ಹ್ಯಾಕರ್ ಶ್ರೀಕಿ ಸಹೋದರ ಸುದರ್ಶನ್‌ ವಿರುದ್ಧ ಎಲ್‌ಒಸಿ: 10 ವಾರಗಳಲ್ಲಿ ನಿರ್ಧರಿಸಲು ಕೇಂದ್ರಕ್ಕೆ ನಿರ್ದೇಶನ

ಆರು ವಾರಗಳ ಒಳಗೆ ಇ ಡಿ ತನಿಖೆ ಪೂರ್ಣಗೊಳಿಸಬೇಕು. ಇದಕ್ಕೆ ಅರ್ಜಿದಾರರು ಸಹಕರಿಸಬೇಕು. ಆನಂತರ ಎಲ್‌ಒಸಿ ಹಿಂಪಡೆಯಲು ಅರ್ಜಿದಾರರು ಸಲ್ಲಿಸುವ ಮನವಿಯನ್ನು ಬ್ಯುರೊ ಆಫ್‌ ಇಮಿಗ್ರೇಷನ್‌ ಮತ್ತು ಇ ಡಿ ಪರಿಗಣಿಸಬೇಕು ಎಂದಿರುವ ನ್ಯಾಯಾಲಯ.
Sriki and Bitcoin
Sriki and Bitcoin

ಬಿಟ್‌ಕಾಯಿನ್‌ ಹ್ಯಾಕಿಂಗ್ ಹಗರಣದ ರೂವಾರಿ ಎನ್ನಲಾದ ಶ್ರೀಕಿ ಅಲಿಯಾಸ್‌ ಶ್ರೀ ಕೃಷ್ಣ ಸಹೋದರ ಸುದರ್ಶನ್‌ ರಮೇಶ್‌ ಅವರ ವಿರುದ್ಧದ ತನಿಖೆಯನ್ನು ಆರು ವಾರಗಳಲ್ಲಿ ಪೂರ್ಣಗೊಳಿಸಬೇಕು. ಜಾರಿ ನಿರ್ದೇಶನಾಲಯದ ಪ್ರಶ್ನೆಗಳಿಗೆ ಸುದರ್ಶನ್‌ ಅವರು ಸರಿಯಾದ ಉತ್ತರ ನೀಡಬೇಕು. ಆನಂತರ 10 ವಾರಗಳ ಒಳಗೆ ಅವರ ವಿರುದ್ಧ ಹೊರಡಿಸಲಾಗಿರುವ ಲುಕ್‌ಔಟ್‌ ಸುತ್ತೋಲೆ (ಎಲ್‌ಒಸಿ) ಹಿಂಪಡೆಯುವ ಸಂಬಂಧ ನಿರ್ಧರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಈಚೆಗೆ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

2022ರ ಡಿಸೆಂಬರ್‌ 19ರ ತನ್ನ ಮನವಿಯನ್ನು ಪರಿಗಣಿಸಲು ಕೇಂದ್ರ ಗೃಹ ಇಲಾಖೆಯ ಬ್ಯುರೊ ಆಫ್‌ ಇಮಿಗ್ರೇಷನ್‌ಗೆ ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರಿನ ಸುದರ್ಶನ್‌ ರಮೇಶ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಇತ್ಯರ್ಥಪಡಿಸಿದೆ.

“ಎಲ್ಲಾ ಸಂದರ್ಭದಲ್ಲೂ ಅರ್ಜಿದಾರ ಸುದರ್ಶನ್‌ ಅವರ ಮೇಲೆ ಎಲ್‌ಒಸಿ ತೂಗುಗತ್ತಿಯನ್ನು ಜಾರಿ ನಿರ್ದೇಶನಾಲಯ ಇರುವಂತೆ ಮಾಡಲಾಗದು. 2022ರ ಜನವರಿ 13ರಂದು ಎಲ್‌ಒಸಿ ಹೊರಡಿಸಲಾಗಿದ್ದು, ಈಗ ಒಂದು ವರ್ಷವಾಗಿದೆ. ವಿದೇಶ ಪ್ರಯಾಣ ಮೂಲಭೂತ ಹಕ್ಕು ಎಂದು ಹಲವು ತೀರ್ಪುಗಳು ಸಾಂವಿಧಾನಿಕ ನ್ಯಾಯಾಲಯಗಳು ಹೇಳಿರುವುದನ್ನು ಜಾರಿ ನಿರ್ದೇಶನಾಲಯ ಗಮನದಲ್ಲಿಟ್ಟುಕೊಳ್ಳಬೇಕು” ಎಂದು ನ್ಯಾಯಾಲಯ ಹೇಳಿದೆ.

“ಸುದರ್ಶನ್‌ ಅವರು ತನಿಖೆ ಸಹರಿಸುತ್ತಿಲ್ಲ ಎಂಬುದು ಜಾರಿ ನಿರ್ದೇಶನಾಲಯ ಆರೋಪವಾಗಿದೆ. ತನಿಖೆಗೆ ಸಮನ್ಸ್‌ ನೀಡದೇ ಜಾರಿ ನಿರ್ದೇಶನಾಲಯ ರೀತಿ ಹೇಳಲಾಗದು. ಹೀಗಾಗಿ, ಆರು ವಾರಗಳ ಒಳಗೆ ಜಾರಿ ನಿರ್ದೇಶನಾಲಯವು ತನಿಖೆ ಪೂರ್ಣಗೊಳಿಸಬೇಕು. ಇದಕ್ಕೆ ಅರ್ಜಿದಾರರು ಸಹಕರಿಸಬೇಕು. ಆನಂತರ ಎಲ್‌ಒಸಿ ಹಿಂಪಡೆಯಲು ಅರ್ಜಿದಾರರು ಸಲ್ಲಿಸುವ ಮನವಿಯನ್ನು ಬ್ಯುರೊ ಆಫ್‌ ಇಮಿಗ್ರೇಷನ್‌ ಮತ್ತು ಜಾರಿ ನಿರ್ದೇಶನಾಲಯವು ಪರಿಗಣಿಸಬೇಕು. ಉಭಯ ಪಕ್ಷಕಾರರು ಷರತ್ತಿಗೆ ಬದ್ಧವಾಗಿರಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.

ಪ್ರಕರಣದ ಹಿನ್ನೆಲೆ: ನೆದರ್‌ಲ್ಯಾಂಡ್‌ನಲ್ಲಿ ಉದ್ಯೋಗದಲ್ಲಿದ್ದ ಸುದರ್ಶನ್‌ ಅವರು ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದ ತಂದೆಯನ್ನು ನೋಡಲು 2021ರ ಆಗಸ್ಟ್‌ 12ರಂದು ಭಾರತಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯವು ಅವರಿಗೆ ಸಮನ್ಸ್‌ ನೀಡಿತ್ತು. ತನಿಖೆ ಪೂರ್ಣಗೊಳಿಸಲು ಅಗತ್ಯವಾದ ಪಾಸ್‌ವರ್ಡ್‌ಗಳ ಮಾಹಿತಿಯನ್ನು ಅರ್ಜಿದಾರರು ನೀಡುತ್ತಿಲ್ಲ. ಆ ಮೂಲಕ ತನಿಖೆಗೆ ಸಹಕರಿಸುತ್ತಿಲ್ಲ ಎಂಬುದು ಇ ಡಿ ಆರೋಪ. ತನಿಖೆ ವ್ಯಾಪ್ತಿ ಮೀರಿ, ದೇಶದಿಂದ ಹೊರಗೆ ಹೋಗಿ ನೆದರ್‌ಲ್ಯಾಂಡ್‌ನಲ್ಲಿ ನೆಲೆಸುತ್ತಾರೆ ಎಂಬುದು ಇ ಡಿಯ ಗಂಭೀರ ಆತಂಕವಾಗಿದ್ದು, ಇದಕ್ಕಾಗಿ ಅವರ ವಿರುದ್ಧ ಎಲ್‌ಒಸಿ ಹೊರಡಿಸಲಾಗಿದೆ.

ಸುದರ್ಶನ್‌ ಸಹೋದರ ಶ್ರೀಕೃಷ್ಣ ಪೋಕರ್‌ ವೆಬ್‌ಸೈಟ್‌ಗಳು ಮತ್ತು ಬಿಕ್‌ಕಾಯಿನ್‌ ಎಕ್ಸ್‌ಚೇಂಜ್‌ಗಳನ್ನು ಹ್ಯಾಕ್‌ ಮಾಡಿ, ಬೃಹತ್‌ ಮೊತ್ತದ ವರ್ಗಾವಣೆಯನ್ನು ದೇಶ ವಿದೇಶದಲ್ಲಿ ಮಾಡಿದ್ದಾನೆ. ಕ್ರಿಪ್ಟೊ ಕರೆನ್ಸಿಯನ್ನು ಕನ್ವರ್ಟ್‌ ಮಾಡಿ ಅದನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ವಹಿವಾಟು ನಡೆಸಿದ್ದಾನೆ. ಈ ಮೂಲಕ ಅಕ್ರಮವಾಗಿ ಸಂಪತ್ತು ಗಳಿಸಿದ್ದಾನೆ. 2013ರಿಂದ ಇಲ್ಲಿಯವರೆಗೆ ಕ್ರಿಪ್ಟೊ ಎಕ್ಸ್‌ಚೇಂಜ್‌ ಮತ್ತು ದೇಶ ಮತ್ತು ವಿದೇಶಗಳಲ್ಲಿನ ಪೋಕರ್‌ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿರುವುದಕ್ಕೆ ಸಂಬಂಧಿಸಿದಂತೆ ಹೇಳಿಕೆ ಪಡೆಯಲು ಶ್ರೀಕಿ ಮತ್ತು ಅವರ ತಂದೆಗೆ ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್‌ 50ರ ಅಡಿ ಸಮನ್ಸ್‌ ಜಾರಿ ಮಾಡಲಾಗಿತ್ತು.

Also Read
ಬಿಟ್‌ ಕಾಯಿನ್‌ ಹಗರಣ: ನೆದರ್‌ಲ್ಯಾಂಡ್‌ಗೆ ತೆರಳಲು ಅನುಮತಿ ಕೋರಿ ಹೈಕೋರ್ಟ್‌ ಕದತಟ್ಟಿದ ಶ್ರೀಕಿ ಸಹೋದರ

ಈ ವೇಳೆ ಶ್ರೀಕಿಯು ಅಕ್ರಮವಾಗಿ ಪಡೆದ ಹಣವನ್ನು ಮಾದಕ ವಸ್ತು ಖರೀದಿ, ಪ್ರವಾಸ, ಮೋಜು ಮತ್ತು ಐಷಾರಾಮಿ ಹೋಟೆಲ್‌ಗಳಲ್ಲಿ ನೆಲೆಸಲು ವೆಚ್ಚ ಮಾಡಲಾಗಿದೆ ಎಂದು ತಿಳಿಸಿದ್ದ. ಬಿಟ್‌ಕಾಯಿನ್‌ ಕದ್ದಿರುವುದು ಮತ್ತು ಡಾರ್ಕ್‌ವೆಬ್‌ ಮೂಲಕ ಮಾದಕ ವಸ್ತು ಖರೀದಿಸಿರುವುದಕ್ಕೆ ಶ್ರೀಕಿ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಕರ್ನಾಟಕ ಸರ್ಕಾರದ ಇ-ಪ್ರಕ್ಯೂರ್‌ಮೆಂಟ್‌ ಪೋರ್ಟಲ್‌ ಹ್ಯಾಕ್‌ ಮಾಡಿ ₹11.55 ಕೋಟಿಯನ್ನು ಸರ್ಕಾರಿ ಪೋರ್ಟಲ್‌ ಬ್ಯಾಂಕ್‌ ಖಾತೆಯಿಂದ ಕದ್ದಿರುವುದರ ಸಂಬಂಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಇದರ ಆಧಾರದಲ್ಲಿ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿತ್ತು. ಇದು ಬೆಳಕಿಗೆ ಬಂದ ನಂತರ ಶ್ರೀಕಿ ಹೆಸರು ಮುನ್ನೆಲೆಗೆ ಬಂದಿದ್ದು, ಆ ಆರೋಪಗಳಲ್ಲಿನ ಪಾತ್ರದ ಕುರಿತು ಶ್ರೀಕಿ ಹೇಳಿಕೆ ದಾಖಲಾಗಿತ್ತು. ಇದು ಇಡೀ ಪ್ರಕರಣದ ಮೂಲವಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com