ಕೋವಿಡ್ ಎರಡನೇ ಅಲೆ: ಬಡ್ಡಿ ರಹಿತ ಸಾಲ ಕಂತು ಮರುಪಾವತಿ ಅವಧಿ ವಿಸ್ತರಿಸಲಾಗದು ಎಂಬ ಸುಳಿವು ನೀಡಿದ ಸುಪ್ರೀಂ

ನಿರುದ್ಯೋಗ ಮತ್ತು ವ್ಯಾಪಾರ ಅವಕಾಶಗಳ ನಷ್ಟದ ಕಾರಣದಿಂದಾಗಿ ಸಾಲಗಾರರಿಗೆ ಪರಿಹಾರ ಒದಗಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.
ಕೋವಿಡ್ ಎರಡನೇ ಅಲೆ: ಬಡ್ಡಿ ರಹಿತ ಸಾಲ ಕಂತು ಮರುಪಾವತಿ ಅವಧಿ ವಿಸ್ತರಿಸಲಾಗದು ಎಂಬ ಸುಳಿವು ನೀಡಿದ ಸುಪ್ರೀಂ
RBI Supreme Court

ಆರು ತಿಂಗಳ ಅವಧಿಗೆ ಅಥವಾ ಕೋವಿಡ್‌ ಪರಿಸ್ಥಿತಿ ಸುಧಾರಿಸುವವರೆಗೆ ಬಡ್ಡಿರಹಿತವಾಗಿ ಸಾಲದ ಕಂತು ಮರುಪಾವತಿ ಅವಧಿ (ಮೊರಟೋರಿಯಂ) ವಿಸ್ತರಿಸಲು ಸಾಧ್ಯವಗದೆ ಹೋಗಬಹುದು ಎಂಬ ಸುಳಿವನ್ನು ಸುಪ್ರೀಂಕೋರ್ಟ್‌ ಸೋಮವಾರ ನೀಡಿದೆ.

ವೀಡಿಯೊ ಕಾನ್ಫರೆನ್ಸ್‌ ಮೂಲಕ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ ಆರ್ ಶಾ ಅವರಿದ್ದ ಪೀಠ ವಕೀಲ ವಿಶಾಲ್ ತಿವಾರಿ ಅವರ ಸಂಪರ್ಕ ಪಡೆಯಲು ಕಾಯುತ್ತಿರುವಾಗ ಈ ಸುಳಿವು ನೀಡಿತು.

ನ್ಯಾ. ಭೂಷಣ್‌ ಅವರು “ಮನವಿಯನ್ನು ಗಮನಿಸಿದ್ದೀರಾ?” ಎಂದು ಪ್ರಶ್ನಿಸಿದಾಗ ನ್ಯಾ. ಶಾ ಅವರು “ಹೌದು. ನಾವಿದನ್ನು ಅಂಗೀಕರಿಸಲಾಗದು. (ಪ್ರಕರಣದಲ್ಲಿ) ಆರ್‌ಬಿಐಗೆ ಮನವಿ ಸಲ್ಲಿಸಲು ನಾವು ಇದನ್ನು ಅನುಮತಿಸಬಹುದು” ಎಂದರು. ವಿಚಾರಣೆ ವೇಳೆ ತಿವಾರಿ ಅವರು ಸಂಪರ್ಕಕ್ಕೆ ದೊರೆಯದ ಕಾರಣ ಪ್ರಕರಣವನ್ನು ಜೂನ್‌ 11ರಂದು ಕೈಗೆತ್ತಿಕೊಳ್ಳಾಗುವುದು ಎಂದು ನ್ಯಾಯಾಲಯ ತಿಳಿಸಿತು.

Also Read
ಆರ್‌ಬಿಐ ಮೊರಟೋರಿಯಂ: ಸಣ್ಣ ಸಾಲಗಾರರ ಕೈಹಿಡಿಯಲು ಮುಂದಾದ ಕೇಂದ್ರ, ರೂ.2 ಕೋಟಿಯವರೆಗಿನ ಸಾಲದ ಚಕ್ರಬಡ್ಡಿ ಮನ್ನಾ

ನಿರುದ್ಯೋಗ ಮತ್ತು ವ್ಯಾಪಾರ ಅವಕಾಶಗಳ ನಷ್ಟದ ಕಾರಣದಿಂದಾಗಿ ಸಾಲಗಾರರಿಗೆ ಪರಿಹಾರ ಒದಗಿಸುವಂತೆ ಕೋರಿ ತಿವಾರಿ ಅವರು ಅರ್ಜಿ ಸಲ್ಲಿಸಿದ್ದರು. ಕೇಂದ್ರ ಸರ್ಕಾರ ಮತ್ತು ಅದರ ಸಚಿವಾಲಯಗಳಾಗಲಿ, ಆರ್‌ಬಿಐ ಆಗಲಿ ಉಳಿವಿನ, ಅಸ್ತಿತ್ವದ ಪ್ರಶ್ನೆ ಎದುರಿಸುತ್ತಿರುವ ಒತ್ತಡದಲ್ಲಿರುವ ವಲಯಗಳು ಹಾಗೂ ವ್ಯಕ್ತಿಗಳಿಗೆ ಯಾವುದೇ ಸೂಕ್ತ ಪರಿಹಾರ ಒದಗಿಸಲು ವಿಫಲವಾಗಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

"ಈ ಒತ್ತಡದ ವೇಳೆಯಲ್ಲಿ ಯಾವುದೇ ವಿತ್ತೀಯ ಪರಿಹಾರ ಮತ್ತು ಪ್ಯಾಕೇಜುಗಳನ್ನು ಸರ್ಕಾರ ಘೋಷಿಸಿಲ್ಲ. ಜನ ಇಎಂಐಗಳನ್ನು ನಿರ್ವಹಿಸಬೇಕಾದ ತೀವ್ರ ಒತ್ತಡದಲ್ಲಿದ್ದಾರೆ ಮತ್ತು ಯಾವಾಗ ಬೇಕಾದರೂ ತಮ್ಮ ಖಾತೆಗಳನ್ನು ʼಎನ್‌ಪಿಎʼ (ಅನುತ್ಪಾದಕ ಆಸ್ತಿ) ಎಂದು ಘೋಷಿಸಬಹುದು ಎಂಬ ಭೀತಿ ಎದುರಿಸುತ್ತಿದ್ದಾರೆ. ಯಾವುದೇ ಸಂಬಳವಿಲ್ಲದಿರುವುದರಿಂದ ಜನರಿಗೆ ಆದಾಯವಿಲ್ಲದೆ ಹತಾಶ ಸ್ಥಿತಿ ತಲುಪಿದ್ದಾರೆ. ಆರ್‌ಬಿಐ ಮೇ ಆರರಂದು ರೆಸಲ್ಯೂಶನ್ ಪ್ಲ್ಯಾನ್ 2.0 ಎಂಬ ಸುತ್ತೋಲೆ ಹೊರಡಿಸಿದೆ, ಇದು ಪ್ರಸ್ತುತ ಸಂದರ್ಭದಲ್ಲಿ ಕೇವಲ ಸ್ವೇಚ್ಛೆಯ, ಅನ್ಯಾಯದ, ಕಣ್ಣೊರೆಸುವ ಕ್ರಮವಾಗಿದ್ದು ಎಲ್ಲರಿಗೂ ಸೂಕ್ತ ಪರಿಹಾರ ದೊರೆಯುತ್ತದೆ ಎಂದು ಹೇಳಲಾಗದು "ಎಂಬುದಾಗಿ ಅರ್ಜಿ ವಿವರಿಸಿದೆ.

ಸಾಲ ಮರುಪಾವತಿ ಮಾಡದೇ ಇರುವುದಕ್ಕಾಗಿ ಯಾವುದೇ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆ ಮುಂದಿನ ಆರು ತಿಂಗಳವರೆಗೆ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬಾರದು. ಯಾವುದೇ ಖಾತೆಗಳನ್ನು ಅನುತ್ಪಾದಕ ಆಸ್ತಿ ಎಂದು ಘೋಷಿಸದಂತೆ ನಿರ್ದೇಶನ ನೀಡಬೇಕೆಂದು ತಿವಾರಿ ಅವರು ಪ್ರಮುಖವಾಗಿ ಕೋರಿದ್ದಾರೆ.

No stories found.
Kannada Bar & Bench
kannada.barandbench.com