ಲೋಕಸಭೆ ಚುನಾವಣೆಯಲ್ಲಿ ಕಲ್ಕತ್ತಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಯ ಅವರು ಪಶ್ಚಿಮ ಬಂಗಾಳದ ತಮ್‌ಲುಕ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.
ಭಾರತೀಯ ಚುನಾವಣಾ ಆಯೋಗದ ಅಧಿಕೃತ ಜಾಲತಾಣದ ಪ್ರಕಾರ, ಮಾಜಿ ನ್ಯಾಯಮೂರ್ತಿ ಒಟ್ಟು 7,65,584 ಮತ ಪಡೆದಿದ್ದು ಟಿಎಂಸಿಯ ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತಲೂ 77,733 ಹೆಚ್ಚು ಮತ ಗಳಿಸಿದ್ದಾರೆ.
ತಮ್‌ಲುಕ್ ಕ್ಷೇತ್ರ ಪುರ್ಬಾ ಮೇದಿನಿಪುರ್ ಜಿಲ್ಲೆಯಲ್ಲಿದೆ. ವಿಶೇಷವೆಂದರೆ, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು 2009 ಮತ್ತು 2014ರಲ್ಲಿ ಟಿಎಂಸಿಯಿಂದ ಎರಡು ಬಾರಿ ಗೆದ್ದಿದ್ದ ಕ್ಷೇತ್ರ ಇದಾಗಿದೆ.
ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಕಳೆದ ಮಾರ್ಚ್‌ನಲ್ಲಿ ಸೇವೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿಯೂ ಅವರು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವನ್ನು ತೀವ್ರವಾಗಿ ಟೀಕಿಸುತ್ತಿದ್ದರು.
ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಿದ್ದ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಅವರು ಕಲ್ಕತ್ತಾ ಹೈಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ಸೌಮೆನ್ ಸೇನ್ ಅವರು ರಾಜ್ಯದ ರಾಜಕೀಯ ಪಕ್ಷವೊಂದರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ವಿಚಾರಣೆ ನಡೆಸುತ್ತಿದ್ದ ಕೆಲ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ತನಗೇ ವರ್ಗಾಯಿಸಿಕೊಂಡಿತ್ತು.
ಮೇ 2018 ರಿಂದ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಗಂಗೋಪಾಧ್ಯಾಯ ಅವರು ನ್ಯಾಯಾಂಗ ಶಿಸ್ತಿನ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೆ ಪದೇ ಪದೇ ಗುರಿಯಾಗಿದ್ದರು.
ಇದಕ್ಕೆ ಮೊದಲು ಕೂಡ ಅವರು ವಿವಾದದ ಕೇಂದ್ರ ಬಿಂದುವಾಗಿದ್ದರು. ವಿಸ್ತೃತ ಪೀಠದ ಆದೇಶಗಳ ನಿರ್ಲಕ್ಷ್ಯ ಮಾತ್ರವಲ್ಲದೆ, ರಾಜಕೀಯ ವಿಷಯಗಳ ಬಗ್ಗೆ ಸುದ್ದಿವಾಹಿನಿಗಳ ಜೊತೆ ಚರ್ಚೆ, ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೇ ಆದೇಶ ನೀಡುವ ಮೂಲಕ ನ್ಯಾಯಾಂಗ ಶಿಸ್ತಿನ ಮಾನದಂಡಗಳನ್ನು ಪದೇ ಪದೇ ಉಲ್ಲಂಘಿಸಿದ ಆರೋಪಗಳು ನ್ಯಾ. ಗಂಗೋಪಾಧ್ಯಾಯ ಅವರ ವಿರುದ್ಧ ಕೇಳಿಬಂದಿದ್ದವು.