ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಉಮೇದುವಾರಿಕೆ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿ ಸಚಿನ್ ದತ್ತ ಅವರು ಅರ್ಜಿಯನ್ನು ದುರುದ್ದೇಶದಿಂದ ಕೂಡಿದೆ ಎಂದು ವಜಾಗೊಳಿಸಿದರು.
ಮೋದಿ ಅವರು ಸಂವಿಧಾನಕ್ಕೆ ನಿಜವಾದ ನಂಬಿಕೆ ಮತ್ತು ನಿಷ್ಠೆ ತೋರುವುದಾಗಿ ಸುಳ್ಳು ಪ್ರಮಾಣ ಮಾಡಿದ್ದಾರೆ ಎಂದು ಆರೋಪಿಸಿ ಪೈಲಟ್ ಕ್ಯಾಪ್ಟನ್ ದೀಪಕ್ ಕುಮಾರ್ ಅವರು ಅರ್ಜಿ ಸಲ್ಲಿಸಿದ್ದರು.
"2024 ರ ಸಾರ್ವತ್ರಿಕ ಚುನಾವಣೆಯಲ್ಲಿ ವಾರಾಣಸಿ ಕ್ಷೇತ್ರದಿಂದ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿ ಅವರು ಸಂವಿಧಾನದ ಮೇಲೆ ನಿಜವಾದ ನಂಬಿಕೆ ಮತ್ತು ನಿಷ್ಠೆಯನ್ನು ಹೊಂದಿರುವುದಾಗಿ ಚುನಾವಣಾ ಅಧಿಕಾರಿಯ ಮುಂದೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಸಂಚೊಂದರಲ್ಲಿ ಮೋದಿ ಭಾಗಿಯಾಗಿದ್ದು ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿದ್ದಾರೆ. ತನ್ನ ನಿಯಂತ್ರಣದಲ್ಲಿದ್ದ ವಿಮಾನವನ್ನು ಪತನಗೊಳಿಸಿ ಕೊಲ್ಲಲು ಮೋದಿ ನೇತೃತ್ವದಲ್ಲಿ ಯತ್ನ ನಡೆದಿತ್ತು ಎಂದು ಅವರು ದೂರಿದ್ದರು.
ತನ್ನ ಹತೋಟಿಯಲ್ಲಿದ್ದ AI 459 ವಿಮಾನವನ್ನು 08.07.2018ರಂದು ಅಪಘಾತಕ್ಕೀಡುಮಾಡುವ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಅಸ್ಥಿರಗೊಳಿಸಲು ಮೋದಿ ಮತ್ತವರ ಸಹಚರರು ಮುಂದಾಗಿದ್ದರು ಎಂದು ಅವರು ಅರ್ಜಿಯಲ್ಲಿ ವಿವರಿಸಿದ್ದರು.
ಮೋದಿಯವರು ಸುಳ್ಳು ಪ್ರತಿಜ್ಞಾ ವಿಧಿಯನ್ನು ಕೈಗೊಂಡಿರುವುದರ ವಿರುದ್ಧ ಪರಿಣಾಮಕಾರಿಯಾಗಿ ಮತ್ತು ಕಾಲಮಿತಿಯಲ್ಲಿ ತನಿಖೆ ನಡೆಸಬೇಕು. ಆರೋಪಗಳು ನಿಜವೆಂದು ಕಂಡುಬಂದರೆ, ಅವರು ಯಾವುದೇ ಸಾರ್ವಜನಿಕ ಹುದ್ದೆ ಸ್ವೀಕರಿಸದಂತೆ ನಿಷೇಧಿಸಬೇಕು ಎಂದು ಕುಮಾರ್ ಒತ್ತಾಯಿಸಿದ್ದರು.