[ಲೋಕ ಅದಾಲತ್‌] ಉಭಯ ಪಕ್ಷಕಾರರ ಅನುಪಸ್ಥಿತಿಯಲ್ಲಿ ತೀರ್ಪು ಅಂಗೀಕೃತವಾಗಿದ್ದರೆ ಕಾನೂನುಬದ್ಧ ಎನ್ನಲಾಗದು: ಹೈಕೋರ್ಟ್‌

“ಉಭಯ ಪಕ್ಷಗಾರರು ಜಂಟಿ ಮೆಮೊಗೆ ಸಹಿ ಹಾಕಿ ಇತ್ಯರ್ಥಗೊಳಿಸಿದ ಮತ್ತು ಇಂತಹ ಪ್ರಕರಣವನ್ನು ಜಂಟಿ ಮೆಮೊ ಸಲ್ಲಿಕೆಯ ಮೂಲಕವೇ ಅದಾಲತ್‌ ಅಂಗೀಕರಿಸಿದ್ದರೆ ಮಾತ್ರ ಲೋಕ ಅದಾಲತ್‌ ತೀರ್ಪು ಕಾರ್ಯಗತಗೊಳ್ಳುತ್ತದೆ” ಎಂದು ನ್ಯಾಯಾಲಯ ಹೇಳಿದೆ.
Lok adalat
Lok adalat
Published on

“ಲೋಕ ಅದಾಲತ್‌ ತೀರ್ಪು ಪ್ರಶ್ನಾತೀತವಲ್ಲ” ಎಂದು ಪ್ರಕರಣವೊಂದರಲ್ಲಿ ವ್ಯಾಖ್ಯಾನಿಸಿರುವ ಕರ್ನಾಟಕ ಹೈಕೋರ್ಟ್‌, “ಲೋಕ ಅದಾಲತ್‌ನಲ್ಲಿ ಉಭಯ ಪಕ್ಷಗಾರರ ಅನುಪಸ್ಥಿತಿಯಲ್ಲಿ ತೀರ್ಪು ಅಂಗೀಕೃತವಾಗಿದ್ದರೆ ಅಂತಹ ತೀರ್ಪು ಎಲ್ಲ ಕಾಲಕ್ಕೂ ಕಾನೂನುಬದ್ಧವಾಗಿದೆ ಮತ್ತು ಸರಿಯಾಗಿದೆ ಎಂದು ಹೇಳಲಾಗದು” ಎಂದು ಸ್ಪಷ್ಟಪಡಿಸಿದೆ.

ಮೋಟಾರು ವಾಹನ ಅಪಘಾತ ಪ್ರಕರಣವೊಂದರಲ್ಲಿ ಲೋಕ ಅದಾಲತ್‌ ತೀರ್ಪು ಪ್ರಶ್ನಿಸಿ ಹುಬ್ಬಳ್ಳಿ ಆನಂದನಗರದ ಬಡ ಕುಟುಂಬದ ತಾಯಿ–ಮಗ, ಶೈಲಾ ಐ ಕರ್ಕಿಹಳ್ಳಿಮಠ ಮತ್ತು ವಿಶಾಲ್‌ ಐ ಕರ್ಕಿಹಳ್ಳಿಮಠ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ಉಭಯ ಪಕ್ಷಗಾರರು ಜಂಟಿ ಮೆಮೊಗೆ ಸಹಿ ಹಾಕಿ ಇತ್ಯರ್ಥಗೊಳಿಸಿದ ಮತ್ತು ಇಂತಹ ಪ್ರಕರಣವನ್ನು ಜಂಟಿ ಮೆಮೊ ಸಲ್ಲಿಕೆಯ ಮೂಲಕವೇ ಅದಾಲತ್‌ ಅಂಗೀಕರಿಸಿದ್ದರೆ ಮಾತ್ರ ಲೋಕ ಅದಾಲತ್‌ ತೀರ್ಪು ಕಾರ್ಯಗತಗೊಳ್ಳುತ್ತದೆ” ಎಂದು ನ್ಯಾಯಾಲಯ ಹೇಳಿದೆ.

“ಲೋಕ ಅದಾಲತ್‌ನಲ್ಲಿ ಉಭಯ ಪಕ್ಷಗಾರರು ಒಪ್ಪಂದದ ನಿಯಮಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆ ಮತ್ತು ಅದಾಲತ್‌ನ ಹೊರಗೆ ಮಾಡಿಕೊಂಡ ಯಾವುದೇ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂಬುದನ್ನು ಲೋಕ ಅದಾಲತ್‌ ಸದಸ್ಯರು ಖಚಿತಪಡಿಸಿಕೊಳ್ಳಬೇಕು” ಎಂದು ನ್ಯಾಯಾಲಯ ಎಚ್ಚರಿಸಿದೆ.

“ಲೋಕ ಅದಾಲತ್‌ನಲ್ಲಿ ನಮಗೆ ನೀಡಲಾಗಿದ್ದ ಪರಿಹಾರದ ಮೊತ್ತವನ್ನು ಕಡಿಮೆ ಮಾಡಿರುವುದು ತಪ್ಪಾಗಿದೆ. ನಮ್ಮ ಪರವಾದ ಹಿಂದಿನ ವಕೀಲರು ಮತ್ತು ವಿಮಾ ಕಂಪನಿಯ ನಡುವೆ ಇತ್ಯರ್ಥ ಮಾಡಿಕೊಳ್ಳಲಾಗಿದೆ” ಎಂಬುದು ನಮಗೆ ಯಾವತ್ತೂ ಗಮನಕ್ಕೆ ಬಂದೇ ಇರಲಿಲ್ಲ. ಮೃತರು ನಮ್ಮ ಕುಟುಂಬದ ಏಕೈಕ ಆದಾಯ ಗಳಿಕೆಯ ಮೂಲಾಧಾರವಾಗಿದ್ದರು. ನಮಗೆ ಬೇರೆ ಯಾವುದೇ ಆದಾಯದ ಮೂಲ ಇರಲಿಲ್ಲ. ಆದ್ದರಿಂದ, ಲೋಕ ಅದಾಲತ್‌ನಲ್ಲಿ ಪರಿಹಾರದ ಮೊತ್ತವನ್ನು ಕಡಿಮೆ ಮಾಡಿ ಆದೇಶಿಸಿರುವುದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ಅರ್ಜಿದಾರರ ವಾದವನ್ನು ಪೀಠ ಮಾನ್ಯ ಮಾಡಿದೆ.

“ಅರ್ಜಿ ದಾಖಲಿಸಿದ ದಿನದಿಂದ ಅರ್ಜಿದಾರರಿಗೆ ಪಾವತಿಯಾಗುವ ದಿನದವರೆಗೆ ವಾರ್ಷಿಕ ಶೇ 6ರ ಬಡ್ಡಿಯಂತೆ ₹9,18,600 ಪರಿಹಾರ ನೀಡಬೇಕು” ಎಂಬ ನ್ಯಾಯಮಂಡಳಿ ಆದೇಶವನ್ನು ಎತ್ತಿಹಿಡಿದಿದೆ.

“ಅರ್ಜಿದಾರರ ಮನವಿಯನ್ನು ಮನ್ನಿಸಿದರೆ ಪಂಡೋರಾ ಪಟ್ಟಿಗೆಯ ಬಾಯಿ ತೆಗೆದಂತಾಗುತ್ತದೆ. ಅನಿರೀಕ್ಷಿತ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗುತ್ತದೆ” ಎಂದು ಪ್ರತಿವಾದಿ ಇನ್ಶೂರೆನ್ಸ್ ಕಂಪನಿ ವಾದವನ್ನು ತಳ್ಳಿ ಹಾಕಿರುವ ನ್ಯಾಯಾಲಯವು “ಅರ್ಜಿದಾರರು ಜಂಟಿ ಮೆಮೊಗೆ ಸಹಿ ಹಾಕಿಲ್ಲ ಎಂಬುದು ಗಮನಾರ್ಹ ಅಂಶ” ಎಂದು ಯೋಗ್ಯತೆಯ ಆಧಾರದಡಿ ಅರ್ಜಿಯನ್ನು ಪರಿಗಣಿಸಿದೆ.

ಪ್ರಕರಣದ ಹಿನ್ನೆಲೆ: ಬಾಣಸಿಗನಾಗಿ ತಿಂಗಳಿಗೆ ₹6 ಸಾವಿರ ಪಗಾರಕ್ಕೆ ಕೆಲಸ ಮಾಡುತ್ತಿದ್ದ ಅರ್ಜಿದಾರ ಶೈಲಾ ಐ ಕರ್ಕಿಹಳ್ಳಿಮಠ ಅವರ 41 ವರ್ಷದ ಪತಿ 2012ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.

ಪರಿಹಾರ ಕೋರಿಕೆಗಾಗಿ ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು, ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (ಎಂಎಸಿಟಿ) ಪುರಸ್ಕರಿಸಿ ಪರಿಹಾರ ನೀಡಿಕೆಗಾಗಿ  2013 ನವೆಂಬರ್ 13ರಂದು ಆದೇಶಿಸಿತ್ತು.

ಈ ಪರಿಹಾರ ನೀಡಿಕೆ ಮೊತ್ತವನ್ನು ಪ್ರಶ್ನಿಸಿದ್ದ ಐಸಿಐಸಿಐ ಇನ್ಶೂರೆನ್ಸ್‌ ಕಂಪನಿ 2014ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಈ ವೇಳೆ ಪ್ರಕರಣವನ್ನು ಲೋಕ ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳಲು ಶಿಫಾರಸು ಮಾಡಲಾಗಿತ್ತು. ಧಾರವಾಡ ಪೀಠದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ, ಹೈಕೋರ್ಟ್‌ ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿಯು ಪರಿಹಾರದ ಮೊತ್ತ ₹9,18,600ರಲ್ಲಿ ₹1,36,600 ಕಡಿಮೆ ಮಾಡಿ ಅಂತಿಮವಾಗಿ ₹7,82,000ಕ್ಕೆ ಇಳಿಸಿತ್ತು.

ಲೋಕ ಅದಾಲತ್‌ ನೀಡಿದ ಈ ತೀರ್ಪಿನ ವಿರುದ್ಧ ರಿಟ್‌ ಅರ್ಜಿ ಸಲ್ಲಿಸಿದ್ದ ಶೈಲಾ ಮತ್ತು ಮಗ, “ಲೋಕ ಅದಾಲತ್ ಮುಂದೆ ಪರಿಹಾರದ ಮೊತ್ತವನ್ನು ಕಡಿಮೆ ಮಾಡುವಾಗ ನಮ್ಮ ಕಡೆಯ ವಕೀಲರು ಇತ್ಯರ್ಥಕ್ಕೆ ಒಪ್ಪಿಕೊಂಡಿದ್ದಾರೆ ಎಂಬುದು ಮತ್ತು ಇದಕ್ಕಾಗಿ ಸಲ್ಲಿಸಲಾದ ಜಂಟಿ ಜ್ಞಾಪಕ ಪತ್ರಕ್ಕೆ ಸಹಿ ಹಾಕಿರುವುದು ನಮ್ಮ ಅರಿವಿಗೆ ಬಂದಿರಲಿಲ್ಲ. ಹಾಗಾಗಿ, ಮಿಶ್ರಿತ ಮೊದಲ ಮೇಲ್ಮನವಿಗೆ (ಎಂಎಫ್‌ಎ) ಸಂಬಂಧಿಸಿದಂತೆ ಲೋಕ ಅದಾಲತ್‌ 2019ರ ಜುಲೈ 13ರಂದು ನೀಡಿರುವ ಆದೇಶವನ್ನು ರದ್ದುಗೊಳಿಸಬೇಕು” ಎಂದು ಕೋರಿದ್ದರು.

“ಉಭಯ ಪಕ್ಷಗಾರರು ಮಾಡಿಕೊಂಡ ಇತ್ಯರ್ಥ ಅಥವಾ ಒಪ್ಪಂದಕ್ಕೆ ತಮ್ಮ ಸಮ್ಮುಖದಲ್ಲಿ ಮಾತ್ರವೇ ತಮ್ಮ ಸಹಿ ಹಾಕುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಲೋಕ ಅದಾಲತ್‌ನ ಸದಸ್ಯರ ಜವಾಬ್ದಾರಿಯಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ಉಭಯ ಪಕ್ಷಗಾರರರು ಜಂಟಿ ಮೆಮೊ ಸಲ್ಲಿಸಿ ಇತ್ಯರ್ಥಗೊಂಡ ವಿಷಯದಲ್ಲಿ ಲೋಕ ಅದಾಲತ್ ತೀರ್ಪು ನೀಡಿದರೆ ಅದು ಅಂತಿಮವಾಗುತ್ತದೆ ಮತ್ತು ಇತ್ಯರ್ಥಕ್ಕೆ ಉಭಯ ಪಕ್ಷಗಾರರು ಬದ್ಧವಾಗಿರಬೇಕಾಗುತ್ತದೆ. ಇದು ಸಿವಿಲ್ ನ್ಯಾಯಾಲಯದ ತೀರ್ಪಿನಂತೆ ಕಾರ್ಯಗತಗೊಳ್ಳುತ್ತದೆ. ಇದರ ವಿರುದ್ಧ ಯಾವುದೇ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಒಂದು ವೇಳೆ ಪಕ್ಷಗಾರರಲ್ಲಿ ಯಾರಾದರೊಬ್ಬರು ಇತ್ಯರ್ಥಗೊಂಡ ಈ ತೀರ್ಪನ್ನು ಪ್ರಶ್ನಿಸಲು ಬಯಸಿದರೆ, ಅದನ್ನು ಸಂವಿಧಾನದ 226 ಮತ್ತು 227ನೇ ವಿಧಿಯ ಅಡಿಯಲ್ಲಿ ಬಹಳ ಸೀಮಿತ ಆಧಾರದಡಿ ಪ್ರಶ್ನಿಸಬಹುದು” ಎಂಬ ಅಂಶಗಳನ್ನು ಮೆಲುಕು ಹಾಕಿದೆ.

Attachment
PDF
Shaila Vs ICICI Lamboard
Preview
Kannada Bar & Bench
kannada.barandbench.com