ಕಾನೂನು ಶಿಕ್ಷಣ ಸ್ಥಳೀಯ ಭಾಷೆಯಲ್ಲಿ ದೊರೆತರೆ ಅದು ಪೂರಕ ಪ್ರಾದೇಶಿಕ ಭಾಷಾ ವಾತಾವರಣ ಮೂಡಿಸುತ್ತದೆ: ಸಚಿವ ರಿಜಿಜು

ಕೊಲಿಜಿಯಂ ವ್ಯವಸ್ಥೆ ಮತ್ತು ನ್ಯಾಯಾಂಗದೊಳಗಿನ ರಾಜಕೀಯದ ಬಗ್ಗೆ ಈ ಹಿಂದೆ ಮಾತನಾಡಿದ್ದ ಕಾನೂನು ಸಚಿವರು, ಇಂದು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಸೌಹಾರ್ದ ಸಂಬಂಧವಿದೆ ಎಂದರು.
Kiren Rijiju Law Minister
Kiren Rijiju Law Minister

ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆ ಜಾರಿಗೆ ತರುವ ಅಗತ್ಯವನ್ನು ಒತ್ತಿ ಹೇಳಿದ ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಸ್ಥಳೀಯ ಭಾಷೆಯಲ್ಲಿ ಕಾನೂನು ಶಿಕ್ಷಣ ನೀಡಬೇಕು ಎಂದರು.

ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಅವರು ಶನಿವಾರ ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಅಳವಡಿಸುವ ಅಗತ್ಯವನ್ನು ಎತ್ತಿ ತೋರಿಸಿದರು ಮತ್ತು ಕಾನೂನು ಶಿಕ್ಷಣವನ್ನು ಸ್ಥಳೀಯ ಭಾಷೆಯಲ್ಲಿ ನಿರ್ವಹಿಸಬೇಕು ಎಂದು ಕರೆ ನೀಡಿದರು.

ಸುಪ್ರೀಂಕೋರ್ಟ್‌ನಲ್ಲಿ ಶನಿವಾರ ನಡೆದ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾಷಣದ ಪ್ರಮುಖಾಂಶಗಳು

  • ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸಲು ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆ ಜಾರಿಗೆ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ. ಕಾನೂನು ಸಚಿವಾಲಯದ ಆಶ್ರಯದಲ್ಲಿ ಭಾರತೀಯ ವಕೀಲರ ಪರಿಷತ್ತು ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೋಬ್ಡೆ ಅವರ ನೇತೃತ್ವದಲ್ಲಿ ಭಾರತೀಯ ಭಾಷಾ ಸಮಿತಿ ಸ್ಥಾಪಿಸಿದೆ. ನಾವು ಈಗಾಗಲೇ 65,000 ಪದಗಳ ಶಬ್ದಕೋಶವನ್ನು ರೂಪಿಸಿದ್ದೇವೆ. ಅವುಗಳ ಡಿಜಿಟಲೀಕರಣಕ್ಕಾಗಿ ಕೃತಕ ಬುದ್ಧಿಮತ್ತೆಯ (ಎಐ) ತಂತ್ರಜ್ಞಾನ ಬಳಕೆ ಮಾಡಿ ಅವು ಎಲ್ಲರಿಗೂ ಲಭ್ಯವಾಗುವಂತೆ ಮಾಡುತ್ತೇವೆ. ಒಮ್ಮೆ ಸ್ಥಳೀಯ ಭಾಷೆಯಲ್ಲಿ ಕಾನೂನು ಶಿಕ್ಷಣ ಆರಂಭವಾದರೆ ಅದು ಸ್ಥಳೀಯ ಭಾಷೆಯಲ್ಲಿ ಪೂರಕ ವಾತಾವರಣ ನಿರ್ಮಿಸುತ್ತದೆ.

  • ಸಮಾನ ನ್ಯಾಯ ಕುರಿತಾದ ಸಾಂವಿಧಾನಿಕ ಭರವಸೆ ಎಂಬುದು ಮಾಹಿತಿಯನ್ನು ನಿಯಮಿತ ಆಧಾರದಲ್ಲಿ ಲಭ್ಯವಾಗುವಂತೆ ಹಾಗೂ ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ಒದಗಿಸುವುದರ ಮೇಲೆ ನಿಂತಿದೆ. ಭಾರತದಂತಹ ದೊಡ್ಡ ದೇಶದಲ್ಲಿ ಕೊನೆಯ ಸಾಲಿನವರೆಗೆ ನ್ಯಾಯದಾನ ತಲುಪಿಸುವುದು ಸವಾಲಾಗಿ ಉಳಿದಿದೆ. ತ್ವರಿತ ಮತ್ತು  ಕೈಗೆಟಕುವ ದರದಲ್ಲಿ ಜನಸಾಮಾನ್ಯರಿಗೆ ನ್ಯಾಯ ದೊರೆಯಬೇಕು.

  • ಸ್ಥಳೀಯ ಉಪಭಾಷೆಗಳಲ್ಲಿ ಕಾನೂನು ಸಾಕ್ಷರತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ನ್ಯಾಯಾಂಗ ಇಲಾಖೆ 'ಪ್ರಾದೇಶಿಕ ಮತ್ತು ಸ್ಥಳೀಯ' ಸಾಧನಗಳನ್ನು ಕೇಂದ್ರೀಕರಿಸಿ ಅಖಿಲ ಭಾರತ 'ನ್ಯಾಯದಾನದ ಲಭ್ಯತೆ' ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ.

ನ್ಯಾಯಾಂಗದೊಂದಿಗಿನ ಸಂಬಂಧ ಕುರಿತು

ಕೊಲಿಜಿಯಂ ವ್ಯವಸ್ಥೆ ಮತ್ತು ನ್ಯಾಯಾಂಗದೊಳಗಿನ ರಾಜಕೀಯದ ಬಗ್ಗೆ ಈ ಹಿಂದೆ ಮಾತನಾಡಿದ್ದ ಅವರು, ಇಂದು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಸೌಹಾರ್ದ ಸಂಬಂಧವಿದೆ ಎಂದರು.

“ಭಾರತೀಯ ನ್ಯಾಯಾಂಗದೊಂದಿಗೆ ನಿಕಟ ಸೌಹಾರ್ದ ಸಂಬಂಧ ಬೆಳೆಸಲು ನಾವು ಒಂದು ತಂಡವಾಗಿ ಕೆಲಸ ಮಾಡುತ್ತೇವೆ. ಸುಪ್ರೀಂ ಕೋರ್ಟ್‌ನ ಹಿಂದಿನ ಮುಖ್ಯ ನ್ಯಾಯಮೂರ್ತಿಗಳು ಮತ್ತು ಪ್ರಸ್ತುತ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ನಮಗೆ ತುಂಬಾ ಸೌಹಾರ್ದಯುತ ಸಂಬಂಧ ಇದ್ದು ನಾವು ಒಟ್ಟಿಗೆ ಬಗೆಹರಿಸಬೇಕಾದ ಸಮಸ್ಯೆಗಳನ್ನು ಗುರುತಿಸಿದ್ದೇವೆ” ಎಂದು ಹೇಳಿದರು.

Related Stories

No stories found.
Kannada Bar & Bench
kannada.barandbench.com