ಟಿಎಂಸಿ ಅವಹೇಳನಗೈದ ಚುನಾವಣಾ ಜಾಹೀರಾತು: ಬಿಜೆಪಿಗೆ ವಿಧಿಸಿದ್ದ ನಿರ್ಬಂಧ ತೆರವಿಗೆ ಕಲ್ಕತ್ತಾ ಹೈಕೋರ್ಟ್ ನಕಾರ

ಎಲ್ಲಾ ರಾಜಕೀಯ ಪಕ್ಷಗಳು ಆರೋಗ್ಯಕರ ಚುನಾವಣಾ ಅಭ್ಯಾಸ ರೂಢಿಸಿಕೊಳ್ಳುವುದು ಅತ್ಯಗತ್ಯ ಏಕೆಂದರೆ ತಪ್ಪುದಾರಿಗೆಳೆಯುವ ಚುನಾವಣಾ ಪ್ರಚಾರಗಳಿಗೆ ಮತದಾರರೇ ಅಂತಿಮ ಬಲಿಪಶುಗಳು ಎಂದ ನ್ಯಾಯಾಲಯ.
BJP, TMC and Calcutta HC
BJP, TMC and Calcutta HC
Published on

ಲೋಕಸಭೆ ಚುನಾವಣಾ ಪ್ರಚಾರದ ವೇಳೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವನ್ನು ಗುರಿಯಾಗಿಸಿಕೊಂಡು ʼಅವಹೇಳನಕಾರಿʼ ಇಲ್ಲವೇ ʼನಿಂದನಾತ್ಮಕʼ ಜಾಹೀರಾತು ಪ್ರಕಟಿಸದಂತೆ ಬಿಜೆಪಿಗೆ ನಿರ್ಬಂಧ ವಿಧಿಸಿ ಏಕಸದಸ್ಯ ಪೀಠ ಹೊರಡಿಸಿದ್ದ ಮಧ್ಯಂತರ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಕಲ್ಕತ್ತಾ ಹೈಕೋರ್ಟ್‌ವಿಭಾಗೀಯ ಪೀಠ ಬುಧವಾರ ನಿರಾಕರಿಸಿದೆ [ಭಾರತೀಯ ಜನತಾ ಪಕ್ಷ ಮತ್ತು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ನಡುವಣ ಪ್ರಕರಣ].

ಏಕಸದಸ್ಯ ಪೀಠವನ್ನೇ ಸಂಪರ್ಕಿಸಿ ಆದೇಶ ಹಿಂಪಡೆಯುವಂತೆ ಕೋರುವುದು ಬಿಜೆಪಿಗೆ ಬಿಟ್ಟ ವಿಚಾರ ಎಂದು ನ್ಯಾಯಾಲಯ ತಿಳಿಸಿದೆ.

“ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ಮಧ್ಯಪ್ರವೇಶಿಸಲು ವಿಭಾಗೀಯ ಪೀಠಕ್ಕೆ ಒಲವಿಲ್ಲ ಎಂಬ ವಿಚಾರದಲ್ಲಿ ಸ್ಪಷ್ಟವಾಗಿರೋಣ. ಮೊದಲನೆಯದಾಗಿ ಇದು (ಏಕಸದಸ್ಯ ಪೀಠ ನೀಡಿರುವ ಆದೇಶ) ಮಧ್ಯಂತರ ಆದೇಶ. ಎರಡನೆಯದಾಗಿ ನಿಮ್ಮ (ಬಿಜೆಪಿ) ವಾದ ಆಲಿಸಿಲ್ಲ ಎಂದು ಹೇಳುತ್ತಿದ್ದೀರಿ, ಆದ್ದರಿಂದ ಅಲ್ಲಿಗೇ (ಏಕಸದಸ್ಯ ಪೀಠಕ್ಕೆ) ತೆರಳಿ ಮರುಪರಿಶೀಲನೆಗಾಗಿ ಮನವಿ ಸಲ್ಲಿಸಿ ಆದೇಶ ಪಡೆಯಿರಿ” ಎಂದು ಬಿಜೆಪಿಗೆ ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ವಿಭಾಗೀಯ ಪೀಠ ಸಲಹೆ ನೀಡಿತು.

ಎಲ್ಲಾ ರಾಜಕೀಯ ಪಕ್ಷಗಳು ಆರೋಗ್ಯಕರ ಚುನಾವಣಾ ಅಭ್ಯಾಸ ರೂಢಿಸಿಕೊಳ್ಳುವುದು ಅತ್ಯಗತ್ಯ ಏಕೆಂದರೆ ತಪ್ಪುದಾರಿಗೆಳೆಯುವ ಚುನಾವಣಾ ಪ್ರಚಾರಗಳಿಗೆ ಮತದಾರರೇ ಅಂತಿಮ ಬಲಿಪಶುಗಳು ಎಂದು ನ್ಯಾಯಾಲಯ ಇದೇ ವೇಳೆ ಎಚ್ಚರಿಕೆ ನೀಡಿತು.  

“ಸ್ವಲ್ಪವಾದರೂ ಲಕ್ಷ್ಮಣ ರೇಖೆ ಇರಬೇಕು. ರಾಷ್ಟ್ರೀಯ ಪಕ್ಷವೊಂದು ಗುಡುಗುತ್ತಿದೆ... ಅದು ಮಾಡುತ್ತಿರುವುದನ್ನು ನಾವು ಹೊಗಳುತ್ತಿಲ್ಲ. ಜನಸಾಮಾನ್ಯರ ಮೇಲೆ ಏನೆಲ್ಲಾ ಪರಿಣಾಮ ಬೀರಲಿದೆ ಎಂದು ಊಹಿಸಿಕೊಳ್ಳಿ... ನೀವಿಬ್ಬರೂ (ಬಿಜೆಪಿ- ಟಿಎಂಸಿ) ಪರಸ್ಪರ ಜಗಳವಾಡುತ್ತೀರಿ.  ಅಂತಿಮ ಬಲಿಪಶು ಬಡ ಮತದಾರ- ಅವನು ಸರಿ ದಾರಿಯಲ್ಲೇ ಸಾಗಬಹುದು ಇಲ್ಲವೇ ದಿಕ್ಕುತಪ್ಪಬಹುದು. ಎರಡೂ ಕಡೆಯವರು ಅನುಸರಿಸಬಹುದಾದ ಉತ್ತಮ ಅಭ್ಯಾಸವೊಂದು ಇರಬೇಕು” ಎಂದ ಪೀಠ ಬಿಜೆಪಿ ಅರ್ಜಿಯನ್ನು ವಜಾಗೊಳಿಸಿತು.

ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷವನ್ನು ಗುರಿಯಾಗಿಸಿಕೊಂಡ ಬಿಜೆಪಿಯ ಜಾಹೀರಾತುಗಳನ್ನು ಪ್ರಶ್ನಿಸಿ ಟಿಎಂಸಿ ಸಲ್ಲಿಸಿದ್ದ ದೂರುಗಳನ್ನುಇತ್ಯರ್ಥಗೊಳಿಸಲು ಭಾರತೀಯ ಚುನಾವಣಾ ಆಯೋಗ ಸಂಪೂರ್ಣ ವಿಫಲವಾಗಿದೆ ಎಂದು ಕಳೆದ ಸೋಮವಾರ (ಮೇ 20) ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ ಅವರಿದ್ದ ಏಕಸದಸ್ಯ ಪೀಠದ ಆದೇಶ ಹೇಳಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ಮೇಲ್ಮನವಿ ಸಲ್ಲಿಸಿತ್ತು.

Kannada Bar & Bench
kannada.barandbench.com