ಲೋಕ ಅದಾಲತ್‌: ವ್ಯಾಜ್ಯ ಪೂರ್ವ ಪ್ರಕರಣಗಳೂ ಸೇರಿದಂತೆ 25 ಲಕ್ಷಕ್ಕೂ ಅಧಿಕ ಪ್ರಕರಣ ಇತ್ಯರ್ಥ; ₹1,569 ಕೋಟಿ ಪರಿಹಾರ

ಒಟ್ಟು 1,358 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿ, 262 ದಂಪತಿ ಮತ್ತೆ ಒಂದುಗೂಡಿಸಿರುವುದು (ಪುನರ್‌ಮಿಲನ) ಈ ಬಾರಿಯ ಅದಾಲತ್​ನ ಮತ್ತೊಂದು ವಿಶೇಷವಾಗಿದೆ.
ಲೋಕ ಅದಾಲತ್‌: ವ್ಯಾಜ್ಯ ಪೂರ್ವ ಪ್ರಕರಣಗಳೂ ಸೇರಿದಂತೆ 25 ಲಕ್ಷಕ್ಕೂ ಅಧಿಕ ಪ್ರಕರಣ ಇತ್ಯರ್ಥ; ₹1,569 ಕೋಟಿ ಪರಿಹಾರ
Published on

ರಾಜ್ಯದಾದ್ಯಂತ ಕಳೆದ ಶನಿವಾರ (ಡಿಸೆಂಬರ್‌ 9) ನಡೆಸಿದ ರಾಷ್ಟ್ರೀಯ ಲೋಕ್‌ ಅದಾಲತ್​ನಲ್ಲಿ 25 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥ ಪಡಿಸಿದ್ದು, ಒಟ್ಟು ₹1,569 ಕೋಟಿ ಪರಿಹಾರವನ್ನು ಕಕ್ಷಿದಾರರಿಗೆ ಪರಿಹಾರ ರೂಪದಲ್ಲಿ ನೀಡಲಾಗಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ನ್ಯಾಯಮೂರ್ತಿ ಪಿ ಎಸ್‌ ದಿನೇಶ್‌ ಕುಮಾರ್‌ ತಿಳಿಸಿದ್ದಾರೆ.

ಹೈಕೋರ್ಟ್‌ನ ಕಾನೂನು ಸೇವಾ ಪ್ರಾಧಿಕಾರದ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಹೈಕೋರ್ಟ್‌ನ ಮೂರು ಪೀಠಗಳು ಸೇರಿದಂತೆ ರಾಜ್ಯಾದ್ಯಂತ ಒಟ್ಟು 1,022 ಪೀಠಗಳು ಅದಾಲತ್​ ನಡೆಸಿದ್ದವು. ಈ ವೇಳೆ ನ್ಯಾಯಾಲಯದಲ್ಲಿ ಬಾಕಿಯಿದ್ದ 2,24,080 ಪ್ರಕರಣಗಳು ಹಾಗೂ 22,90,263 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 25,14,343 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ವಿವರಿಸಿದರು.

ಅಲ್ಲದೆ, ಒಟ್ಟು 1,358 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿ, 262 ದಂಪತಿ ಮತ್ತೆ ಒಂದುಗೂಡಿಸಿರುವುದು (ಪುನರ್‌ಮಿಲನ) ಈ ಬಾರಿಯ ಅದಾಲತ್​ನ ಮತ್ತೊಂದು ವಿಶೇಷವಾಗಿದೆ ಎಂದರು.

ಅದಲಾತ್‌ಗೆ ಸುಮಾರು 30 ಲಕ್ಷ ಪ್ರಕರಣಗಳನ್ನು ಗುರುತಿಸಲಾಗಿತ್ತು. ಆ ಪೈಕಿ 25 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಉಳಿದ ಅಂದಾಜು ಐದು ಲಕ್ಷ ಪ್ರಕರಣಗಳು ಕಾರಣಾಂತರಗಳಿಂದ ವಿಲೇವಾರಿ ಮಾಡಲಾಗಲಿಲ್ಲ. ಹೈಕೋರ್ಟ್‌ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಡಾ.ಎಚ್‌.ಬಿ. ಪ್ರಭಾಕರ ಶಾಸ್ತ್ರಿ ಅವರು ಬೆಂಗಳೂರು ಪೀಠದಲ್ಲಿ ಲೋಕ್‌ ಅದಾಲತ್‌ನ ನೇತೃತ್ವ ವಹಿಸಿ 1,087 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ. ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ಮತ್ತು ನ್ಯಾಂಯಾಂಗೇತರ ಸಂಧಾನಕಾರ ಶ್ರೀವತ್ಸ ಹೆಗ್ಡೆ ಅವರನ್ನು ಒಳಗೊಂಡ ಪೀಠವು 22 ತಕರಾರು ಅರ್ಜಿಗಳನ್ನು ವಿಲೇವಾರಿ ಮಾಡಿತು ಎಂದು ವಿವರಿಸಿದರು.

10 ಸಾವಿರ ಚೆಕ್‌ಬೌನ್ಸ್‌ ಪ್ರಕರಣ ವಿಲೇವಾರಿ

ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳಲ್ಲಿ 4,031 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, ಒಟ್ಟು ₹209 ಕೋಟಿಗಳನ್ನು ಸಂತ್ರಸ್ತರಿಗೆ ಪರಿಹಾರದ ರೂಪದಲ್ಲಿ ಕೊಡಿಸಲಾಗಿದೆ. 10,513 ಚೆಕ್​ ಬೌನ್ಸ್, 3,125 ವಿಭಾಗ ದಾವೆ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 522 ಭೂಸ್ವಾಧೀನ ಅಮಲ್ಜಾರಿ (ಎಲ್‌ಎಸಿ ಎಕ್ಸಿಕ್ಯೂಷನ್‌) ಪ್ರಕರಣಗಳಲ್ಲಿ ಇತ್ಯರ್ಥ ಪಡಿಸಿದ್ದು, ₹120 ಕೋಟಿಗಳ ಪರಿಹಾರ ವಿತರಣೆ ಮಾಡಲಾಗಿದೆ. 839 ಮೋಟಾರು ವಾಹನ ಅಮಲ್ಜಾರಿ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, ₹51 ಕೋಟಿಗಳ ಪರಿಹಾರ ವಿತರಣೆ ಮಾಡಲಾಗಿದೆ. ಇತರೆ 3,290 ಅಮಲ್ಜಾರಿ ಪ್ರಕರಣಗಳು ಇತ್ಯರ್ಥವಾಗಿದ್ದು, ₹124 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ. 28 ರೇರಾ ಪ್ರಕರಣಗಳ ₹32 ಲಕ್ಷ ಪರಿಹಾರ, 88 ಗ್ರಾಹಕರ ವ್ಯಾಜ್ಯಗಳ ಪ್ರಕರಣಗಳಲ್ಲಿ ₹2.47 ಕೋಟಿ ಪರಿಹಾರ ನೀಡಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಅದಾಲತ್​ನ ವಿಶೇಷ ಪ್ರಕರಣಗಳು

  • ಬೆಂಗಳೂರಿನ 13ನೇ ಲಘು ವ್ಯಾಜ್ಯಗಳ ನ್ಯಾಯಾಲಯ ಮತ್ತು ಬೆಂಗಳೂರಿನ 16ನೇ ಲಘು ವ್ಯಾಜ್ಯಗಳ ನ್ಯಾಯಾಲಯದಲ್ಲಿದ್ದ ಎರಡು ಪ್ರತ್ಯೇಕ ಎಂವಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿ ಕ್ರಮವಾಗಿ 55 ಲಕ್ಷ ರೂಪಾಯಿ ಹಾಗೂ ₹49.65 ಲಕ್ಷ ಪರಿಹಾರ ಕೊಡಿಸಲಾಗಿದೆ.

  • ಬೆಳಗಾವಿಯ ಖಾನಾಪುರ ಕೋರ್ಟ್‌ನಲ್ಲಿದ್ದ ಎಂವಿಸಿ ಅಮಲ್ಜಾರಿ ಪ್ರಕರಣವನ್ನು ಇತ್ಯರ್ಥಪಡಿಸಿ, ₹71,60,566 ಪರಿಹಾರ ಕಲ್ಪಿಸಲಾಗಿದೆ. ಅದೇ ಜಿಲ್ಲೆಯ ಬೈಲಹೊಂಗಲ ಕೋರ್ಟ್‌ನ ಎಂವಿಸಿ ಪ್ರಕರಣವನ್ನು ಪರಿಹರಿಸಿ ₹50 ಲಕ್ಷ ಪರಿಹಾರ ನೀಡಲಾಗಿದೆ.

  • ಬೆಂಗಳೂರು ಲಘು ವ್ಯಾಜ್ಯಗಳ ಕೋರ್ಟ್‌ನಲ್ಲಿ ಎರಡು ಪ್ರತ್ಯೇಕ ಚೆಕ್‌ ಬೌನ್ಸ್‌ ಪ್ರಕರಣವನ್ನು ಇತ್ಯರ್ಥಪಡಿಸಿ ಕ್ರಮವಾಗಿ ₹1.18 ಮತ್ತು ₹1.09 ಕೋಟಿ ಪರಿಹಾರ ನೀಡಲಾಗಿದೆ.

  • ಚಿತ್ರದುರ್ಗದ ಹಿರಿಯೂರು ನ್ಯಾಯಾಲಯದಲ್ಲಿದ್ದ ಪಾಲು ವಿಭಾಗ ಪ್ರಕರಣವೊಂದನ್ನು ₹57.10 ಲಕ್ಷ, ದಕ್ಷಿಣ ಕನ್ನಡ ಜಿಲ್ಲೆಯ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿದ್ದ ವಾಣಿಜ್ಯ ಅಮಲ್ಜಾರಿ ಪ್ರಕರಣವನ್ನು ವಿಲೇವಾರಿ ಮಾಡಿ, ₹63.07 ಲಕ್ಷ ಪರಿಹಾರ ಕೊಡಿಸಲಾಗಿದೆ.

  • ಮಂಡ್ಯ ಜಿಲ್ಲೆಯ ಪ್ರಧಾನ ಸಿವಿಲ್‌ ನ್ಯಾಯಾಲಯದ ಮುಂದಿದ್ದ 18 ವರ್ಷ ಹಳೆಯ ಪಾಲು ವಿಭಾಗ ಪ್ರಕರಣ ಮತ್ತು ಚಾಮರಾಜನಗರದ ಹೆಚ್ಚುವರಿ ಸಿವಿಲ್‌ ಕೋರ್ಟ್‌ನಲ್ಲಿ 11 ವರ್ಷದಿಂದ ಬಾಕಿ ಉಳಿದಿದ್ದ ಪಾಲು ವಿಭಾಗ ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ.

Kannada Bar & Bench
kannada.barandbench.com