[ಲೋಕ ಅದಾಲತ್‌] 40 ಲಕ್ಷ ಪ್ರಕರಣ ಇತ್ಯರ್ಥ; 2,640 ಕೋಟಿ ಪರಿಹಾರ ಪಾವತಿ

ಕೆಎಸ್‌ಎಲ್‌ಎಸ್‌ಎ ಕೋರಿಕೆಯ ಮೇರೆಗೆ ರಾಜ್ಯ ಸರ್ಕಾರವು ಆಸ್ತಿ ತೆರಿಗೆ ಪಾವತಿಗೆ ವಿನಾಯಿತಿ ನೀಡಿ ಕಾಲಾವಧಿ ವಿಸ್ತರಣೆ ಮಾಡಿದ್ದರಿಂದ 9,00,935 ಪ್ರಕರಣಗಳು ಇತ್ಯರ್ಥವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 694 ಕೋಟಿ ಹರಿದು ಬಂದಿದೆ.
KSLSA Executive Chairman Justice V Kameshwara Rao and HCLSA Chairman Justice Sreenivas Harish Kumar
KSLSA Executive Chairman Justice V Kameshwara Rao and HCLSA Chairman Justice Sreenivas Harish Kumar
Published on

ಪ್ರಸಕ್ತ ಸಾಲಿನ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜ್ಯದಲ್ಲಿ 40,03,411 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಮತ್ತು ಒಟ್ಟಾರೆ 2,640 ಕೋಟಿ ಮೊತ್ತವನ್ನು ಪರಿಹಾರದ ರೂಪದಲ್ಲಿ ಕೊಡಿಸುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷರೂ ಆದ ಹಿರಿಯ ನ್ಯಾಯಮೂರ್ತಿ ವಿ ಕಾಮೇಶ್ವರ್‌ ರಾವ್‌ ಸೋಮವಾರ ತಿಳಿಸಿದರು.

ರಾಜ್ಯದಾದ್ಯಂತ ಜುಲೈ 13ರಂದು ನಡೆದಿರುವ ಲೋಕ ಅದಾಲತ್‌ನ ಮಾಹಿತಿ ನೀಡಲು ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ನ್ಯಾ. ಕಾಮೇಶ್ವರ್‌ ರಾವ್‌ ಮತ್ತು ಹೈಕೋರ್ಟ್‌ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್‌ ಹರೀಶ್‌ಕುಮಾರ್‌ ಅವರು ಭಾಗವಹಿಸಿದ್ದರು.

ಹೈಕೋರ್ಟ್‌ ಮತ್ತು ವಿಚಾರಣಾಧೀನ ನ್ಯಾಯಾಲಯದಲ್ಲಿನ ಬಾಕಿ ಇರುವ 2,64,675 ಪ್ರಕರಣ ಮತ್ತು ವಿಚಾರಣಾಧೀನ ನ್ಯಾಯಾಲಯಗಳಲ್ಲಿನ 37,38,766 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಹೈಕೋರ್ಟ್‌ನ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ಕ್ರಮವಾಗಿ ಬಾಕಿ ಇದ್ದ 701, 434 ಮತ್ತು 520 ಪ್ರಕರಣಗಳು ಸೇರಿ 1,655 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

1,033 ಪೀಠಗಳ ರಚನೆ: ಹೈಕೋರ್ಟ್‌ನ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ಕ್ರಮವಾಗಿ 9, 5 ಮತ್ತು 3 ಪೀಠಗಳನ್ನು ಒಳಗೊಂಡು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ 1,016 ಪೀಠ ಸೇರಿ ಒಟ್ಟಾರೆ 1,033 ಪೀಠಗಳನ್ನು ರಚಿಸಲಾಗಿತ್ತು.

ಆಸ್ತಿ ತೆರಿಗೆ 694 ಕೋಟಿ ಸಂಗ್ರಹ: ಕೆಎಸ್‌ಎಲ್‌ಎಸ್‌ಎ ಕೋರಿಕೆಯ ಮೇರೆಗೆ ರಾಜ್ಯ ಸರ್ಕಾರವು ಆಸ್ತಿ ತೆರಿಗೆ ಪಾವತಿಗೆ ವಿನಾಯಿತಿ ನೀಡಿ ಕಾಲಾವಧಿ ವಿಸ್ತರಣೆ ಮಾಡಿದ್ದರಿಂದ 9,00,935 ಪ್ರಕರಣಗಳು ಇತ್ಯರ್ಥವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 694 ಕೋಟಿ ಹರಿದು ಬಂದಿದೆ.

ಲೋಕ ಅದಾಲತ್‌ನ ಪ್ರಮುಖಾಂಶಗಳು

  • ಪ್ರಸಕ್ತ ಲೋಕ ಅದಾಲತ್‌ನಲ್ಲಿ 1,550 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಸುಮಾರು 259 ದಂಪತಿ ಮತ್ತೆ ಒಂದಾಗುವ ಮೂಲಕ ವ್ಯಾಜ್ಯಕ್ಕೆ ತೆರೆ ಎಳೆದಿದ್ದಾರೆ.

  • 3,356 ಆಸ್ತಿ ವಿಭಾಗ ದಾವೆಗಳು; 5,220 ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣ ಬಗೆಹರಿಸಲಾಗಿದ್ದು, 260 ಕೋಟಿ ಪರಿಹಾರ ಕೊಡಿಸಲಾಗಿದೆ. ಇನ್ನು 11,155 ಚೆಕ್‌ ಬೌನ್ಸ್‌ ಪ್ರಕರಣಗಳಿಗೆ ಪರಿಹಾರ ಸೂಚಿಸಲಾಗಿದೆ.

  • 261 ಭೂಸ್ವಾಧೀನ ಆದೇಶಗಳ ಜಾರಿ ಪ್ರಕರಣಗಳಲ್ಲಿ 101 ಕೋಟಿ ಪರಿಹಾರ ಕೊಡಿಸುವುದರೊಂದಿಗೆ ಸುಖಾಂತ್ಯ ಕಂಡಿವೆ. 61 ಕೋಟಿ ಪರಿಹಾರ ಪಾವತಿ ಮಾಡುವಂತೆ ಮಾಡುವುದರೊಂದಿಗೆ 897 ಮೋಟಾರು ವಾಹನಗಳಿಗೆ ಸಂಬಂಧಿಸಿದ ಪರಿಹಾರ ಆದೇಶ ಜಾರಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇತರೆ 3,769 ಆದೇಶ ಜಾರಿ ಪ್ರಕರಣಗಳು ಇತ್ಯರ್ಥಗೊಂಡಿದ್ದು, 118 ಕೋಟಿ ಪರಿಹಾರ ಕೊಡಿಸಲಾಗಿದೆ.

  • ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದಲ್ಲಿನ 15 ಪ್ರಕರಣಗಳು ಇತ್ಯರ್ಥಪಡಿಸಲಾಗಿದ್ದು, 1.22 ಕೋಟಿಯನ್ನು ಇತ್ಯರ್ಥದ ಭಾಗವಾಗಿ ಕೊಡಿಸಲಾಗಿದೆ.

Kannada Bar & Bench
kannada.barandbench.com