ಬಿಕ್ಲು ಶಿವ ಕೊಲೆಯಲ್ಲಿ ಪೊಲೀಸ್‌ ಅಧಿಕಾರಿಗಳ ಪಾತ್ರವಿದೆ: ಹೈಕೋರ್ಟ್‌ನಲ್ಲಿ ಸರ್ಕಾರದ ಆಪಾದನೆ

“ಬಿಕ್ಲು ಶಿವ ತಾಯಿ ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯನ್ನು ಬೈರತಿ ಬಸವರಾಜು ಆಧರಿಸುತ್ತಿದ್ದಾರೆ. ಸಂತ್ರಸ್ತೆಯನ್ನು ಹೇಗೆ ಹೇಳಿಕೆ ನೀಡುವಂತೆ ಮಾಡಲಾಗಿದೆ ಎಂಬುದನ್ನು ತೋರಿಸುತ್ತೇನೆ” ಎಂದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌.
Byrati Basavaraj & HC
Byrati Basavaraj & HC
Published on

“ರೌಡಿ ಶೀಟರ್‌ ಬಿಕ್ಲು ಶಿವ ಅಲಿಯಾಸ್‌ ಶಿವಕುಮಾರ್‌ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರ ಪಾತ್ರ ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ನಮ್ಮದೇ ಸ್ಥಳೀಯ ಪೊಲೀಸ್‌ ಅಧಿಕಾರಿಗಳ ಪಾತ್ರವಿದೆ. ಇದೊಂದು ಸಂಘಟಿತ ಅಪರಾಧವಾಗಿದೆ” ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಬುಧವಾರ ತಿಳಿಸಿದೆ.

ಕೊಲೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬೈರತಿ ಬಸವರಾಜು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಸಿಐಡಿ ಪರ ವಾದ ವಿಸ್ತರಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಹತ್ಯೆಗೂ ಮುನ್ನ ಕೊಲೆ ಬೆದರಿಕೆ ಮತ್ತು ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಭಾರತೀನಗರ ಠಾಣೆಗೆ ಬಿಕ್ಲು ಶಿವ ದೂರು ನೀಡಿದ್ದರು. ಕೊಲೆ ಯತ್ನಕ್ಕೆ ಭಾರತಿ ಎಂಬವರ ಬೈಕ್‌ ಬಳಕೆ ಮಾಡಲಾಗಿತ್ತು. ಇದಕ್ಕೆ ಬೈರತಿ ಬಸವರಾಜು ಅವರ ಬೆಂಬಲಿಗ ಎನ್ನಲಾದ ಜಗದೀಶ್‌ ಅಲಿಯಾಸ್‌ ಜಗ್ಗ ಚಿತಾವಣೆ ನೀಡಿದ್ದಾನೆ ಎಂದು ಬಿಕ್ಲು ಶಿವ ಶಂಕಿಸಿದ್ದರು. ಆದರೆ, ಪೊಲೀಸರು ಆರೋಪಿಗಳನ್ನು ಕರೆದು ತಿಳಿವಳಿಕೆ ಹೇಳಿರುವುದಾಗಿ ಹೇಳಿ ಎನ್‌ಸಿಆರ್‌ಗೆ ಮುಕ್ತಾಯ ಹಾಡಿದ್ದರು. ಆದರೆ, 15.7.2025ರಂದು ಬಿಕ್ಲು ಶಿವನ ಕೊಲೆಯಾಗಿತ್ತು. ಶಿವನ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿದ ಬಳಿಕ ಸ್ಥಳೀಯ ಪೊಲೀಸರು ತಾವು ಸಿಲುಕುವ ಆತಂಕದಿಂದ ಕೊಲೆ ಯತ್ನಕ್ಕೆ ಬಳಕೆ ಮಾಡಿದ್ದ ಭಾರತಿ ಅವರ ಬೈಕ್‌ ಬಳಸುತ್ತಿದ್ದ ಅವರ ಸಹೋದರ ಅಭಿಷೇಕ್‌ ಗೌಡನ ಹೇಳಿಕೆಯನ್ನು ದಾಖಲೆಯ ಭಾಗವಾಗಿಸಿದ್ದಾರೆ. ವಾಸ್ತವದಲ್ಲಿ ಅಭಿಷೇಕ್‌ ಮತ್ತು ಜಗದೀಶ್‌ನನ್ನು ಪೊಲೀಸರು ಠಾಣೆಗೆ ಕರೆಸಿ ಬುದ್ದಿ ಹೇಳಿರಲಿಲ್ಲ. ಇಲ್ಲಿ ಬೈರತಿ ಬಸವರಾಜು ಅವರ ಪಾತ್ರ ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ನಮ್ಮ ಅಧಿಕಾರಿಗಳ ಪಾತ್ರ ಇರುವುದು ಸ್ಪಷ್ಟವಾಗಿದೆ” ಎಂದು ವಿವರಿಸಿದರು.

“ಈ ಹಿನ್ನೆಲೆಯಲ್ಲಿ ಕೆಲವು ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಅಧಿಕಾರಿಗಳ ಪಾತ್ರ ಬಯಲು ಮಾಡಲು ಬೈರತಿ ಬಸವರಾಜು ಅವರನ್ನು ಕಸ್ಟಡಿಗೆ ಪಡೆದು ತನಿಖೆ ನಡೆಸಬೇಕಿದೆ. ನಾವು ಸಾಮಾನ್ಯ ವ್ಯಕ್ತಿಯ ಜೊತೆ ವ್ಯವಹರಿಸುತ್ತಿಲ್ಲ. ಶಾಸಕ, ಆರ್ಥಿಕ, ರಾಜಕೀಯವಾಗಿ ಪ್ರಬಲವಾಗಿರುವ ವ್ಯಕ್ತಿಯ ಜೊತೆ ವ್ಯವಹರಿಸುತ್ತಿದ್ದೇವೆ. ಇದೆಲ್ಲವನ್ನೂ ಮರೆಮಾಚಿ ರಾಜಕೀಯ ದುರುದ್ದೇಶದಿಂದ ಬೈರತಿ ಬಸವರಾಜು ಅವರನ್ನು ಬಂಧಿಸಲು ಪ್ರಾಸಿಕ್ಯೂಷನ್‌ ಯತ್ನಿಸುತ್ತಿದೆ ಎಂದು ಹೇಳುವುದು ಶುದ್ಧ ಅಪಪ್ರಚಾರ” ಎಂದರು.

Also Read
ಬಿಕ್ಲು ಶಿವು ಹತ್ಯೆ ಪ್ರಕರಣ: ಶಾಸಕ ಬೈರತಿ ಬಸವರಾಜ್‌ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ವಿಶೇಷ ನ್ಯಾಯಾಲಯ

“ಸಂತ್ರಸ್ತೆ (ಬಿಕ್ಲು ಶಿವ ತಾಯಿ) ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯನ್ನು ಬೈರತಿ ಬಸವರಾಜು ಆಧರಿಸುತ್ತಿದ್ದಾರೆ. ಸಂತ್ರಸ್ತೆಯನ್ನು ಹೇಗೆ ಹೇಳಿಕೆ ನೀಡುವಂತೆ ಮಾಡಲಾಗಿದೆ ಎಂಬುದನ್ನು ತೋರಿಸುತ್ತೇನೆ. ಬಂಧಿಸಿಲ್ಲ, ತನಿಖೆಯಾಗಿಲ್ಲ. ಆರೋಪ ಪಟ್ಟಿ ಹಾಕಿಲ್ಲ. ಈ ಹಂತದಲ್ಲ ಸಾಕ್ಷಿಯನ್ನು ಪ್ರಭಾವಿಸುವಾಗ ನಾವು ಏನನ್ನೂ ನಿರೀಕ್ಷಿಸಲಾಗುತ್ತದೆ” ಎಂದು ಹೇಳಿದರು.

“ನಮ್ಮ ಪೊಲೀಸರು ಭಾಗಿಯಾಗಿದ್ದು, ನಮಗೆ ಸಂಪೂರ್ಣ ಮಾಹಿತಿ ಬೇಕಿದೆ. ಇದಕ್ಕಾಗಿ ಬೈರತಿ ಬಸವರಾಜು ಅವರನ್ನು ಕಸ್ಟಡಿಗೆ ಪಡೆದು ತನಿಖೆ ನಡೆಸಬೇಕಿದೆ. ಇದರಲ್ಲಿ ಸಂಘಟಿತ ಅಪರಾಧ ಮತ್ತು ಕೊಲೆ ನಡೆದಿದೆ” ಎಂದು ಪ್ರತಿಪಾದಿಸಿದರು.

Kannada Bar & Bench
kannada.barandbench.com