿದೆ.

ದಾವೆಯ ಪ್ರಕಾರ, 2019ರಲ್ಲಿ, ವಿಶಾಲ್ ಬೇರೊಬ್ಬರಿಂದ  ₹ 21.29 ಕೋಟಿ ಸಾಲ ಪಡೆದಿದ್ದರು. ಆ ಸಾಲ ತೀರಿಸಿದ್ದ ಲೈಕಾ ಪ್ರತಿಯಾಗಿ, ವಿಶಾಲ್ ಅವರಿಗೆ ಶೇ 30ರಷ್ಟು ಬಡ್ಡಿಯೊಂದಿಗೆ ಅಸಲು ಮೊತ್ತವನ್ನು ಮರುಪಾವತಿಸುವಂತೆ ಸೂಚಿಸಿತ್ತು. ಆದರೆ ಹಣ ಪಾವತಿಸಲು ವಿಶಾಲ್‌ ವಿಫಲರಾಗಿದ್ದಾರೆ ಎಂದು ಲೈಕಾ ಹೈಕೋರ್ಟ್‌ನಲ್ಲಿ ಅಳಲು ತೋಡಿಕೊಂಡಿತ್ತು.

ಲೈಕಾ ಸಾಲ ತೀರಿಸಲು ಒಪ್ಪಿತ್ತಾದರೂ ಎಂದಿಗೂ ಆ ಹಣವನ್ನು ವಿಶಾಲ್‌ ಪರವಾಗಿ ಬಿಡುಗಡೆ ಮಾಡಿರಲಿಲ್ಲ ಎಂದು ವಿಶಾಲ್‌ ಪರ ವಕೀಲರು ವಾದಿಸಿದ್ದರು. ಆದರೆ ಹಣಪಾವತಿಯಾಗಿರುವ ಬಗ್ಗೆ ತಾವು ದಾಖಲೆಗಳನ್ನು ಸಲ್ಲಿಸಿದ ನಂತರವೇ ಏಕಸದಸ್ಯ ಪೀಠ ಆದೇಶ ರವಾನಿಸಿದೆ ಎಂದು ಲೈಕಾ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಏಕಸದಸ್ಯ ಪೀಠದ ಆದೇಶ ಕಾನೂನಿಗೆ ಅನುಗುಣವಾಗಿದೆ ಎಂಬದನ್ನು ಒಪ್ಪಿದ ವಿಭಾಗೀಯ ಪೀಠ ವಿಶಾಲ್‌ ಮೇಲ್ಮನವಿಗೆ ಯಾವುದೇ ಅರ್ಹತೆ ಇಲ್ಲ ಎಂದಿತು. ಅಲ್ಲದೆ ಆದೇಶ ಪಾಲಿಸಲು ವಿಶಾಲ್‌ ವಿಫಲವಾದರೆ ಏಕಸದಸ್ಯ ಪೀಠವು ಪ್ರತಿಬಂಧಕಾದೇಶದ ಷರತ್ತನ್ನು ವಿಧಿಸಬೇಕಿತ್ತು ಎಂದು ಹೇಳಿತು. ಹೀಗಾಗಿ ಆದೇಶ ಮಾರ್ಪಾಡುಗೊಳಿಸುವಂತೆ ಅದು ತಿಳಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Vishal_Krishna_Reddy_v_Lyca_Productions.pdf
Preview
Kannada Bar & Bench
kannada.barandbench.com