ಲೋಕ ಅದಾಲತ್:‌ 1.11 ಕೋಟಿ ಪ್ರಕರಣ ಇತ್ಯರ್ಥ; ₹3,997 ಕೋಟಿ ಪರಿಹಾರ ಪಾವತಿ

ಲೋಕ ಅದಾಲತ್‌ಗಾಗಿ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ, ಧಾರವಾಡ, ಕಲಬುರ್ಗಿಯ ಪೀಠಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳೂ ಸೇರಿ ಒಟ್ಟು 989 ಪೀಠಗಳನ್ನು ಸ್ಥಾಪಿಸಲಾಗಿತ್ತು.
ಲೋಕ ಅದಾಲತ್:‌ 1.11 ಕೋಟಿ ಪ್ರಕರಣ ಇತ್ಯರ್ಥ; ₹3,997 ಕೋಟಿ ಪರಿಹಾರ ಪಾವತಿ
Published on

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆ‌ಎಸ್‌ಎಲ್‌ಎಸ್‌ಎ) ವತಿಯಿಂದ ರಾಜ್ಯದಾದ್ಯಂತ ಸೆಪ್ಟೆಂಬರ್ 13ರಂದು ಆಯೋಜಿಸಲಾಗಿದ್ದ ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳೂ ಸೇರಿ ದಾಖಲೆಯ 1,11,05,960 ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದ್ದು, ಸಂಬಂಧಪಟ್ಟವರಿಗೆ ₹3,997 ಕೋಟಿ ಪರಿಹಾರ ಕೊಡಿಸಲಾಗಿದೆ.

ಹೈಕೋರ್ಟ್‌ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕೆಎಸ್‌ಎಲ್‌ಎಸ್‌ಎ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್‌ ಅವರು ಅದಾಲತ್‌ನಲ್ಲಿ ರಾಜಿಯಾದ ಪ್ರಕರಣಗಳು ಹಾಗೂ ಪರಿಹಾರದ ಅಂಕಿ-ಅಂಶಗಳ ಕುರಿತು ಮಾಹಿತಿ ನೀಡಿದರು.

ಲೋಕ ಅದಾಲತ್‌ಗಾಗಿ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ, ಧಾರವಾಡ, ಕಲಬುರ್ಗಿಯ ಪೀಠಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳೂ ಸೇರಿ ಒಟ್ಟು 989 ಪೀಠಗಳನ್ನು ಸ್ಥಾಪಿಸಲಾಗಿತ್ತು. ಹೈಕೋರ್ಟ್‌ನ ಮೂರೂ ಪೀಠಗಳಲ್ಲಿ ಬಾಕಿ ಇದ್ದ ಒಟ್ಟು 1,042 ಪ್ರಕರಣಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿದ್ದ 2,41,251 ಪ್ರಕರಣಗಳು ಸೇರಿ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಒಟ್ಟು 2,42,293 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇದಲ್ಲದೆ, 1,08,63,667 ವ್ಯಾಜ್ಯಪೂರ್ವ ಪ್ರಕರಣಗಳನ್ನೂ ಅದಾಲತ್‌ನಲ್ಲಿ ವಿಲೇವಾರಿ ಮಾಡಲಾಗಿದ್ದು, ಒಟ್ಟಾರೆ 1,11,05,960 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ನ್ಯಾಯಮೂರ್ತಿ ಅನು ಶಿವರಾಮನ್‌ ತಿಳಿಸಿದರು.

ಪ್ರಾಧಿಕಾರದ ಐತಿಹಾಸಿಕ ಸಾಧನೆ: ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳನ್ನೂ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನಕ್ಕೆ ನಿಗದಿಪಡಿಸಲಾಗಿತ್ತು. ಅದರಂತೆ, 53,11,589 ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳಾಗಿ ವಿಲೇವಾರಿ ಮಾಡಲಾಗಿದ್ದು, ₹144 ಕೋಟಿಗೂ ಅಧಿಕ ಮೊತ್ತದ ದಂಡ ಸಂಗ್ರಹಿಸಲಾಗಿದೆ. ಈ ರೀತಿಯ ಟ್ರಾಫಿಕ್ ಚಲನ್ ಪ್ರಕರಣಗಳ ಇತ್ಯರ್ಥವು ಪ್ರಾಧಿಕಾರದ ಐತಿಹಾಸಿಕ ಸಾಧನೆಯಾಗಿದೆ. ಇದರಿಂದ, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ದಾಖಲೆ ಮೊತ್ತದ ಆದಾಯ ಸಂದಾಯವಾಗುವ ಜತೆಗೆ, ಸಾರ್ವಜನಿಕರಲ್ಲಿ ಸಂಚಾರ ಜಾಗೃತಿಯನ್ನೂ ಸೃಷ್ಟಿಸಿದೆ ಎಂದು ನ್ಯಾಯಮೂರ್ತಿಗಳು ಅನು ಶಿವರಾಮನ್ ಹರ್ಷ ವ್ಯಕ್ತಪಡಿಸಿದರು.

ಅದಾಲತ್ ಮುಖ್ಯಾಂಶಗಳು

  • ರಾಜ್ಯದಾದ್ಯಂತ ಒಟ್ಟು 1,446 ವೈವಾಹಿಕ ಪ್ರಕರಣಗಳ ಇತ್ಯರ್ಥ ಒಟ್ಟು 304 ದಂಪತಿ ರಾಜಿ ಸಂಧಾನದ ಮೂಲಕ ಒಂದಾಗಿ, ಸಹಜೀವನ ನಡೆಸಲು ನಿರ್ಧಾರ.

  •  2,876 ಆಸ್ತಿ ವಿಭಾಗ ದಾವೆ ಇತ್ಯರ್ಥ; 3,708 ಮೋಟಾರು ವಾಹನ ಅಪಘಾತ ಪರಿಹಾರ (ಎಂವಿಸಿ) ಪ್ರಕರಣಗಳು ₹265 ಕೋಟಿ ಪರಿಹಾರ ಮೊತ್ತಕ್ಕೆ ಇತ್ಯರ್ಥ

  •  1,148 ಎಂವಿಸಿ. ಅಮಲ್ಜಾರಿ ಪ್ರಕರಣಗಳು 70 ಕೋಟಿ ರೂ. ಪರಿಹಾರ ಮೊತ್ತಕ್ಕೆ ಇತ್ಯರ್ಥ; 10,273 ಚೆಕ್‌ ಬೌನ್ಸ್‌ ಪ್ರಕರಣಗಳ ವಿಲೇವಾರಿ, ₹1,863 ಕೋಟಿ ಪರಿಹಾರ.

  •  355 ಭೂಸ್ವಾಧೀನ (ಎಲ್‌ಎಸಿ) ಅಮಲ್ಜಾರಿ ಪ್ರಕರಣಗಳ ವಿಲೇವಾರಿ, ₹275 ಕೋಟಿ ಪರಿಹಾರ; 2,864 ಇತರ ಅಮಲ್ಜಾರಿ ಪ್ರಕರಣಗಳು ₹128 ಕೋಟಿ ಪರಿಹಾರ ಮೊತ್ತಕ್ಕೆ ಇತ್ಯರ್ಥ.

  •  21 ರೇರಾ ಪ್ರಕರಣಗಳು ₹2.63 ಕೋಟಿ ಪರಿಹಾರ ಮೊತ್ತಕ್ಕೆ ವಿಲೇವಾರಿ

  •  ಸಾಲ ವಸೂಲಾತಿ ನ್ಯಾಯ ಮಂಡಳಿಯ ಒಟ್ಟು 23 ಪ್ರಕರಣಗಳು ₹14 ಕೋಟಿ ಪರಿಹಾರ ಮೊತ್ತಕ್ಕೆ ಇತ್ಯರ್ಥ; 185 ಗ್ರಾಹಕ ವ್ಯಾಜ್ಯ ಪ್ರಕರಗಳು ₹4 ಕೋಟಿ ಪರಿಹಾರ ಮೊತ್ತಕ್ಕೆ ಇತ್ಯರ್ಥ

ವಿಶೇಷ ಪ್ರಕರಣಗಳು

  • 5 ವರ್ಷಕ್ಕೂ ಹಳೆಯ 1,460 ಪ್ರಕರಣಗಳು, 10 ವರ್ಷಕ್ಕೂ ಹಳೆಯ 198 ಹಾಗೂ 15 ವರ್ಷಕ್ಕೂ ಹಳೆಯ 22 ಪ್ರಕರಣಗಳೂ ಸೇರಿ ಒಟ್ಟು 1,680 ಹಳೆಯ ಪ್ರಕರಣಗಳ ಇತ್ಯರ್ಥ.

  • ಹಿರಿಯ ನಾಗರಿಕರಿಗೆ ಸಂಬಂಧಿಸಿದ 1,499 ಪ್ರಕರಣಗಳ ವಿಲೇವಾರಿ.

  • ನ್ಯಾಯಮೂರ್ತಿ ಅನು ಶಿವರಾಮನ್ ಅವರ ಹೈಕೋರ್ಟ್‌ನ ಲೋಕ ಅದಾಲತ್ ಪೀಠದಲ್ಲಿ ಎಂಎಫ್‌ಎ (ಅಪಘಾತದಿಂದ ಸಾವು ಸಂಭವಿಸಿದ್ದ) ಪ್ರಕರಣವೊಂದು ₹1 ಕೋಟಿ ₹5 ಲಕ್ಷ ಪರಿಹಾರ ಮೊತ್ತಕ್ಕೆ ಇತ್ಯರ್ಥ.

  • ಬೆಳಗಾವಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಪೀಠದಲ್ಲಿದ್ದ ಭೂಸ್ವಾಧೀನ ಪ್ರಕರಣ ₹57,57,82,023ಗಳಿಗೆ ವಿಲೇವಾರಿ.

  • ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿನ ನ್ಯಾಯಾಲಯದಿಂದ ಕರ್ನಾಟಕದ ಕೊಡಗು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದ ಮಹಿಳೆಯೊಬ್ಬರ ವೈವಾಹಿಕ ಪ್ರಕರಣ ಇತ್ಯರ್ಥ. ಪರಸ್ಪರ ಒಪ್ಪಿಗೆಯ ಮೇರೆಗೆ ದಂಪತಿ ಒಟ್ಟಾಗಿ ಬಾಳಲು ನಿರ್ಧಾರ.

  • ಶಿವಮೊಗ್ಗ ಜಿಲ್ಲೆಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರ ಮುಂದೆ ಇದ್ದ ಅಮಲ್ಜಾರಿ ಪ್ರಕರಣ ₹5,90,11,509 ಮೊತ್ತಕ್ಕೆ ಇತ್ಯರ್ಥ.

ಡಿಸೆಂಬರ್ 13ರಂದು 4ನೇ ಅದಾಲತ್: 2025ನೇ ಸಾಲಿನ ನಾಲ್ಕನೇ ರಾಷ್ಟ್ರೀಯ ಲೋಕ ಅದಾಲತ್ ಡಿಸೆಂಬರ್ 13ರಂದು ನಡೆಯಲಿದೆ. ಸಾರ್ವಜನಿಕರು ಹಾಗೂ ಕಕ್ಷಿದಾರರು ಅದಾಲತ್‌ನಲ್ಲಿ ಪಾಲ್ಗೊಂಡು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವ ಮೂಲಕ ತಮ್ಮ ಹಣ ಹಾಗೂ ಸಮಯ ಉಳಿತಾಯ ಮಾಡಿಕೊಳ್ಳಬಹುದು ಎಂದು ನ್ಯಾಯಮೂರ್ತಿ ಅನು ಶಿವರಾಮನ್ ತಿಳಿಸಿದರು. ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಎಸ್ ಜಿ ಪಂಡಿತ್, ಕೆ‌ಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ ಉಪಸ್ಥಿತರಿದ್ದರು.

Kannada Bar & Bench
kannada.barandbench.com