Justice K Somashekar and KSLSA
Justice K Somashekar and KSLSA

[ಲೋಕ ಅದಾಲತ್‌] 29 ಲಕ್ಷ ಪ್ರಕರಣ ಸಂಧಾನದ ಮೂಲಕ ಇತ್ಯರ್ಥ; ₹2,541 ಕೋಟಿ ಪರಿಹಾರ ವಿತರಣೆ: ನ್ಯಾ. ಸೋಮಶೇಖರ್‌

ಲೋಕ ಅದಾಲತ್‌ನಲ್ಲಿ ಒಟ್ಟು 29,00,312 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಅವುಗಳ ಪೈಕಿ ನ್ಯಾಯಾಲಯದಲ್ಲಿ ಬಾಕಿಯಿದ್ದ 2,52,277 ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ 26,48,035 ಪ್ರಕರಣಗಳು ಸೇರಿವೆ ಎಂದು ತಿಳಿಸಿದ ಪ್ರಾಧಿಕಾರ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಕಳೆದ ಶನಿವಾರ (ಮಾರ್ಚ್‌ 16) ರಾಜ್ಯದಾದ್ಯಂತ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 29 ಲಕ್ಷ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿ, ₹ 2,541 ಕೋಟಿ ಪರಿಹಾರ ಕೊಡಿಸಲಾಗಿದೆ ಎಂದು ಕೆಎಸ್‌ಎಲ್‌ಎಸ್‌ಎ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಕೆ ಸೋಮಶೇಖರ್‌ ತಿಳಿಸಿದ್ದಾರೆ.

ಹೈಕೋರ್ಟ್‌ ಕಟ್ಟಡದಲ್ಲಿರುವ ಕೆಎಸ್‌ಎಲ್‌ಎಸ್‌ಎ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ರಾಷ್ಟ್ರೀಯ ಲೋಕ ಅದಾಲತ್‌ಗೆ 3,76,577 ಪ್ರಕರಣಗಳು ಶಿಫಾರಸ್ಸು ಆಗಿದ್ದವು. ನ್ಯಾಯಾಲಯದಲ್ಲಿ ಬಾಕಿಯಿದ್ದ 2,52,277 ಮತ್ತು ವ್ಯಾಜ್ಯ ಪೂರ್ವ 26,48,035 ಸೇರಿದಂತೆ ಒಟ್ಟು 29,00,312 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಹೈಕೋರ್ಟ್‌ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳು ಸೇರಿ ರಾಜ್ಯದಾದ್ಯಂತ ಒಟ್ಟು 1,041 ಪೀಠಗಳು ಅದಾಲತ್‌ನಲ್ಲಿ ಕಾರ್ಯ ನಿರ್ವಹಿಸಿದ್ದವು ಎಂದು ಮಾಹಿತಿ ನೀಡಿದರು.

771 ವೈವಾಹಿಕ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿ, 281 ದಂಪತಿಗಳನ್ನು ಜೊತೆಗೂಡಿಸಲಾಗಿದೆ. 4,853 ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣಗಳನ್ನು ಇತ್ಯರ್ಥಪಡಿಸಿ ₹ 249 ಕೋಟಿ ಪರಿಹಾರ ಕೊಡಿಸಲಾಗಿದೆ. ಹಾಗೆಯೇ, 12,563 ಚೆಕ್‌ ಬೌನ್ಸ್‌, 3,689 ವಿಭಾಗ ದಾವೆ ವಿಲೇವಾರಿ ಮಾಡಲಾಗಿದೆ. 281 ಭೂ ಸ್ವಾಧೀನ ಪ್ರಕರಣಗಳನ್ನು ಇತ್ಯರ್ಥಪಡಿಸಿ, ₹ 114 ಕೋಟಿ ಪರಿಹಾರ ಕಲ್ಪಿಸಲಾಗಿದೆ ಎಂದು ವಿವರಿಸಿದರು.

967 ಮೋಟಾರು ಅಪಘಾತ ಪ್ರಕರಣಗಳನ್ನು ಇತ್ಯರ್ಥಪಡಿಸಿ, ₹ 62 ಕೋಟಿ ಪರಿಹಾರ ಕೊಡಿಸಲಾಗಿದೆ. 4,435 ಇತರೆ ಪ್ರಕರಣಗಳನ್ನು ವಿಲೇವಾರಿ ಮಾಡಿ ₹ 181 ಕೋಟಿ, 49 ರೇರಾ ಕೇಸುಗಳನ್ನು ವಿಲೇವಾರಿ ಮಾಡಿ ₹ 1.32 ಕೋಟಿ ಮತ್ತು 113 ಗ್ರಾಹಕರ ವ್ಯಾಜ್ಯಗಳ ಪ್ರಕರಣಗಳನ್ನು ಇತ್ಯರ್ಥಪಡಿಸಿ, ₹ 3.23 ಕೋಟಿ ಪರಿಹಾರ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಧಾರವಾಡ ಪ್ರಧಾನ ಹಿರಿಯ ನ್ಯಾಯಾಧೀಶರ ನ್ಯಾಯಾಲಯದಲ್ಲಿದ್ದ ಮೂಲದಾವೆ ಪ್ರಕರಣವನ್ನು ₹ 6 ಕೋಟಿ ಮೊತ್ತಕ್ಕೆ ಇತ್ಯರ್ಥಪಡಿಸಲಾಗಿದೆ. ಮಂಗಳೂರಿನ ಅಪರ ಜಿಲ್ಲಾ ನ್ಯಾಯಾಲಯವು ವಾಣಿಜ್ಯ ಪ್ರಕರಣವೊಂದನ್ನು ₹ 2.14 ಕೋಟಿಗೆ, ಧಾರವಾಡ ಪ್ರಧಾನ ಹಿರಿಯ ಸಿವಿಲ್‌ ಮತ್ತು ಸಿಜೆಎಂ ನ್ಯಾಯಾಲಯವು ₹ 2 ಕೋಟಿ ಮೊತ್ತಕ್ಕೆ ಎಂವಿಸಿ ಪ್ರಕರಣವನ್ನು ಇತ್ಯರ್ಥಪಡಿಸಿದೆ. ಮಂಡ್ಯ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಲಯವು ಶ್ರೀರಂಗಪಟ್ಟಣದ ಎಂವಿಸಿ ಪ್ರಕರಣವೊಂದನ್ನು ₹ 50 ಲಕ್ಷಕ್ಕೆ ಇತ್ಯರ್ಥ ಮಾಡಿದೆ ಎಂದು ಹೇಳಿದರು.

ಧಾರವಾಡದ ಕೈಗಾರಿಕಾ ನ್ಯಾಯಾಲಯವು ಹುಬ್ಬಳ್ಳಿಯ ಟಾಟಾ ಮಾರ್ಕೋಪೋಲೋ ಕಂಪೆನಿಯ 200 ಕಾರ್ಮಿಕರನ್ನು ಪುನಾ ಸೇವೆಗೆ ತೆಗೆದುಕೊಳ್ಳಲು ಆದೇಶಿಸಿದೆ. ಚಿಕ್ಕಮಗಳೂರಿನ ಮೂಡಿಗೆರೆಯ ಹಿರಿಯ ಸಿವಿಲ್‌ ಮತ್ತು ಜೆಎಫ್‌ಎಂಸಿ ಕೋರ್ಟ್‌ನಲ್ಲಿದ್ದ 20 ವರ್ಷದ ಹಳೆಯ ಪ್ರಕರಣವನ್ನು, ಮಂಡ್ಯ ಪ್ರಧಾನ ಸಿವಿಲ್‌ ನ್ಯಾಯಾಲಯ, ಶ್ರೀರಂಗಪಟ್ಟಣದ ಹತ್ತು ವರ್ಷ ಹಳೆಯ ಹಾಗೂ ಸಿಜೆ-ಜೆಎಂಎಫ್‌ಸಿ ನ್ಯಾಯಾಲಯವು ಪಾಂಡವಪುರದ ಹತ್ತು ವರ್ಷದ ಹಳೆಯ ವಿಭಾಗ ಪ್ರಕರಣವನ್ನು ಇತ್ಯರ್ಥಪಡಿಸಿದೆ ಎಂದು ವಿವರಿಸಿದರು.

ರಾಜ್ಯದ ಎಲ್ಲಾ ಕೋರ್ಟ್‌ನಲ್ಲಿ 2024ರ ಮಾರ್ಚ್‌ 1ರ ವೇಳೆಗೆ ಒಟ್ಟು 20,43,999 ಪ್ರಕರಣಗಳು ವಿಲೇವಾರಿಗೆ ಬಾಕಿಯಿವೆ. ಅವುಗಳ ಪೈಕಿ ಹೈಕೋರ್ಟ್‌ನಲ್ಲಿ 2,82,870 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿದೆ. ಬೆಂಗಳೂರು ಪೀಠದಲ್ಲಿ 1.75 ಲಕ್ಷ, ಧಾರವಾಡ ಪೀಠದಲ್ಲಿ 61,630 ಮತ್ತು ಕಲಬುರಗಿ ಪೀಠದಲ್ಲಿ 26,199 ಪ್ರಕರಣಗಳು ವಿಲೇವಾರಿ ಬಾಕಿಯಿವೆ ಎಂದು ತಿಳಿಸಿದರು.

Related Stories

No stories found.
Kannada Bar & Bench
kannada.barandbench.com