
ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ 2025ಕ್ಕೆ ಲೋಕಸಭೆ ಗುರುವಾರ ಒಪ್ಪಿಗೆ ನೀಡಿದೆ.
ಬುಧವಾರ ಮಸೂದೆಯನ್ನು ಸದನದಲ್ಲಿ ಮಂಡಿಸಲಾಗಿತ್ತು. 12 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸುದೀರ್ಘ ಚರ್ಚೆಯ ನಂತರ ಏಪ್ರಿಲ್ 3 ರ ಗುರುವಾರ ನಸುಕಿನಲ್ಲಿ ಮಸೂದೆಯನ್ನು ಅಂಗೀಕರಿಸಲಾಯಿತು.
288 ಸಂಸತ್ ಸದಸ್ಯರು (ಸಂಸದರು) ಮಸೂದೆಯ ಪರವಾಗಿ ಮತ ಚಲಾಯಿಸಿದರೆ, 232 ಸಂಸದರು ಮಸೂದೆಯನ್ನು ವಿರೋಧಿಸಿದರು.
ಮಸೂದೆ ಮುಸ್ಲಿಮರ ಧಾರ್ಮಿಕ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ. ಅದು ಆಸ್ತಿ ನಿರ್ವಹಣೆಗೆ ಮಾತ್ರ ಸಂಬಂಧಿಸಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಕಿರೆನ್ ರಿಜಿಜು ತಮ್ಮ ಭಾಷಣದಲ್ಲಿ ತಿಳಿಸಿದರು. "ನಾವು ಈ ಕಾಯಿದೆ ಜಾರಿಗೆ ತರದಿದ್ದರೆ, ಸಂಸತ್ತಿನ ಕಟ್ಟಡವನ್ನು ಸಹ ವಕ್ಫ್ ಆಸ್ತಿ ಎಂದು ಹೇಳಿಕೊಳ್ಳಲಾಗುತ್ತಿತ್ತು" ಎಂದು ಅವರು ಹೇಳಿದರು.
ಪ್ರಸ್ತಾವಿತ ತಿದ್ದುಪಡಿ ಮುಸ್ಲಿಮರ ಧಾರ್ಮಿಕ ವ್ಯವಹಾರಗಳು ಅಥವಾ ಅವರು ಅರ್ಪಿಸಿದ ಆಸ್ತಿಯಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂಬ ದೊಡ್ಡ ತಪ್ಪು ಕಲ್ಪನೆ ಇದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. "ದೇಶದಲ್ಲಿರುವ ಮುಸ್ಲಿಮರಿಗೆ ನಾನು ಹೇಳಲು ಬಯಸುತ್ತೇನೆ, ಒಬ್ಬ ಮುಸ್ಲಿಮೇತರನೂ ನಿಮ್ಮ ವಕ್ಫ್ ಆಸ್ತಿಯ ಮಾಲೀಕನಾಗುವುದಿಲ್ಲ" ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ದೇಶಕ್ಕೆ ಮಾಡಿರುವ ಸಾಂವಿಧಾನಿಕ ವಂಚನೆಯನ್ನು ಈ ಮಸೂದೆ ರದ್ದುಗೊಳಿಸುತ್ತದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಸಂಸದ ಅಸಾದುದ್ದೀನ್ ಓವೈಸಿ ಅವರು ಮಸೂದೆಯ ಪ್ರತಿಯನ್ನು ಹರಿದು ಹಾಕಿದರು. " ವಕ್ಫ್ ಸಮಿತಿ ಮತ್ತು ಮಂಡಳಿಗಳು ಧರ್ಮ ತಟಸ್ಥವಾಗಿರಬೇಕು ಎಂದು ಹೇಳುವ , ನೀವು ನಿಮ್ಮ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡುತ್ತೀರಿ. ಇದು ಯಾವ ರೀತಿಯ ಪ್ರಜಾಪ್ರಭುತ್ವದ ಅಣಕ?" ಎಂದು ಅವರು ಪ್ರಶ್ನಿಸಿದರು.
ಮಸೂದೆಯನ್ನು ಖಂಡಿಸಿದ ವಿರೋಧ ಪಕ್ಷದ ಸದಸ್ಯರಲ್ಲಿ ಅಸ್ಸಾಂನ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಕೂಡ ಒಬ್ಬರು. ಅವರು ಇದನ್ನು "ಸಂವಿಧಾನದ ಮೂಲ ರಚನೆಯ ಮೇಲಿನ ದಾಳಿ" ಎಂದು ಬಣ್ಣಿಸಿದರು.
ಪಶ್ಚಿಮ ಬಂಗಾಳದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಸಂವಿಧಾನದ 26 ನೇ ವಿಧಿಯ ಅಡಿಯಲ್ಲಿ ಮುಸ್ಲಿಮರು ತಮ್ಮ ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವಾದಿಸಿದರು.
ಬಿಜೆಪಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಆರೋಪಿಸಿದರು. "ರಾಜಕೀಯ ಲಾಭಕ್ಕಾಗಿ ನೀವು ಈ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿರುವುದನ್ನು ಜಗತ್ತು ಗಮನಿಸುತ್ತಿದೆ" ಎಂದು ಅವರು ಹೇಳಿದರು.
ಕೇರಳದ ಕ್ರಾಂತಿಕಾರಿ ಸಮಾಜವಾದಿ ಪಕ್ಷದ (ಆರ್‌ಎಸ್‌ಪಿ) ಸಂಸದ ಎನ್‌ಕೆ ಪ್ರೇಮಚಂದ್ರನ್ " ನೀವು ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರ ಸದಸ್ಯರನ್ನು ಕಡ್ಡಾಯಗೊಳಿಸಿದ್ದೀರಿ. ದೇವಾಲಯಗಳ ಮಂಡಳಿಗಳಿಗೆ ಹಾಗೆ ಮಾಡುವಿರಾ? " ಎಂದು ಪ್ರಶ್ನಿಸಿದರು.
ಜಮ್ಮು ಮತ್ತು ಕಾಶ್ಮೀರದ ಸ್ವತಂತ್ರ ಸಂಸದ ಅಬ್ದುಲ್ ರಶೀದ್ ಶೇಖ್ ಇದು ಸಂಖ್ಯೆಗಳ ಆಟ ಎಂದು ಖಂಡಿಸಿದರು. " (ಬಿಜೆಪಿ) ಬಹುಮತ ಹೊಂದಿರುವುದರಿಂದ ಮಸೂದೆ ಅಂಗೀಕಾರವಾಗುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ ... ಈ ದೇಶದ ಮುಸ್ಲಿಮರಿಗೆ ನಾನು ಹೇಳಲು ಬಯಸುತ್ತೇನೆ, ಇದು ಅವರಿಗೆ ಸಂಖ್ಯಾ ಆಟವಾಗಿದ್ದು ನೀವು ಅವುಗಳ ನಡುವೆ ಸಿಲುಕಿಕೊಂಡಿದ್ದೀರಿ" ಎಂದರು. ಕೇರಳ ಕಾಂಗ್ರೆಸ್ ಸಂಸದ ವಕೀಲ ಕೆ. ಫ್ರಾನ್ಸಿಸ್ ಜಾರ್ಜ್ ಕೂಡ ವಿರೋಧ ವ್ಯಕ್ತಪಡಿಸಿದರು.