
ಕಾನೂನು ವೃತ್ತಿಪರರ ಕಾಯಿದೆ-1879ಅನ್ನು ರದ್ದುಗೊಳಿಸಿ 1961ರ ವಕೀಲರ ಕಾಯಿದೆಗೆ ತಿದ್ದುಪಡಿ ಮಾಡಲು ವಕೀಲರ (ತಿದ್ದುಪಡಿ) ಮಸೂದೆ- 2023ನ್ನು ಲೋಕಸಭೆ ಸೋಮವಾರ ಅಂಗೀಕರಿಸಿತು.
ಮಸೂದೆಯನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಅರ್ಜುನ್ ರಾಮ್ ಮೇಘವಾಲ್ ಅವರು ಕಳೆದ ಆಗಸ್ಟ್ 1ರಂದು ರಾಜ್ಯಸಭೆಯಲ್ಲಿ ಮಂಡಿಸಿದ್ದರು .
ಉಪಯುಕ್ತತೆ ಕಳೆದುಕೊಂಡಿರುವ ʼಎಲ್ಲಾ ಹಳೆಯ ಕಾನೂನು ಅಥವಾ ಸ್ವಾತಂತ್ರ್ಯ ಪೂರ್ವ ಕಾಯಿದೆಗಳನ್ನುʼ ರದ್ದುಗೊಳಿಸುವ ಕೇಂದ್ರ ಸರ್ಕಾರದ ಯತ್ನದ ಭಾಗವಾಗಿದೆ ಈ ಮಸೂದೆ.
ಇದು ವಕೀಲರ ಕಾಯಿದೆ- 1961 ರ ಮೂಲಕ ಮಾತ್ರ ಕಾನೂನು ವೃತ್ತಿಯನ್ನು ನಿಯಂತ್ರಿಸಲು ಪ್ರಸ್ತಾಪಿಸಲಿದ್ದು ಕಾನೂನು ವೃತ್ತಿಪರರ ಕಾಯಿದೆ- 1879 ಅನ್ನು ರದ್ದುಗೊಳಿಸುತ್ತದೆ, ಆದರೆ ನ್ಯಾಯಾಲಯಗಳಲ್ಲಿ ಸೇವಕರೊಂದಿಗೆ (touts) ವ್ಯವಹರಿಸುವ ನಿಬಂಧನೆಯನ್ನು ಉಳಿಸಿಕೊಂಡಿದೆ.
ಜೊತೆಗೆ ಕಾನೂನು ಪುಸ್ತಕಗಳಲ್ಲಿ "ಅನಗತ್ಯ ಕಾಯಿದೆಗಳ" ಸಂಖ್ಯೆ ಕಡಿಮೆ ಮಾಡುವ ಸಲುವಾಗಿ ವಕೀಲರ ಕಾಯಿದೆ- 1961ರಲ್ಲಿ ಕಾನೂನು ವೃತ್ತಿಪರರ ಕಾಯಿದೆ- 1879ರ ಸೆಕ್ಷನ್ 36 (ನ್ಯಾಯಾಲಯಗಳಲ್ಲಿ ಸೇವಕರ ಪಟ್ಟಿಯನ್ನು ರೂಪಿಸುವ ಮತ್ತು ಪ್ರಕಟಿಸುವ ಅಧಿಕಾರ) ನಿಯಮಾವಳಿಗಳನ್ನು ಅಡಕಗೊಳಿಸಲಾಗಿದೆ.