ಲೋಕಸಭಾ ಚುನಾವಣೆ: ಮತದಾನ ಮಾಡಲು ಧಾರವಾಡಕ್ಕೆ ಪ್ರವೇಶಿಸಲು ಶಾಸಕ ವಿನಯ್‌ ಕುಲಕರ್ಣಿಗೆ ಹೈಕೋರ್ಟ್‌ ಅನುಮತಿ

“ವಿನಯ್‌ ಕುಲಕರ್ಣಿ ಮತ ಚಲಾಯಿಸಿ ಮತದಾನ ಕೇಂದ್ರದಿಂದ ತೆರಳಬೇಕು. ಧಾರವಾಡ ಜಿಲ್ಲೆ ಬಿಟ್ಟು ಹೊರಗೆ ಹೋಗಬೇಕು. ಈ ವೇಳೆ ಯಾವುದೇ ಸಮಸ್ಯೆ ಸೃಷ್ಟಿಸಬಾರದು” ಎಂದು ಮೌಖಿಕವಾಗಿ ವಿನಯ ಕುಲಕರ್ಣಿಗೆ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದ್ದಾರೆ.
Vinay Kulkarni and Karnataka HC
Vinay Kulkarni and Karnataka HC

ಇಂದು ನಡೆಯುತ್ತಿರುವ ಧಾರವಾಡ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾಯಿಸುವುದಕ್ಕೆ ಧಾರವಾಡ ಪ್ರವೇಶಿಸಲು ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿಯಾದ ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಕರ್ನಾಟಕ ಹೈಕೋರ್ಟ್‌ ಅನುಮತಿಸಿದೆ. ಮತದಾನಕ್ಕೆ ಎರಡು ತಾಸು ಬಾಕಿ ಇದ್ದು, ಅಷ್ಟರಲ್ಲಿ ವಿನಯ್‌ ತಮ್ಮ ಹಕ್ಕು ಚಲಾಯಿಸಿ ಜಿಲ್ಲೆಯನ್ನು ತೊರೆಯಬೇಕಿದೆ.

ವಿನಯ ಕುಲಕರ್ಣಿ ನೇರವಾಗಿ ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಿ ನಂತರ ನೇರವಾಗಿ ಧಾರವಾಡ ಜಿಲ್ಲೆ ಬಿಟ್ಟು ಹೋಗಬೇಕು ಎಂದು ನ್ಯಾಯಮೂರ್ತಿ ಎಂ ಜಿ ಉಮಾ ಅವರ ರಜಾಕಾಲೀನ ಏಕಸದಸ್ಯ ಪೀಠ ಆದೇಶಿಸಿದೆ.

“ವಿನಯ್‌ ಕುಲಕರ್ಣಿ ಮತ ಚಲಾಯಿಸಿ ಮತದಾನ ಕೇಂದ್ರದಿಂದ ತೆರಳಬೇಕು. ಧಾರವಾಡ ಜಿಲ್ಲೆ ಬಿಟ್ಟು ಹೊರಗೆ ಹೋಗಬೇಕು. ಈ ವೇಳೆ ಯಾವುದೇ ಸಮಸ್ಯೆ ಸೃಷ್ಟಿಸಬಾರದು” ಎಂದು ಮೌಖಿಕವಾಗಿ ವಿನಯ ಕುಲಕರ್ಣಿಗೆ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದ್ದಾರೆ.

ಧಾರವಾಡ ಜಿಲ್ಲಾ‌ ಪಂಚಾಯತ್‌ನ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ‌ ಆರೋಪ‌ದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿದ್ದ ವಿನಯ ಕುಲಕರ್ಣಿಗೆ ಸುಪ್ರೀ ಕೋರ್ಟ್ ಜಾಮೀನು ನೀಡಿತ್ತು. ಧಾರವಾಡ ಜಿಲ್ಲೆ ಪ್ರವೇಶ ಮಾಡಬಾರದು ಎಂಬ ಷರತ್ತನ್ನು ಸರ್ವೋಚ್ಚ ನ್ಯಾಯಾಲಯ ವಿಧಿಸಿದೆ. ಮತದಾನ ಮಾಡಲು ಧಾರವಾಡ ಜಿಲ್ಲೆ ಪ್ರವೇಶ ಮಾಡಲು ಅನುಮತಿ ನೀಡುವಂತೆ ವಿನಯ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ತಿರಸ್ಕರಿಸಿತ್ತು.‌ ಹೀಗಾಗಿ, ಹೈಕೋರ್ಟ್ ಅವರು ಮೊರೆ ಹೋಗಿದ್ದರು. 

Kannada Bar & Bench
kannada.barandbench.com